Advertisement

ದೇವರಿಗಾಗಿ ವಿಮಾನ ಬಂದ್‌

06:35 AM Oct 28, 2017 | Team Udayavani |

ತಿರುವನಂತಪುರ: ದೈವೀ ಆಚರಣೆ ಉದ್ದೇಶಕ್ಕೆ ವಿಮಾನ ನಿಲ್ದಾಣವನ್ನೇ ಐದು ಗಂಟೆಗಳ ಕಾಲ ಸ್ಥಗಿತಗೊಳಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಇಂಥದ್ದೊಂದು ವಿಶಿಷ್ಟ ಕ್ರಮ  ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇಗುಲದಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ದಶಕಗಳಿಂ ದಲೂ ಈ ದೈವಿ ಆಚರಣೆಗಾಗಿ ತಿರುವನಂತ ಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗುತ್ತದೆ. ಶನಿವಾರ ನಡೆಯಲಿರುವ ಹಬ್ಬಕ್ಕೆ ಈಗಾಗಲೇ ತಯಾರಿ ನಡೆಸಲಾಗಿದ್ದು, ವಿಮಾನಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ.

Advertisement

10 ದಿನಗಳವರೆಗೆ ನಡೆಯುವ ಆರಟ್ಟು ಮತ್ತು ಅಲ್ಪಶಿ ಹಬ್ಬದ ಕೊನೆಯ ದಿನ ದೇಗುಲದದಿಂದ ಸ್ವಲ್ಪವೇ ದೂರದಲ್ಲಿರುವ ಶಂಗುಮುಗಮ್‌ ಸಮುದ್ರತೀರಕ್ಕೆ ಪಲ್ಲಕ್ಕಿಯ ಮೇಲೆ ದೇವರನ್ನು ಹೊತ್ತೂಯ್ಯಲಾಗುತ್ತದೆ. ದೀವಿಗೆಗಳನ್ನು ಹಿಡಿದು ಭಕ್ತರು ವಿಮಾನ ನಿಲ್ದಾಣವನ್ನು ದಾಟಿ ಸಮುದ್ರತೀರಕ್ಕೆ ಸಾಗು ತ್ತಾರೆ. ಪಲ್ಲಕ್ಕಿ, ಆನೆಗಳು, ಪೊಲೀಸ್‌ ಬ್ಯಾಂಡ್‌ ಹಾಗೂ ಸಶಸ್ತ್ರಧಾರಿಗಳನ್ನು ಒಳಗೊಂಡ ಬೃಹತ್‌ ಸಮೂಹವು ಯಾತ್ರೆ ಸಾಗುವುದು ಸುತ್ತಲಿನ ಜನರಿಗೆ ಕಣ್ಣಿಗೆ ಹಬ್ಬದಂತಿರುತ್ತದೆ.1932ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕ್ಕೂ ಮುಂಚಿನಿಂದಲೂ ಯಾತ್ರೆ ನಡೆಯುತ್ತಿದೆ. ಶಂಗುಮುಗಮ್‌ ಸಮುದ್ರ ತೀರದಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ವಾಪಸಾಗುತ್ತಾರೆ. ಈ ಅವಧಿಯವರೆಗೂ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗುತ್ತದೆ.

ಯಾತ್ರೆ ಸಾಗುವಾಗ ರನ್‌ವೇಯನ್ನು ಸಿಐಎಸ್‌ಎಫ್ ಕಾವಲು ಕಾಯುತ್ತದೆ. ಈ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಮೊದಲೇ ಪಾಸ್‌ ನೀಡಲಾಗಿರುತ್ತದೆ. ಪಾಸ್‌ ಇದ್ದವರಿಗೆ ಮಾತ್ರ ವಿಮಾನ ನಿಲ್ದಾಣದೊಳಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಸಂಜೆ 4 ಗಂಟೆಗೆ ಆರಂಭವಾಗುವ ಈ ಯಾತ್ರೆ ರಾತ್ರಿ 9 ಗಂಟೆಗೆ ಮುಕ್ತಾಯವಾಗುತ್ತದೆ. 8.45ಕ್ಕೆ ಸರಿಯಾಗಿ ವಿಮಾನ ನಿಲ್ದಾಣದಿಂದ ಭಕ್ತರನ್ನು ತೆರವುಗೊಳಿಸಲಾಗುತ್ತದೆ. ವಿಮಾನ ನಿಲ್ದಾಣ ಸ್ಥಗಿತದ ಬಗ್ಗೆ ಹಲವು ವಾರಗಳಿಗೂ ಮೊದಲೇ ನೋಟಿಸ್‌ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next