Advertisement

ಸುಂದರ ಜಡೆಯ ಗಣಪ

06:45 PM Aug 30, 2019 | Sriram |

ಗಣಪನನ್ನು ನೋಡಿದಾಗ, ಆಕರ್ಷಣೆ ಹುಟ್ಟಿಸುವುದು ಆತನ ಸೊಂಡಿಲು. ಇಲ್ಲೊಬ್ಬ ವಿಶೇಷ ಗಣಪನಿದ್ದಾನೆ. ಅವನ ಶಿರದಲ್ಲಿ ಜಡೆಯಿದೆ. ಭಕ್ತಾದಿಗಳಿಗೆ ಈ ಜಡೆಯೇ ಪ್ರಧಾನ ಸೆಳೆತ. ದರ್ಶನಕ್ಕೆ ಬರುವ ಭಕ್ತರು, ಗಜಮುಖನ ಜಡೆಯನ್ನು ಮುಟ್ಟಿ ನಮಸ್ಕರಿಸುವುದು ವಾಡಿಕೆ. ಬೆಣ್ಣೆಯ ನೈವೇದ್ಯ ನೀಡಿ, ಆ ಬೆಣ್ಣೆಯನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರಂತೂ, ಹೆಣ್ಣುಮಕ್ಕಳಿಗೆ ಜಡೆ ಸುಂದರವಾಗಿ ಮೂಡಿಬರುತ್ತದಂತೆ.

Advertisement

ಇದು ಹೊಳಲ್ಕೆರೆಯ ಗಜಮುಖನ ಮಹಿಮೆ. ಚಿತ್ರದುರ್ಗವನ್ನು ಆಳಿದ ಪಾಳೇಗಾರರ ಪೈಕಿ ಕಾಮಗೇತಿ ವಂಶದ ಮದಕರಿ ನಾಯಕನ ಮೈದುನ ಗುತ್ಯಪ್ಪ ನಾಯಕ 1475ರಲ್ಲಿ ಹೊಳಲ್ಕೆರೆ ಪಟ್ಟಣದಲ್ಲಿ ಏಕಶಿಲೆಯಿಂದ 16 ಅಡಿ ಎತ್ತರದ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ಗಣಪನ ಮುಂದೆ ಕೈಮುಗಿದು ನಿಂತರೆ, ಆಸೀನನಾದ ಗಣಪನ ಮೊಳಕಾಲಿನ ಬಳಿಗೂ ನಾವು ನಿಲುಕುವುದಿಲ್ಲ.

ಕುಜದೋಷ ನಿವಾರಕ
ಈ ಬಯಲು ಗಣಪ ವಿಶೇಷವಾಗಿ ಕುಜದೋಷ ನಿವಾರಕ ಎಂಬ ನಂಬಿಕೆಯಿದೆ. ಗಣಪತಿಯ ವಿಗ್ರಹದ ಎಡ ಭಾಗದಲ್ಲಿ ನರಸಿಂಹ ದೇವರ ಮುಖದ ಚಿತ್ರವೂ ಇದೆ. ಜತೆಗೆ ಕುಳಿತ ಭಂಗಿಯಲ್ಲಿರುವ ಗಣೇಶ ಸಾಕ್ಷಾತ್‌ ತಾಯಿ ಪಾರ್ವತಿಯ ತೊಡೆಯ ಮೇಲೆ ಆಸೀನನಾದಂತೆ ಭಾಸವಾಗುತ್ತಾನೆ. ಕುಜದೋಷ ಪರಿಹಾರಕ್ಕಾಗಿ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಮಳೆ ತರುವ ಗಣಪ
ಹೊಳಲ್ಕೆರೆಯು ಬಯಲುಸೀಮೆಯ ಭಾಗವಾಗಿದ್ದು, ಇಲ್ಲಿ ಸಕಾಲಕ್ಕೆ ಮಳೆ ಆಗುವುದು ಕಡಿಮೆ. ಇಂಥ ಸಂದರ್ಭದಲ್ಲಿ ಸುತ್ತಮುತ್ತಲಿನ ಊರುಗಳ ಭಕ್ತರು, ಈ ಗಣಪನಿಗೆ ನೂರೊಂದು ಬಿಂದಿಗಳ ನೀರಿನಿಂದ ಅಭಿಷೇಕ ಮಾಡಿ, ಮಳೆಗಾಗಿ ಪ್ರಾರ್ಥಿಸುತ್ತಾರೆ. ಹಾಗೆ ಪೂಜಿಸಿದ ಕೆಲವೇ ದಿನಗಳಲ್ಲಿ ಮಳೆಯಾದ ನಿದರ್ಶನಗಳು ಸಾಕಷ್ಟಿವೆ.

ಅಲಂಕಾರಕ್ಕೆ 90 ಕಿಲೋ ಬೆಣ್ಣೆ
ಜಡೆ ಗಣಪನಿಗೆ ಬೆಣ್ಣೆಯ ಅಲಂಕಾರ ಬಹಳ ಶ್ರೇಷ್ಠ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸಿದಾಗ ಗಣಪನಿಗೆ ತಮ್ಮ ಶಕ್ತಾನುಸಾರ ಬೆಣ್ಣೆಯಿಂದ ಅಲಂಕಾರ ಮಾಡಿಸಿ, ನೈವೇದ್ಯ ಸಮರ್ಪಿಸುತ್ತಾರೆ. ಕುಂಕುಮದಿಂದ, ಬೆಳ್ಳಿ ಆಭರಣಗಳಿಂದಲೂ ಗಣಪನನ್ನು ವಿಶೇಷವಾಗಿ ಅಲಂಕರಿಸುವ ಸಂಪ್ರದಾಯ ಇಲ್ಲಿದೆ. ಈ ಬೃಹತ್‌ ಗಣಪನನ್ನು ಬೆಣ್ಣೆಯಿಂದ ಪರಿಪೂರ್ಣವಾಗಿ ಅಲಂಕರಿಸಲು, ಸುಮಾರು 80 ರಿಂದ 90 ಕಿಲೋ ಬೆಣ್ಣೆ ಬೇಕಾಗುತ್ತದೆ. ಆಗ ಈತನ ಅಂದವನ್ನು ನೋಡಲು, ಎರಡು ಕಂಗಳು ಸಾಲದಾಗುತ್ತವೆ.

Advertisement

ದರುಶನಕ್ಕೆ ದಾರಿ…
ಚಿತ್ರದುರ್ಗ- ಶಿವಮೊಗ್ಗ ನಡುವೆ ಹೊಳಲ್ಕೆರೆಯಿದ್ದು, ಶಿವಮೊಗ್ಗದಿಂದ 80, ದಾವಣಗೆರೆಯಿಂದ 60, ಚಿತ್ರದುರ್ಗದಿಂದ 35 ಕಿ.ಮೀ ಅಂತರವಿದೆ. ಚಿಕ್ಕಮಗಳೂರು ಕಡೆಯಿಂದಲೂ ಹೊಸದುರ್ಗ ಮಾರ್ಗವಾಗಿ ಇಲ್ಲಿಗೆ ಬರಬಹುದು.

– ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next