ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ “ಪಡ್ಡೆಹುಲಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ನಿಮಗೆ ನೆನಪಿರಬಹುದು. “ಪಡ್ಡೆಹುಲಿ’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದಿದ್ದರೂ, ನಟ ಶ್ರೇಯಸ್ ನಟನೆ, ಎನರ್ಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಶ್ರೇಯಸ್ ಸದ್ದಿಲ್ಲದೆ ತಮ್ಮ ಎರಡನೇ ಚಿತ್ರದ ತಯಾರಿ ಶುರು ಮಾಡಿದ್ದರು.
ಶ್ರೇಯಸ್ ಅಭಿನಯಿಸುತ್ತಿರುವ ಎರಡನೇ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ “ವಿಷ್ಣುಪ್ರಿಯ’ ಎಂದು ಹೆಸರಿಡಲಾಗಿದ್ದು, ನೈಜ ಘಟನೆಯನ್ನ ಆಧರಿಸಿ ಈ ಚಿತ್ರ ತೆರೆಗೆ ಬರುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ನಿರ್ಮಾಪಕ ಕೆ.ಮಂಜು, ಡಾ.ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಅದೇ ಕಾರಣದಿಂದ ಮಗನ ಮೊದಲ ಚಿತ್ರ “ಪಡ್ಡೆಹುಲಿ’ಯಲ್ಲೂ ವಿಷ್ಣುವರ್ಧನ್ ಅವರ ಸ್ಮರಣೆ ಮಾಡಿದ್ದರು.
ಈಗ ಎರಡನೇ ಚಿತ್ರಕ್ಕೂ “ವಿಷ್ಣುಪ್ರಿಯ’ ಎಂಬ ಟೈಟಲ್ ಇಟ್ಟು, ವಿಷ್ಣುವರ್ಧನ್ ಮೇಲಿನ ಅಭಿಮಾನ ಮೆರೆದಿದ್ದಾರೆ ಕೆ.ಮಂಜು. ಇಲ್ಲಿಯವರೆಗೆ 25ಕ್ಕೂ ಹೆಚ್ಚು ಚಿತ್ರಗಳನ್ನು, ಹಲವು ಜಾಹೀರಾತುಗಳನ್ನು ನಿರ್ದೇಶಿಸಿರುವ ಮಲಯಾಳಂ ಮೂಲದ ನಿರ್ದೇಶಕ ವಿ.ಕೆ ಪ್ರಕಾಶ್, “ವಿಷ್ಣುಪ್ರಿಯ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಧಾರವಾಡದ ಸಿಂಧುಶ್ರೀ ಎಂಬ ಹುಡುಗಿಯ ಕಥೆ ಆಯ್ಕೆಯಾಗಿದೆ.
ನೈಜ ಘಟನೆಯನ್ನಾಧರಿಸಿದ ಕಥೆ ಇದಾಗಿದೆಯಂತೆ. ಈ ಹಿಂದೆ ಕೆ.ಮಂಜು ಅವರು “ಕೆ.ಮಂಜು ಸ್ಕ್ರಿಪ್ಟ್ ಯೋಜನೆ’ ಯಡಿ ಲೇಖಕರಿಂದ ಕಥೆ ಆಹ್ವಾನಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಕಥೆಗಳು ಬಂದಿದ್ದು, ಅದರಲ್ಲಿ ಸಿಂಧುಶ್ರೀಯವರ ಕಥೆ ಆಯ್ಕೆಯಾಗಿದೆ. ಅಂದಹಾಗೆ, “ಪಡ್ಡೆಹುಲಿ’ ಚಿತ್ರದ ನಂತರ ಶ್ರೇಯಸ್‌ಗಾಗಿ ಇಲ್ಲಿಯವರೆಗೆ ಸುಮಾರು 85ಕ್ಕೂ ಹೆಚ್ಚು ಸ್ಕ್ರಿಪ್ಟ್ಗಳು ಬಂದಿದ್ದರೂ,
ಯಾವ ಕಥೆಯನ್ನೂ ಒಪ್ಪಿಕೊಂಡಿರದ ನಿರ್ಮಾಪಕ ಕೆ. ಮಂಜು, ಈ ಚಿತ್ರದ ಕಥೆ ನೈಜವಾಗಿದೆ ಮತ್ತು ಹೊಸತರವಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಳ್ಳಲಾಗಿದೆ ಎನ್ನುತ್ತಾರೆ. ಸದ್ಯ “ವಿಷ್ಣುಪ್ರಿಯ’ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಆಗಸ್ಟ್‌ನಲ್ಲಿ ಈ ಚಿತ್ರದ ಮುಹೂರ್ತ ನೆರವೇರಲಿದ್ದು, ಸೆಪ್ಟೆಂಬರ್‌ನಲ್ಲಿ “ವಿಷ್ಣುಪ್ರಿಯ’ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ.