Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ; ಸಮಾಜಕ್ಕಾಗಿ ದುಡಿವ ತುಡಿತವುಳ್ಳವರಿಂದ ಸಂಸ್ಥೆ ಪ್ರಗತಿ

01:28 AM May 12, 2024 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರಿಂದ ಆಯ್ಕೆ ಮಾಡಿ ಬಂದ ಕತೃತ್ವ ಶಕ್ತಿಯುಳ್ಳವರು ಲಭಿಸಿದ್ದಾರೆ. ಡಾ|ಪ್ರಭಾಕರ್‌, ವಜ್ರಕುಮಾರ್‌, ಯಶೋವರ್ಮ ಅವರಂತೆ ಡಾ| ಎಲ್‌.ಎಚ್‌.ಮಂಜುನಾಥ್‌ ಅವರು ತ್ಯಾಗ, ಸಾಹಸದಿಂದ ಸಮಾಜಕ್ಕಾಗಿ ದುಡಿವ ತುಡಿತವುಳ್ಳವರಾಗಿದ್ದರಿಂದ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸುವ ಮಟ್ಟಕ್ಕೆ ಬೆಳೆದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಶ್ಲಾ ಸಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಡಾ| ಮಂಜುನಾಥ್‌ ಅವರಿಗೆ ಮೇ 11ರಂದು ಅಮೃತವರ್ಷಿಣಿ ಸಭಾಂಗಣದಲ್ಲಿ ಬೀಳ್ಕೊಡುಗೆ ಹಾಗೂ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಸಮ್ಮಾನಿತರಿಗೆ ಶುಭ ಹಾರೈಸಿದರು.

ಸಾಮಾಜಿಕ ಸೇವೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಬಲಗೈಯಾದರೆ ಗ್ರಾಮಾಭಿವೃದ್ಧಿ ಎಡಗೈ ಇದ್ದಂತೆ. ಧರ್ಮೋತ್ಥಾನ ಟ್ರಸ್ಟ್ ನಿಂದ ಶ್ರದ್ಧಾಕೇಂದ್ರ, ವಾತ್ಸಲ್ಯ ಕಾರ್ಯಕ್ರಮ, ಕೆರೆ ಅಭಿವೃದ್ಧಿ, ಸ್ವಚ್ಛತೆ, ಕುಡಿವ ನೀರು ಬಹು ಆಯಾಮಗಳಲ್ಲಿ ಸಮಾಜಕ್ಕೆ ಅರ್ಪಿತವಾಗಿದೆ. ಇವೆಲ್ಲದಕ್ಕೂ ನಮ್ಮ ಕಾರ್ಯಕರ್ತರ ಶ್ರಮ, ಸಿಬಂದಿಗಳ ಬೆಂಬಲವೇ ಸಾಕ್ಷಿ. ಮುಂದೆ ಡಾ| ಮಂಜುನಾಥ್‌ ಹಾಕಿದ ಅಡಿಪಾಯದಂತೆ ಮುನ್ನಡೆಯಿರಿ ಎಂದು ಹರಸಿದರು.

ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಹಾಗೂ ಟ್ರಸ್ಟಿ ಡಾ| ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ ನಡೆಯ ಹಿಂದೆ ಎಲ್‌.ಎಚ್‌.ಮಂಜುನಾಥ್‌ ಯೋಜನೆಯಿದೆ. ಊರೂರು ಸುತ್ತಿ ಮಾರ್ಗದರ್ಶನ ನೀಡಿ, ಎಲ್ಲರನ್ನೂ, ಎಲ್ಲವನ್ನೂ ನಿಭಾಯಿಸಿ ನಿಯಂತ್ರಿಸಿದವರು ಅವರು ಸಂಸ್ಥೆಗಾಗಿ ಬದುಕಿಲ್ಲ, ಸಂಸ್ಥೆಯಾಗಿ ಬದುಕಿದರು. ಕಾಗದ ಪತ್ರಗಳಿಲ್ಲದೆ ನಡೆದು ಬರುತ್ತಿದ್ದ ಕಾಲದಿಂದ 45 ಸಾವಿರ ಕಾರ್ಯಕರ್ತರ ಮೂಲಕ ಯೋಜನೆ ಮನೆಮನೆ ತಲುಪುವಂತೆ ಮಾಡಿದ ವ್ಯಕ್ತಿ ಮಂಜುನಾಥ್‌ ಎಂದು ಪ್ರಶಂಸಿಸಿದರು.

ಭಾರತೀಯ ಜೀವ ವಿಮಾ ನಿಗಮ, ಮುಂಬಯಿಯ ವ್ಯವಸ್ಥಾಪಕ ನಿರ್ದೇಶಕ ಎಂ. ಜಗನ್ನಾಥ ಮಾತನಾಡಿದರು.

Advertisement

ಸಮ್ಮಾನ ಸ್ವೀಕರಿಸಿ ಬಾವುಕರಾದ ಡಾ| ಎಲ್‌.ಎಚ್‌. ಮಂಜುನಾಥ್‌ ಮಾತನಾಡಿ, ನನ್ನೆಲ್ಲ ಸಾಧನೆಯ ಶಕ್ತಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು. ಪೂಜ್ಯರು ನನಗೆ ನೀಡಿದ ಸ್ವಾತಂತ್ರ್ಯವೇ ಸಂಸ್ಥೆಯ ಪ್ರಗತಿಯ ಹಿಂದಿನ ಶಕ್ತಿ. ಇಂದು ಕರ್ನಾಟಕದಲ್ಲಿ 5 ಲಕ್ಷ ಹೊಸ ಉದ್ಯಮಗಳು ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಾರವಾಗುತ್ತಿದೆ. ಕ್ಷೇತ್ರದ ಎಲ್ಲ ಟ್ರಸ್ಟಿಗಳ ಸಹಕಾರ ಡಾ| ಹೆಗ್ಗಡೆ ಕುಟುಂಬದ ಆಶೀರ್ವಾದ, ಕಾರ್ಯಕರ್ತರ ಶ್ರಮ ಸ್ಮರಿಸಿದ ಅವರು, ಕ್ಷೇತ್ರದ ಜತೆಗೆ ಮುಂದೆಯೂ ಒಬ್ಬ ಮಾರ್ಗದರ್ಶಕನಾಗಿ ನಿಲ್ಲುವ ಇಂಗಿತ ನನ್ನದು, ಸಂಸ್ಥೆ ರಾಷ್ಟ್ರ ಮಟ್ಟಕ್ಕೆ ಬೆಳೆಯುವಲ್ಲಿ ಡಾ| ಹೆಗ್ಗಡೆಯವರೊಂದಿಗೆ ನಂಬಿಕೆಯ ದ್ಯೋತಕವಾಗಿ ಕಾರ್ಯಕರ್ತರು, ಸಿಬಂದಿಗಳು ಶ್ರಮಿಸಿ ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್‌, ಯೋಜನೆಯ ಟ್ರಸ್ಟಿಗಳಾದ ಡಿ. ಸುರೇಂದ್ರ ಕುಮಾರ್‌, ವೈ. ನಾಗೈಶ್ವರ ರಾವ್‌, ಸಂಪತ್‌ ಸಾಮ್ರಾಜ್ಯ, ಉದಯಕುಮಾರ್‌ ಶೆಟ್ಟಿ, ಶ್ಯಾಮ್‌ ಭಟ್‌, ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್‌ ಆರ್‌. ಪೈ, ಡಾ| ಎಲ್‌.ಎಚ್‌ ಮಂಜುನಾಥ್‌ ಅವರ ಪತ್ನಿ ನಳಿನಿ, ಪುತ್ರ ಡಾ| ರೋಹನ್‌, ಸುಪ್ರೀಯಾ ಹರ್ಷೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಮತ್ತಿತರರು ಉಪಸ್ಥಿತರಿದ್ದರು.
ಯೋಜನೆ ಮುಖ್ಯ ನಿರ್ವಹಣಾಧಿಕಾರಿ ಅನಿಲ್‌ ಕುಮಾರ್‌ಎಸ್‌.ಎಸ್‌. ಪ್ರಾಸ್ತಾವಿಸಿ, ಸ್ವಾಗತಿಸಿದರು. ಪೂಜಾ ಪಕ್ಕಳ, ರಾಜೇಶ್‌ ನಿರೂಪಿಸಿದರು. ಆನಂದ ಸುವರ್ಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next