Advertisement

ಶ್ರೀಕ್ಷೇತ್ರ ನೆರೂಲ್‌ ಶನಿಮಂದಿರ: ರಥೋತ್ಸವ, ಧಾರ್ಮಿಕ ಸಭೆ

03:44 PM Jan 31, 2018 | Team Udayavani |

ನವಿಮುಂಬಯಿ: ಜೀವನದಲ್ಲಿ ಧನಾತ್ಮಕ ಚಿಂತನೆಯಿರಬೇಕು. ದೇವರಲ್ಲಿ ಸಂಪೂರ್ಣ ವಿಶ್ವಾಸವನ್ನು ಹೊಂದಿರಬೇಕು. ದೇವರು ನಮ್ಮೊಂದಿಗೆ ಇದ್ದಾನೆ ಎಂಬ ಬಲವಾದ ನಂಬಿಕೆಯು ನಮ್ಮಲ್ಲಿದ್ದರೆ, ನಾವು ಯಾವುದೇ ರೀತಿಯ ಕಾರ್ಯಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಸಾಧನೆಯ ಗುರಿ ಬೇರೆ ಬೇರೆಯಾಗಿರಬಹುದು. ಆದರೆ ಸಾಧಿಸುವ ದಾರಿ ಒಂದೇ ಆಗಿರಬೇಕು. ಮನಶುದ್ಧಿ, ಆತ್ಮಶುದ್ಧಿಯಿಂದ ನಡೆಸುವ ಯಾವುದೇ ಕಾರ್ಯಕ್ರಮಗಳು ಸಫಲತೆಯಿಂದ ಕೂಡಿರುತ್ತವೆ ಎಂದು ಆಧ್ಯಾತ್ಮಿಕ ಚಿಂತಕ ಸದ್ಗುರುಶ್ರೀ ಅವರು ನುಡಿದರು.

Advertisement

ಜ. 26 ರಂದು ನೆರೂಲ್‌ ಶ್ರೀ ಶನಿಮಂದಿರದ ರಥೋತ್ಸವದ  ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನೆರೂಲ್‌ನ ಶ್ರೀ ಶನಿಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನವಿಮುಂಬಯಿ ಪರಿಸರದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ. ನಾವೆಲ್ಲರು ಒಂದಾಗಿ ಪ್ರೀತಿ, ವಿಶ್ವಾಸದಲ್ಲಿದ್ದರೆ ದೇವರು ಸದಾ ನಮ್ಮೊಂದಿಗಿರುತ್ತಾನೆ ಎಂದು ನುಡಿದರು.

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ತುಳುನಾಡಿನಿಂದ ಬಂದ ನಾವು ಮರಾಠಿ ಮಣ್ಣನ್ನು ಕರ್ಮಭೂಮಿಯನ್ನಾಗಿಸಿಕೊಂಡೆವು. ಮಹಾರಾಷ್ಟÅವು ನಮಗೆ ಎಲ್ಲವನ್ನು ನೀಡಿದೆ. ಇಲ್ಲಿ ನಾವು ಸಮಾಜ ಸೇವೆಗೈದು ಇಲ್ಲಿನ ಸಂಸ್ಕೃತಿಯನ್ನು ಗೌರವಿಸುವುವುದು ನಮ್ಮ ಕರ್ತವ್ಯವಾಗಿದೆ ಎಂದರು.

ನೆರೂಲ್‌ ಶ್ರೀ ಗಣಪತಿ ದುರ್ಗಾದೇವಿ ಅಯ್ಯಪ್ಪ ಮಂದಿರದ ಅಧ್ಯಕ್ಷ ಸಂಜೀವ ಎನ್‌. ಶೆಟ್ಟಿ ಅವರು ಮಾತನಾಡಿ, ದೇಶವೂ ಇಂದು ಅಭಿವೃದ್ಧಿಯೆಡೆಗೆ ಹೋಗುತ್ತಿದ್ದು, ನಾವು ಸಂಘಟಿತರಾಗಿ ಸಮಾಜಪರ ಪ್ರಗತಿಗೆ ಕಾರ್ಯನಿರ್ವಹಿಸಬೇಕು. ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ನವಿಮುಂಬಯಿ ಉಪಮೇಯರ್‌ ಮಂದಾಕಿನಿ ಆರ್‌. ಮ್ಹಾತ್ರೆ, ಸ್ಥಾನೀಯ ನಗರ ಸೇವಕಿ ಮೀರಾ ಸಂಜಯ್‌ ಪಾಟೀಲ್‌ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.  ಮಂದಿರದ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಮಂದಿರದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು, ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಉಪಾಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ, ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಜೊತೆ ಕೋಶಾಧಿಕಾರಿ ಕರುಣಾಕರ ಆಳ್ವ,  ಸದಸ್ಯರುಗಳಾದ ಜಯಕರ ಬಿ. ಪೂಜಾರಿ, ಎನ್‌. ಡಿ. ಶೆಣೈ, ಪುನೀತ್‌ ಶೆಟ್ಟಿ, ಪ್ರಭಾಕರ ಹೆಗ್ಡೆ, ದಯಾನಂದ ಎಸ್‌. ಶೆಟ್ಟಿ, ದಾಮೋದರ ಶೆಟ್ಟಿ, ಅನಿಲ್‌ ಹೆಗ್ಡೆ, ಕೃಷ್ಣ ಪೂಜಾರಿ, ತಾರನಾಥ್‌ ಶೆಟ್ಟಿ, ಸದಾನಂದ ಬಿ. ಶೆಟ್ಟಿ, ಎನ್‌. ಕೆ. ಪೂಜಾರಿ, ಜಯರಾಮ ಪೂಜಾರಿ, ಕೃಷ್ಣ ಕೋಟ್ಯಾನ್‌, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ  ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಆಯ್ಕೆಯಾದ ನಿಖೀಲ್‌ ಪೂಜಾರಿ ಅವರನ್ನು ಗಣ್ಯರು ಸಮ್ಮಾನಿಸಿ ಶುಭಹಾರೈಸಿದರು. ಧಾರ್ಮಿಕ ಕಾರ್ಯಕ್ರಮವಾಗಿ  ಕವಾಟೋದ್ಘಾಟನೆ, ನವಕ ಪ್ರಧಾನ ಹೋಮ, ಬೆಳಗ್ಗೆ 11 ರಿಂದ ಮಹಾಪೂಜೆ, ಬಲಿ ರಥಾರೋಹಣ, ಪಲ್ಲಪೂಜೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಅಪರಾಹ್ನ 2 ರಿಂದ ನೃತ್ಯ ವೈಭವ ಹಾಗೂ ವಿಠuಲ್‌ ನಾಯಕ್‌ ಮತ್ತು ಬಳಗದವರಿಂದ ಗೀತಾ ಸಾಹಿತ್ಯ-ಹಾಸ್ಯ ಲಹರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಧಾರ್ಮಿಕ ಸಭೆಯ ಆನಂತರ ಬಲಿ, ರಥೋತ್ಸವ, ಕಟ್ಟೆಪೂಜೆ, ಓಕುಳಿ ಸ್ನಾನ, ಜಲಕ ಬಲಿ, ಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.         

ನೆರೂಲ್‌ನ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದಾಗ ತುಳುನಾಡಿನ ದೇವಸ್ಥಾನಕ್ಕೆ ಬಂದ ಅನುಭವ ಆಗುತ್ತದೆ. ನನ್ನ ಜನ್ಮಭೂಮಿ ಮಹಾರಾಷ್ಟ್ರವಾದರೂ ನನ್ನ ಹಿರಿಯರು ತುಳುನಾಡಿನವರು ಎಂಬ ಹೆಮ್ಮೆ ನನಗಿದೆ. ಇಲ್ಲಿಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಗಳೂ ನಿರಂತರವಾಗಿ ನಡೆಯುತ್ತಿರುವುದು ಅಭಿನಂದನೀಯ. ಇಲ್ಲಿಗೆ ಭೇಟಿ ನೀಡಿ ಧನ್ಯನಾದೆ. ಶ್ರೀಕ್ಷೇತ್ರದ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರ ನೇತೃತ್ವದಲ್ಲಿ, ಇಲ್ಲಿನ ಆಡಳಿತ ವಿಭಾಗದವರ ಒಗ್ಗಟ್ಟಿನ, ಒಮ್ಮತದ ಕಾರ್ಯಕ್ರಮಗಳನ್ನು  ಕಂಡಾಗ ಸಂತೋಷವಾಗುತ್ತಿದೆ 
– ಮೀನಾಕ್ಷೀ ಆರ್‌. ಶಿಂಧೆ (ಮೇಯರ್‌ : ಥಾಣೆ ಮಹಾನಗರ ಪಾಲಿಕೆ).

ನೆರೂಲ್‌ ಶ್ರೀ ಶನಿದೇವರ ಆಶೀರ್ವಾದವು ನವಿಮುಂಬಯಿಯ ಪ್ರತಿಯೊಂದು ಮನೆಗೂ ನೆರಳಾಗಿ ತಲುಪುತ್ತಿದೆ. ತುಳುನಾಡಿನ ಶಕ್ತಿ ಆರಾಧಕರಾದ ನಾವು ಎಲ್ಲಿ ಹೋದರೂ ಯಶಸ್ಸು ನಮ್ಮದಾಗುತ್ತದೆ. ಇದಕ್ಕೆ ಕಾರಣ ನಾವು ನಂಬುವ ದೈವ-ದೇವರು, ನಾಗದೇವರ ಕಾರ್ಣಿಕವಾಗಿದೆ. ಮುಂಬಯಿಗೆ ಬಂದ ನಾವು ತುಳುನಾಡಿನ ಸಂಸ್ಕೃತಿಯನ್ನು ಕೈಬಿಟ್ಟಿಲ್ಲ. ಅದರೊಂದಿಗೆ ನಾವು ಸಮಾಜಸೇವೆಯಲ್ಲೂ ನಿರತರಾಗಿರುವುದು ಅಭಿನಂದನೀಯ 
– ಸಂತೋಷ್‌ ಜಿ. ಶೆಟ್ಟಿ (ನಗರ ಸೇವಕರು: ಪನ್ವೇಲ್‌ ಮಹಾನಗರ ಪಾಲಿಕೆ).  

ಚಿತ್ರ-ವರದಿ:ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next