Advertisement

ಶ್ರೀ ಲಕ್ಷ್ಮೀ ನರಸಿಂಹ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಸಂಪನ್ನ

07:32 PM Feb 07, 2022 | Team Udayavani |

ಶಿರಸಿ :  ಕಳೆದ ನಾಲ್ಕು ದಿನಗಳಿಂದ ಭಕ್ತಿಯಿಂದ ನಡೆದ ತಾಲೂಕಿನ ಬರೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಸೋಮವಾರ ಗ್ರಾಮಸ್ಥರಿಗೆ, ಭಕ್ತರಿಗೆ ಮಂತ್ರಾಕ್ಷತೆ ನೀಡುವ ಮೂಲಕ ಸಂಪನ್ನಗೊಂಡಿತು.

Advertisement

ಕೇವಲ 9 ತಿಂಗಳಲ್ಲಿ ನಿರ್ಮಾಣಗೊಂಡಿರುವ ದೇವಸ್ಥಾನದ ನಾಲ್ಕು ದಿನಗಳ ಪುನರ್ ಪ್ರತಿಷ್ಠೆ ಕಾರ್ಯಕ್ರಮವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡು ವೈದಿಕರು ಮಂತ್ರಾಕ್ಷತೆ ನೀಡುವುದರೊಂದಿಗೆ ಮುಕ್ತಾಯಗೊಂಡಿತು.

ಅಂತಿಮ ದಿನದ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂತ್ರಾಕ್ಷತೆ ನೀಡಿ ಮಾತನಾಡಿದ ವಿ‌. ಗಣಪತಿ ಭಟ್ ಕಿಬ್ಬಳ್ಳಿ, ದೇವರ ಸೂಚನೆಯಂತೆ ನಾಲ್ಕು ದಿನಗಳಿಂದ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಲೋಕವನ್ನು ಸರಿಪಡಿಸಲು ದೇವರು ಹಲವು ಬಾರಿ ಬಂದಾಗ ಅದನ್ನು ಅವತಾರ ಎಂದು ಕರೆದಿದ್ದಾರೆ. ಅದೇ ರೀತಿ ಲೋಕದ ಒಡೆಯನಾದ ದೇವ ಬರೂರಿನ ಪರಿಸರವೇ ಬದಲಾಗಬೇಕು ಎಂದು  ಸಂಕಲ್ಪವಾಗಿ ವೇದಮೂರ್ತಿ ಶ್ರೀನಿವಾಸ ಭಟ್ಟರ ಮೂಲಕ ಮೂಲದಿಂದ ಬದಲಾವಣೆ ಆಗಬೇಕು ಎಂದು ಬಯಸಿದ ಪರಿಣಾಮ ಇಷ್ಟೊಂದು ಕಾರ್ಯಕ್ರಮಗಳು ನಡೆದಿದೆ. ಸುತ್ತಮುತ್ತಲಿನ ಜನರು ವಯಕ್ತಿಕ ಭಿನ್ನಾಭಿಪ್ರಾಯ ಬಿಟ್ಟು ಬಂದಿರುವುದು ದೊಡ್ಡ ನಿಧಿ ಕುಂಬವಾಗಿದೆ.  ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ಕೆಲಸವಾಗಿದೆ ಎಂದರು.

ನರಸಿಂಹ ದೇವರು ಬೇಗ ಆಗಲಿ ಎಂದು ಹೇಳುವವ:

ಭಕ್ತರಲ್ಲಿ ಕ್ಷಮೆ ಕೇಳಿದ ಏಕೈಕ ದೇವರು ಲಕ್ಷ್ಮೀ ನರಸಿಂಹ. ಅದು ಸಹ ತಡವಾದ ಕಾರಣಕ್ಕಾಗಿ. ಅಂದರೆ ತಡ ಎಂದರೆ ನರಸಿಂಹ ದೇವರಿಗೆ ಒಪ್ಪುವುದಿಲ್ಲ.  ಇದಕ್ಕಾಗಿ ಬಹಳ ಬೇಗ ಬರೂರಿಗೆ ವಿಗ್ರಹದಲ್ಲಿ ಬಂದು ಇಲ್ಲಿ ನೆಲೆಸಬೇಕು ಎಂದು ದೇವರಿಗೆ ಇದ್ದ ಕಾರಣ ಭಕ್ತರಿಗೆ ಶ್ರದ್ಧೆ, ಬಲ ತುಂಬಿದ್ದು ಹಾಗೂ 9 ತಿಂಗಳಲ್ಲಿ ನೂತನ ಶಿಲಾಮಯ ದೇವಾಲಯದ ನಿರ್ಮಾಣ ಸಾಧ್ಯವಾಗಿದ್ದು ಎಂದರು.

Advertisement

ವಿ.ಕುಮಾರ ಭಟ್ ಮಾತನಾಡಿ ಎಲ್ಲಾ ಕಡೆ ಇರುವ ಭಗವಂತನನ್ನು ಎಲ್ಲಾ ಕಡೆ ನೋಡಲು ಸಾಧ್ಯವಿಲ್ಲದ ಕಾರಣ ದೇವಾಲಯದಲ್ಲಿ ಮೂರ್ತಿ ರೂಪದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಅಲ್ಲಿ ಹೋದಾಗಲೂ ಭಕ್ತಿ ಜಾಗೃತಿ ಆಗದಿದ್ದಲ್ಲಿ ಇನ್ನಷ್ಟು ಭಗವಂತನ ಸೇವೆ ಮಾಡಬೇಕು. ಯಾವುದು ವಿಭಕ್ತಿ ಅಲ್ಲವೋ ಅದು ಭಕ್ತಿ. ನಾನು ಪಡೆದಿದ್ದೇನೆ ಎನ್ನುವುದಕ್ಕಿಂತ ಭಗವಂತ ನೀಡಿದ್ದಾನೆ ಎನ್ಮುವುದು ಭಕ್ತಿ. ಅದು ಒಳಗಡೆಯಿಂದ ಹುಟ್ಟಿಕೊಳ್ಳಬೇಕು ಎಂದರು. ಸಣ್ಣ ಸಣ್ಣ ಕಾರಣಕ್ಕೆ ದೇವರ ಮೊರೆ ಹೋಗುವುದಕ್ಕಿಂತ ನಮ್ಮನ್ನು ಪೊಷಿಸುವಂತೆ ದೇವರಲ್ಲಿ ವಿನಂತಿಸೋಣ ಎಂದು ಹೇಳಿದರು.

ಈ ಮೊದಲು ಮೊಕ್ತೇಸರ ಮಂಜುನಾಥ ಭಟ್ ಬೆಳಖಂಡ ಮಾತನಾಡಿ, ಕಳೆದ ನಾಲ್ಕು ದಿನಗಳ ಕಾರ್ಯಕ್ರಮವನ್ನು ವೈದಿಕರು ಶ್ರದ್ಧೆಯಿಂದ, ಶ್ರಮ ಪೂರ್ವಕ ನಿಷ್ಠೆಯಿಂದ ತೊಡಗಿಕೊಂಡು ಶಿಲಾಮೂರ್ತಿಯನ್ನು ದೇವರನ್ನಾಗಿ ಪರಿವರ್ತನೆ ಮಾಡಿದ್ದಾರೆ. ಈ ಕಾರ್ಯಕ್ರಮದಿಂದ ಸಮಾಜ ಸಂಪದ್ಭರಿತ ಹಾಗೂ ಕ್ಷೇಮಾಭಿವೃದ್ಧಿಯಾಗಲಿ ಎಂದು ಆಶಿಸಿದರು.

ಈ ವೇಳೆ ವಿ.ಕುಮಾರ ಭಟ್, ವಿ.ಶ್ರೀನಿಧಿ ದೀಕ್ಷಿತ್ ಸೇರಿ ವಿವಿಧ ವೈದಿಕರಿಂದ  ನೂರಾರು ಭಕ್ತರು ಮಂತ್ರಾಕ್ಷತೆ ಪಡೆದುಕೊಂಡರು.

ಕಳೆದ ನಾಲ್ಕು ದಿನಗಳಿಂದ ಬರೂರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪುನರ್ ಪ್ರತಿಷ್ಠೆಯ ನಿಮಿತ್ತ ಗ್ರಾಮಸ್ಥರು ಸಾಂಪ್ರದಾಯಿಕ ಡೊಳ್ಳು ಕುಣಿತವನ್ನು ಪ್ರದರ್ಶಿಸಿದರು. ಗ್ರಾಮಸ್ಥನಾದ ನಿನಾಸಂ ನಾಗರಾಜ ಮತ್ತು ಸಂಗಡಿಗರು  ಭಕ್ತ ಪ್ರಹ್ಲಾದ ನಾಟಕವನ್ನು ಪ್ರದರ್ಶಿಸಿದರು. ಗ್ರಾಮದ ಪೂಜಾ ಹೆಗಡೆ ಭರತನಾಟ್ಯ, ಪೂರ್ಣಿಮಾ ನಾಯ್ಕ ಯಕ್ಷಗಾನ ಪ್ರದರ್ಶನ ನೀಡಿದ್ದು,  ಪ್ರತಿ ದಿನವೂ ಗ್ರಾಮದ ಮಹಿಳೆಯರು ವಿವಿಧ ಸಮಯದಲ್ಲಿ ನರಸಿಂಹ ದೇವರ ಭಜನೆಯನ್ನು ಪ್ರಸ್ತುತ ಪಡಿಸಿದರು.  ಬರೂರಿನ ಚಿಕ್ಕ ಮಕ್ಕಳು ದೇವರ ಪ್ರಾರ್ಥನೆ ಹಾಡಿ ಗಮನಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next