ಮುಂಬಯಿ: ಕಳೆದ ಕೆಲ ದಿನಗಳಿಂದ ಕೋವಿಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಆತಂಕಗಳು ಶುರುವಾಗಿದೆ. ಕೋವಿಡ್ ಶೀಲ್ಡ್ ಲಸಿಕೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಇದು ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದೆಂದು ಆಸ್ಟ್ರಾಜೆನಿಕಾ ಕಂಪೆನಿಯೇ ಒಪ್ಪಿಕೊಂಡಿದೆ.
ಈ ವಿಚಾರ ಕೋವಿಡ್ ಲಸಿಕೆ ಪಡೆದುಕೊಂಡ ಪ್ರತಿಯೊಬ್ಬರಲ್ಲೂ ಆತಂಕ ಹುಟ್ಟಿಸಿದೆ. ಕಳೆದ ಎರಡು ಮೂರು ವರ್ಷಗಳಿಂದ ಯುವ ಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದೆ. ಯುವ ಜನರು ಅಲ್ಲಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕೋವಿಡ್ ಶೀಲ್ಡ್ ಲಸಿಕೆ ಕಾರಣವಾಗಿರಬಹುದು ಎನ್ನುವ ಮಾತು ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಸಿನಿಮಾ ಕಲಾವಿದರಿಗೂ ಹೃದಯಘಾತವಾಗಿದೆ. 2023 ರಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರಿಗೆ ಹೃದಯಾಘಾತವಾಗಿತ್ತು. “ವೆಲ್ ಕಮ್ ಟು ದಿ ಜಂಗಲ್’ ಸಿನಿಮಾದ ಚಿತ್ರೀಕರಣದಲ್ಲಿದ್ದಾಗ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಕೋವಿಡ್ ಶೀಲ್ಡ್ ಅಡ್ಡಪರಿಣಾಮ ವಿಚಾರ ಬೆಳಕಿಗೆ ಬಂದಿದೆ. ಶ್ರೇಯಸ್ ಹೃದಯಾಘಾತವಾಗಿದ್ದ ದಿನದ ಬಗ್ಗೆ ಮಾತನಾಡಿದ್ದಾರೆ.
ʼಲೆಹ್ರೆನ್ ರೆಟ್ರೋʼ ಜೊತೆ ಮಾತನಾಡಿರುವ ಅವರು, “ನಾನು ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮ ಆಗಿದೆ ಎನ್ನುವ ಮಾತನ್ನು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ. ಕೋವಿಡ್ ಲಸಿಕೆ ಪಡೆದ ನಂತರವೇ ನಾನು ಸ್ವಲ್ಪ ಆಯಾಸ ಮತ್ತು ಸುಸ್ತನ್ನು ಅನುಭವಿಸಲು ಪ್ರಾರಂಭಿಸಿದ್ದೆ. ಇದರಲ್ಲಿ ಸ್ವಲ್ಪ ಪ್ರಮಾಣದ ಸತ್ಯವಾದರೂ ಇರಲೇಬೇಕು. ಇದನ್ನು ನಾನು ಸಂಪೂರ್ಣವಾಗಿ ಅಲ್ಲಗಳೆಯುವುದಿಲ್ಲ. ಇದು ಕೋವಿಡ್ ನಿಂದ ಅಥವಾ ಲಸಿಕೆಯಿಂದಾಗಿರಬಹುದು. ಈ ಎರಡರಲ್ಲಿ ಯಾವುದು ಎಂದು ನನಗೆ ತಿಳಿದಿಲ್ಲ, ಆದರೆ ಇದು ನನ್ನ ಸ್ಥಿತಿಯೊಂದಿಗೆ ಸಂಬಂಧಿಸಿದೆ” ಎಂದು ಅವರು ಹೇಳಿದ್ದಾರೆ.
“ಇದು ತುಂಬಾ ದುರದೃಷ್ಟಕರ ಮತ್ತು ಭಯಾನಕವಾಗಿದೆ. ಏಕೆಂದರೆ ನಮ್ಮ ದೇಹದಲ್ಲಿ ನಾವು ಏನು ತೆಗೆದುಕೊಂಡಿದ್ದೇವೆ ಎಂಬುದು ನಮಗೆ ನಿಜವಾಗಿ ತಿಳಿದಿಲ್ಲ. ನಾವು ಲಸಿಕೆಯ ಕಂಪೆನಿಯನ್ನು ನಂಬಿ ಎಲ್ಲರೊಂದಿಗೆ ಲಸಿಕೆ ಪಡೆದುಕೊಂಡಿದ್ದೇವೆ. ಕೋವಿಡ್ ಗಿಂತ ಮೊದಲು ಯುವ ಜನರಲ್ಲಿ ಹೃದಯಾಘಾತದಂಥ ಪ್ರಕರಣವನ್ನು ನಾನು ಕೇಳಿಲ್ಲ. ಲಸಿಕೆ ನಮಗೆ ಏನು ಮಾಡಿದೆ ಎಂದು ತಿಳಿಯಲು ನಾನು ಬಯಸುತ್ತೇನೆ. ಇದು ಕೋವಿಡ್ ನಿಂದಾಗಿಯೋ ಅಥವಾ ಲಸಿಕೆಯಿಂದಾಗಿಯೋ ಎಂದು ನನಗೆ ಖಚಿತವಿಲ್ಲ. ನನ್ನ ಬಳಿ ಎಲ್ಲಾ ಸತ್ಯಗಳು ಮತ್ತು ಪುರಾವೆಗಳಿಲ್ಲ” ಎಂದು ನಟ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಶ್ರೇಯಸ್ ಕೊನೆಯದಾಗಿ ‘ಲವ್ ಯು ಶಂಕರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.