ಮಂಗಳೂರು, ಅ. 21: ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ದಿಗ್ವಿಜಯವು ಶನಿವಾರ ಕೊಂಚಾಡಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಸಹಸ್ರಾರು ಭಕ್ತರು ಆಗ ಮಿಸಿದ್ದರು. ಪ್ರಾರಂಭದಲ್ಲಿ ಶ್ರೀಗಳು ಸಂಸ್ಥಾನದ ಆರಾಧ್ಯ ದೇವರ ದರ್ಶನ ಪಡೆದು ದಂಡಧಾರಿಗಳಾಗಿ ಶ್ರೀ ವೆಂಕಟರಮಣ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವಿಯ ದರ್ಶನ ಪಡೆದು ದಿಗ್ವಿಜಯ ಮಹೋತ್ಸ ವಕ್ಕೆ ವಿಶೇಷವಾಗಿ ಅಲಂಕರಿಸಿದ ಭವ್ಯ ರಥದಲ್ಲಿ ವಿರಾಜಮಾನರಾದರು.
ಬಳಿಕ ಜಿಎಸ್‌ಬಿ ಸಮಾಜದ ನೂರಾರು ಮಠ-ಮಂದಿರಗಳ ಆಡಳಿತ ಮಂಡಳಿ, ಮೊಕ್ತೇಸರರು ಶ್ರೀಗಳಿಗೆ ಹಾರಾರ್ಪಣೆ ಮಾಡಿದರು. ಕೊಂಚಾಡಿ ಪ್ರದೇಶಕ್ಕೆ ಮುಂಬಯಿ, ಕೇರಳ, ದಿಲ್ಲಿ, ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜ ಭಾಂದವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ದಿಗ್ವಿಜಯ ಯಾತ್ರೆ ಸಾಗುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ, ಸಮಾಜ ಬಾಂದವರ ಮನೆಯ ಮುಂಭಾಗವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸುಮಾರು 25ಕ್ಕೂ ಅಧಿಕ ವಿಶೇಷ ವರ್ಣರಂಜಿತ ಟ್ಯಾಬ್ಲೊಗಳು, ಕೇರಳದ ವಿಶೇಷ ಚೆಂಡೆ ವಾದನ, ಪಂಚವಾದ್ಯಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಜನ ಮಂಡಳಿಗಳಿಂದ ಭಜನ ಸಂಕೀರ್ತನೆ, ಸ್ತಬ್ಧಚಿತ್ರಗಳು, ಜಿಎಸ್‌ಬಿ ಯುವಕರು ಮತ್ತು ಪುಟಾಣಿಗಳ ಹುಲಿ ವೇಷ ವಿಶೇಷ ಜನಾಕರ್ಷಣೆ ಗಳಿಸಿತು.
ಕೊಂಚಾಡಿ ಶ್ರೀ ಕಾಶೀ ಮಠದಿಂದ ಸಂಜೆ 6 ಗಂಟೆಗೆ ಪ್ರಾರಂಭಗೊಂಡ ಶ್ರೀಗಳ ದಿಗ್ವಿಜಯ ಮಹೋತ್ಸವವು ಪದವಿನಂಗಡಿ, ವಿಮಾನ ನಿಲ್ದಾಣ ರಸ್ತೆ ಮೂಲಕ ಹಾದು ಮೇರಿಹಿಲ್ ಮೂಲಕ ದೇಗುಲಕ್ಕೆ ಹಿಂದಿರುಗಿತು. ಈ ಎಲ್ಲ ಪ್ರದೇಶಗಳಲ್ಲಿ ವಿಶೇಷ ಊಟ, ಉಪಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು.