Advertisement

ಬೆಂಗಳೂರು ಮಳೆಯಲ್ಲಿ ಮುಳುಗಿದ ಆರ್‌ಸಿಬಿ

09:34 AM May 02, 2019 | keerthan |

ಬೆಂಗಳೂರು: ಕೊನೆಗೂ ಆರ್‌ಸಿಬಿ ಐಪಿಎಲ್‌ ನಿಂದ ಹೊರಬಿದ್ದಿದೆ. ರಾಜಸ್ಥಾನ್‌ ರಾಯಲ್ಸ್‌ ಎದುರಿನ ಮಂಗಳವಾರದ ಬೆಂಗಳೂರು ಪಂದ್ಯ ಭಾರೀ ಮಳೆಯಿಂದ ರದ್ದಾದ್ದರಿಂದ ಆತಿಥೇಯ ಆರ್‌ಸಿಬಿ ಅಧಿಕೃತವಾಗಿ ಕೂಟದಿಂದ ಹೊರನಡೆಯಿತು. ಇದರೊಂದಿಗೆ ಕೊಹ್ಲಿ ಬಳಗದ ಮುನ್ನಡೆಯ ಸಾಧ್ಯತೆ ಬಗ್ಗೆ ಮಾಡಲಾದ ಎಲ್ಲ ಲೆಕ್ಕಾಚಾರಗಳೂ ಬೆಂಗಳೂರಿನ ಮಳೆಯಲ್ಲಿ ತೊಯ್ದು ತೊಪ್ಪೆಯಾದವು!

Advertisement

ಟಾಸ್‌ ಹಾರಿಸಿದೊಡನೆ ಆರಂಭಗೊಂಡ ಮಳೆ ತೀವ್ರ ಗೊಳ್ಳುತ್ತ ಹೋಯಿತು. ಮಳೆ ನಿಲ್ಲುವಾಗ 10.30 ಕಳೆದಿತ್ತು. ರಾತ್ರಿ 11.10ರ ವೇಳೆ, ಅಂದರೆ ಮಾಮೂಲು ಪಂದ್ಯಗಳು ಮುಗಿಯುವ ಹೊತ್ತಿಗೆ ತಲಾ 5 ಓವರ್‌ಗಳ ಆಟ ನಡೆಸಲು ನಿರ್ಧರಿಸಲಾಯಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 62 ರನ್‌ ಮಾಡಿದರೆ, ರಾಜಸ್ಥಾನ್‌ 3.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 41 ರನ್‌ ಗಳಿಸಿದಾಗ ಮತ್ತೆ ಮಳೆ ಅಬ್ಬರಿಸಿತು. ಆಟ ಇಲ್ಲಿಗೇ ಕೊನೆಗೊಂಡಿತು. ಎರಡೂ ತಂಡಗಳು ಒಂದೊಂದು ಅಂಕ ಪಡೆದವು. ಅಕಸ್ಮಾತ್‌ ಪಂದ್ಯ ಪೂರ್ತಿಗೊಂಡಿದ್ದರೆ ರಾಜಸ್ಥಾನ್‌ ಮುಂದೆ ಗೆಲುವಿನ ಉತ್ತಮ ಅವಕಾಶವಿತ್ತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಮಳೆಯಿಂದ ರದ್ದುಗೊಂಡ ಮೊದಲ ಪಂದ್ಯ.

ರಾಜಸ್ಥಾನಕ್ಕೆ ಕ್ಷೀಣ ಅವಕಾಶ
ಆರಂಭದಿಂದಲೇ ಕಳಪೆ ಪ್ರದರ್ಶನ ನೀಡುತ್ತ ಬಂದ ಆರ್‌ಸಿಬಿ, 13 ಪಂದ್ಯಗಳಿಂದ ಕೇವಲ 9 ಅಂಕ ಗಳಿಸಿದೆ. ತನ್ನ ಕೊನೆಯ ಪಂದ್ಯವನ್ನು ಹೈದರಾಬಾದ್‌ ವಿರುದ್ಧ ಶನಿವಾರ ಬೆಂಗಳೂರಿನಲ್ಲಿ ಆಡಲಿದೆ. ಹೈದರಾಬಾದ್‌ಗೆ ಇದು ಮಹತ್ವದ ಮುಖಾಮುಖೀಯಾದರೂ ಕೊಹ್ಲಿ ಪಡೆಗೆ ಕೇವಲ ಔಪಚಾರಿಕ ಪಂದ್ಯ.

ಆರ್‌ಸಿಬಿ, ರಾಜಸ್ಥಾನ್‌ ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದ ತಂಡ ಗಳಾಗಿದ್ದವು. ಅಂತಿಮ 2 ಸ್ಥಾನಗಳನ್ನು ಕಾಯ್ದುಕೊಂಡೇ ಬಂದಿದ್ದವು. ಆದರೆ ಮಂಗಳವಾರದ ಪಂದ್ಯದಲ್ಲಿ ಒಂದು ಅಂಕ ಪಡೆದ ಸ್ಮಿತ್‌ ಪಡೆಯೀಗ 5ನೇ ಸ್ಥಾನಕ್ಕೇರಿದೆ (11 ಅಂಕ). ಡೆಲ್ಲಿ ಎದುರಿನ ಕೊನೆಯ ಲೀಗ್‌ ಪಂದ್ಯ ಗೆದ್ದರೆ, ಅದೃಷ್ಟವಿದ್ದರೆ ಅದು 4ನೇ ಸ್ಥಾನದೊಂದಿಗೆ ಮುಂದಿನ ಸುತ್ತು ಪ್ರವೇಶಿಸೀತು! ಸದ್ಯ ಹೈದರಾಬಾದ್‌ 4ನೇ ಸ್ಥಾನಿಯಾಗಿ ಮೇಲೇರುವ ಉತ್ತಮ ಅವಕಾಶ ಹೊಂದಿದೆ.

Advertisement

ಮಳೆಯಿಂದ ಮಂಗಳ
ರಾಜಸ್ಥಾನ್‌ ಚೇಸಿಂಗ್‌ ಕೂಡ ಬಿರುಸಿನಿಂದ ಕೂಡಿತ್ತು. ಸಂಜು ಸ್ಯಾಮ್ಸನ್‌-ಲಿಯಮ್‌ ಲಿವಿಂಗ್‌ಸ್ಟೋನ್‌ ಸೇರಿಕೊಂಡು 3.2 ಓವರ್‌ಗಳಿಂದ 41 ರನ್‌ ಪೇರಿಸಿದರು. ಆದರೆ ಗೆಲ್ಲುವ ನಸೀಬು ಇರಲಿಲ್ಲ. ಸ್ಯಾಮ್ಸನ್‌ ಔಟಾದ ಬೆನ್ನಲ್ಲೇ ಸುರಿದ ಮಳೆ, 12.04ರ ವೇಳೆ ಪಂದ್ಯಕ್ಕೆ ಮಂಗಳ ಹಾಡಿತು!

ಹ್ಯಾಟ್ರಿಕ್‌ ಹೀರೋ ಗೋಪಾಲ್‌
ಆರ್‌ಸಿಬಿ ಆರಂಭ ಭರ್ಜರಿಯಾಗಿತ್ತು. ಕೊಹ್ಲಿ-ಎಬಿಡಿ ಸೇರಿಕೊಂಡು 1.3 ಓವರ್‌ಗಳಿಂದ 35 ರನ್‌ ಸೂರೆಗೈದಿದ್ದರು (3 ಬೌಂಡರಿ, 3 ಸಿಕ್ಸರ್‌). ಆದರೆ ಅನಂತರದ 3.3 ಓವರ್‌ಗಳ ಆಟದ ಸ್ಥಿತಿ ಚಿಂತಾಜನಕವಾಗಿತ್ತು. 27 ರನ್‌ ಅಂತರದಲ್ಲಿ 7 ವಿಕೆಟ್‌ ಹಾರಿಹೋದವು (3 ಬೌಂಡರಿ). ಕರ್ನಾಟಕದವರೇ ಆದ ಲೆಗ್‌ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ತವರಿನ ಅಂಗಳದಲ್ಲಿ ಹ್ಯಾಟ್ರಿಕ್‌ ಸಾಧಿಸುವ ಮೂಲಕ ನಡುರಾತ್ರಿ ವೇಳೆ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿದರು.

ತಮ್ಮ ಮೊದಲ 3 ಎಸೆತಗಳಲ್ಲಿ 12 ರನ್‌ ನೀಡಿದಾಗ ಗೋಪಾಲ್‌ ಕೂಡ ದುಬಾರಿಯಾಗುವ ಸೂಚನೆ ಲಭಿಸಿತ್ತು. ಆದರೆ ಕೊನೆಯ 3 ಎಸೆತಗಳಲ್ಲಿ 3 ವಿಕೆಟ್‌ ಉಡಾಯಿಸುವ ಮೂಲಕ ಅವರು ತಿರುಗಿ ಬಿದ್ದರು. ಆರ್‌ಸಿಬಿ ಮತ್ತೆ ಚೇತರಿಸಿಕೊಳ್ಳಲಿಲ್ಲ. ಕೊಹ್ಲಿ, ಎಬಿಡಿ ಮತ್ತು ಸ್ಟೋಯಿನಿಸ್‌ ಅವರನ್ನು ಸತತ ಎಸೆತಗಳಲ್ಲಿ ಪೆವಿಲಿಯನ್ನಿಗೆ ಅಟ್ಟುವ ಮೂಲಕ ಗೋಪಾಲ್‌ ಹ್ಯಾಟ್ರಿಕ್‌ ಹೀರೋ ಆಗಿ ಮೆರೆದರು. ಶ್ರೇಯಸ್‌ ಗೋಪಾಲ್‌ ಐಪಿಎಲ್‌ನಲ್ಲಿ ಸಾಧಿಸಿದ ಮೊದಲ ಹ್ಯಾಟ್ರಿಕ್‌ ಇದಾಗಿದೆ. ರಾಜಸ್ಥಾನ್‌ ಪರ ಹ್ಯಾಟ್ರಿಕ್‌ ದಾಖಲಿಸಿದ 4ನೇ ಬೌಲರ್‌. ಅಜಿತ್‌ ಚಾಂಡೀಲ, ಪ್ರವೀಣ್‌ ತಾಂಬೆ, ಶೇನ್‌ ವಾಟ್ಸನ್‌ ಉಳಿದ ಮೂವರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಆರ್‌ಸಿಬಿ ಈ ಐಪಿಎಲ್‌ನಿಂದ ಹೊರಬಿದ್ದ ಮೊದಲ ತಂಡವೆನಿಸಿತು.
* ಶ್ರೇಯಸ್‌ ಗೋಪಾಲ್‌ ಟಿ20 ಕ್ರಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಹ್ಯಾಟ್ರಿಕ್‌ ಸಾಧನೆಗೈದ ಭಾರತದ 3ನೇ ಬೌಲರ್‌ ಎನಿಸಿದರು. ಇವರ ಮೊದಲ ಹ್ಯಾಟ್ರಿಕ್‌ ಇದೇ ವರ್ಷ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲಿ ದಾಖಲಾಗಿತ್ತು. ಅಮಿತ್‌ ಮಿಶ್ರಾ 3 ಸಲ, ಯುವರಾಜ್‌ ಸಿಂಗ್‌ 2 ಸಲ ಹ್ಯಾಟ್ರಿಕ್‌ ವಿಕೆಟ್‌ ಉರುಳಿಸಿದ್ದಾರೆ. ಇವರಿಬ್ಬರ ಹ್ಯಾಟ್ರಿಕ್‌ ಐಪಿಎಲ್‌ನಲ್ಲೇ ದಾಖಲಾಗಿತ್ತು. ಯುವರಾಜ್‌ 2009ರ ಋತುವಿನಲ್ಲೇ 2 ಹ್ಯಾಟ್ರಿಕ್‌ ಸಾಧಿಸಿದ್ದರು.
* ಗೋಪಾಲ್‌ ಭಾರತವನ್ನು ಪ್ರತಿನಿಧಿಸದೆ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸಾಧಿಸಿದ 3ನೇ ಬೌಲರ್‌. 2012ರಲ್ಲಿ ಅಜಿತ್‌ ಚಾಂಡೀಲ, 2014ರಲ್ಲಿ ಪ್ರವೀಣ್‌ ತಾಂಬೆ ಹ್ಯಾಟ್ರಿಕ್‌ ದಾಖಲಿಸಿದ್ದರು. ಈ ಮೂರೂ ಬೌಲರ್ ರಾಜಸ್ಥಾನ್‌ ತಂಡದವರೆಂಬುದು ಕಾಕತಾಳೀಯ.
* ಐಪಿಎಲ್‌ನ ಒಂದೇ ಪಂದ್ಯದಲ್ಲಿ ಕೊಹ್ಲಿ ಮತ್ತು ಎಬಿಡಿ ವಿಕೆಟ್‌ಗಳನ್ನು 3 ಸಲ ಹಾರಿಸಿದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆ ಗೋಪಾಲ್‌ ಅವರದಾಯಿತು. ಆಶಿಷ್‌ ನೆಹ್ರಾ 2 ಸಲ ಈ ಸಾಧನೆ ಮಾಡಿದ್ದಾರೆ. ಉಳಿದ 16 ಬೌಲರ್‌ಗಳು ಒಂದು ಪಂದ್ಯದಲ್ಲಿ ಕೊಹ್ಲಿ-ಎಬಿಡಿ ವಿಕೆಟ್‌ ಹಾರಿಸಿದ್ದಾರೆ.
* ಗೋಪಾಲ್‌ ಆರ್‌ಸಿಬಿ ವಿರುದ್ಧ 5.16ರ ಸರಾಸರಿಯಲ್ಲಿ ವಿಕೆಟ್‌ ಉರುಳಿಸಿದರು. ಇದು ನಿರ್ದಿಷ್ಟ ತಂಡವೊಂದರ ವಿರುದ್ಧ ಬೌಲರ್‌ ಓರ್ವ ದಾಖಲಿಸಿದ ಅತ್ಯುತ್ತಮ ಸರಾಸರಿಯಾಗಿದೆ (ಕನಿಷ್ಠ 10 ವಿಕೆಟ್‌ ಮಾನದಂಡ). ಆರ್‌ಸಿಬಿ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಗೋಪಾಲ್‌ 12 ವಿಕೆಟ್‌ ಉರುಳಿಸಿದ್ದಾರೆ. ಲಸಿತ ಮಾಲಿಂಗ ಡೆಕ್ಕನ್‌ ಚಾರ್ಜರ್ ವಿರುದ್ಧ 7.58 ಸರಾಸರಿ ದಾಖಲಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.
* ಸಂಜು ಸ್ಯಾಮ್ಸನ್‌ ಅವರನ್ನು ಔಟ್‌ ಮಾಡುವ ಮೂಲಕ ಯಜುವೇಂದ್ರ ಚಾಹಲ್‌ ಎಂ. ಚಿನ್ನಸ್ವಾಮಿ ಅಂಗಳದಲ್ಲಿ 50 ವಿಕೆಟ್‌ ಕಿತ್ತ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ಒಂದೇ ಅಂಗಳದಲ್ಲಿ 50 ವಿಕೆಟ್‌ ಉರುಳಿಸಿದ 4ನೇ ಬೌಲರ್‌ ಎನಿಸಿದರು. ಉಳಿದ ಮೂವರೆಂದರೆ ಲಸಿತ ಮಾಲಿಂಗ (ವಾಂಖೇಡೆ ಸ್ಟೇಡಿಯಂ), ಅಮಿತ್‌ ಮಿಶ್ರಾ (ಫಿರೋಜ್‌ ಷಾ ಕೋಟ್ಲಾ) ಮತ್ತು ಸುನೀಲ್‌ ನಾರಾಯಣ್‌ (ಈಡನ್‌ ಗಾರ್ಡನ್ಸ್‌).

Advertisement

Udayavani is now on Telegram. Click here to join our channel and stay updated with the latest news.

Next