ಬಂಟ್ವಾಳ: ಇಲ್ಲಿನ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯು ಸುದೀರ್ಘ ಒಂದು ತಿಂಗಳ ಕಾಲ ನಡೆಯುತ್ತಿದ್ದು, ಜಾತ್ರೆಯಲ್ಲಿ “ಪುರಲ್ದ ಚೆಂಡ್’ ಖ್ಯಾತಿಯ ಮೊದಲ ದಿನ (ಕೊಡಿ ಚೆಂಡು)ದ ಚೆಂಡಿನ ಉತ್ಸವ ಎ. 6ರಂದು ಆರಂಭಗೊಳ್ಳಲಿದೆ.
5 ದಿನಗಳ ಚೆಂಡಿನ ಉತ್ಸವದ ಬಳಿಕ ಎ. 11ರಂದು ಸಂಜೆ 6ಕ್ಕೆ ಮಹಾರಥೋತ್ಸವ ನಡೆಯಲಿದೆ.
ಕ್ಷೇತ್ರದಲ್ಲಿ ಮಾ. 14ರಂದು ಧ್ವಜಾರೋಹಣದ ಮೂಲಕ ಜಾತ್ರೆ ಆರಂಭಗೊಂಡಿದ್ದು, ಎ. 12ರ ವರೆಗೆ ನಡೆಯಲಿದೆ. ಎ. 6ರಂದು ಪ್ರಥಮ ಚೆಂಡು, ಕುಮಾರ ತೇರು, ಎ. 7ರಂದು 2ನೇ ಚೆಂಡು, ಹೂ ತೇರು, ಎ. 8ರಂದು 3ನೇ ಚೆಂಡು, ಸೂರ್ಯಮಂಡಲ ರಥ, ಎ. 9ರಂದು 4ನೇ ಚೆಂಡು, ಚಂದ್ರಮಂಡಲ ರಥ, ಎ. 10ರಂದು ಕಡೇ ಚೆಂಡು, ಆಳು ಪಲ್ಲಕ್ಕಿ ರಥ, ಬೆಳ್ಳಿ ರಥ, ಎ. 11ರಂದು ಮಹಾರಥೋತ್ಸವ, ಎ. 12ರಂದು ಅವಭೃಥ ಸ್ನಾನ, ಧ್ವಜಾವರೋಹಣ, ಶ್ರೀ ಉಳ್ಳಾಕ್ಲು-ಮಗೃಂತಾಯಿ ದೈವಗಳ ನೇಮ, ಬೆಳಗ್ಗೆ ತಲಾಭಾರ ಸೇವೆ, ಎ. 13ರಂದು ಶ್ರೀ ಕೊಡಮಣಿತ್ತಾಯ ನೇಮ, ಎ. 14ರಂದು ಸಂಪ್ರೋಕ್ಷಣೆ, ಮಂತ್ರಾಕ್ಷತೆಯ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಹಲವು ವಿಶೇಷಗಳ ಪೊಳಲಿ ಜಾತ್ರೆ
ಪೊಳಲಿ ಕ್ಷೇತ್ರದ ಜಾತ್ರೆಯ ದಿನ ನಿಗದಿ ಪ್ರಕ್ರಿಯೆಯು ವಿಶೇಷವಾಗಿದ್ದು, ಧ್ವಜಾರೋಹಣದ ಮರುದಿನ ಕುದಿ ಕರೆಯುವ ಸಂಪ್ರದಾಯದ ಮೂಲಕ ಎಷ್ಟು ದಿನಗಳ ಜಾತ್ರೆ ಎಂಬುದು ನಿರ್ಧಾರವಾಗಿ ಅದರ ಆಧಾರದಲ್ಲಿ ಪ್ರಥಮ ಚೆಂಡು, ಮಹಾರಥೋತ್ಸವ, ಆರಾಡದ ದಿನಾಂಕಗಳು ನಿರ್ಧಾರವಾಗುತ್ತವೆ. ಧ್ವಜಾರೋಹಣಕ್ಕೆ ಮುನ್ನ ನಂದ್ಯ ಕ್ಷೇತ್ರದಿಂದ ದೋಣಿಯ ಮೂಲಕ ನದಿ ದಾಟಿ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರ ಹಾಗೂ ಉಳಿಪ್ಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸುತ್ತದೆ.
ಪೊಳಲಿ ಜಾತ್ರೆಯ ವೇಳೆ ನಡೆಯುವ ಚೆಂಡಿನ ಉತ್ಸವಕ್ಕೆ 18 ಕೆ.ಜಿ. ತೂಕದ ಚೆಂಡನ್ನು ಮೂಡುಬಿದಿರೆಯ ಚೌಟರ ಸೀಮೆಯ ಪದ್ಮನಾಭ ಚಮಗಾರ ಅವರು ತಯಾರಿಸಿಕೊಡಲಿದ್ದು, ಚೆಂಡಿನ ಗದ್ದೆಯಲ್ಲಿ ಅದರ ಆಚರಣೆಗಳು ವಿಶೇಷ ಸಂಪ್ರದಾಯ ಪ್ರಕಾರ ನಡೆಯುತ್ತವೆ. ಪೊಳಲಿ ಜಾತ್ರೆಯ ಸಂದರ್ಭ ಸ್ಥಳೀಯ ಕೃಷಿಕರೇ ಬೆಳೆದ ಕಲ್ಲಂಗಡಿ ಹಣ್ಣಿನ ವ್ಯಾಪಾರ ಬಹಳ ವಿಶೇಷವಾಗಿದ್ದು, ಅದು ಕೂಡ ಧಾರ್ಮಿಕ ಹಿನ್ನೆಲೆಯ ಆಧಾರದಲ್ಲೇ ಬೆಳೆದುಬಂದಿದೆ. ಕೃಷಿಕರು ತಾಯಿಗೆ ಹಣ್ಣನ್ನು ಅರ್ಪಿಸಿ ಬಳಿಕ ಜಾತ್ರೆಯಲ್ಲಿ ಸ್ಟಾಲ್‌ಗಳನ್ನಿಟ್ಟು ತಾವೇ ವ್ಯಾಪಾರ ಮಾಡುತ್ತಾರೆ.