Advertisement

ಕಡಿಮೆ ಸ್ಥಳದಲ್ಲಿ ಅಧಿಕ ಗಿಡ ಬೆಳೆಸಿದ ಸಂಕೊಳಿಗೆಯ ಶ್ರೀಧರ ಕುಂಬ್ಳೆ

10:57 AM Feb 05, 2018 | |

ಮಹಾನಗರ: ನಮಗೂ ಬೇಕಾದಷ್ಟು ಸ್ಥಳವಿದ್ದರೆ ತರಕಾರಿ ಬೆಳಸಬಹುದಿತ್ತು, ಕೃಷಿ ಮಾಡಬಹುದಿತ್ತು ಎಂದು ಹೆಚ್ಚಿನವರ ಅಭಿಪ್ರಾಯ. ಆದರೆ ಕೋಟೆಕಾರಿನ ಕೃಷಿಕರೊಬ್ಬರು ತನ್ನ ಮನೆಯ ಸುತ್ತಲಿನ ಸ್ವಲ್ಪ ಸ್ಥಳದಲ್ಲಿ ಬರೋಬ್ಬರಿ 200 ಕಾಳುಮೆಣಸಿನ ಗಿಡಗಳನ್ನು ಬೆಳೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ!

Advertisement

ಕೋಟೆಕಾರಿನ ಸಂಕೊಳಿಗೆ ನಿವಾಸಿ ಶ್ರೀಧರ ಕುಂಬ್ಳೆ ಅವರೇ ಈ ಹಿರಿಯ ಕೃಷಿಕ. ವಿಶೇಷವೆಂದರೆ ಇವರು ನಾಲ್ಕು ಇಂಚಿನ ಪೈಪ್‌ ಮೂಲಕ ಕಾಳುಮೆಣಸಿನ ಗಿಡ ನೆಟ್ಟಿರುವುದು ವಿಶೇಷವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಇವರು ಈ ಗಿಡಗಳನ್ನು ನೆಟ್ಟಿದ್ದು, ಈಗ ಗಿಡಗಳು ಉತ್ತಮ ಸ್ಥಿತಿಯಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ಫಸಲು ನೀಡುವನಿರೀಕ್ಷೆಯಲ್ಲಿದ್ದಾರೆ.


ಡಾ| ಲಕ್ಷ್ಮಣ ಹಾಗೂ ಕೃಷಿಕ ಶ್ರೀಧರ್‌ ಕುಂಬ್ಳೆ 

ಪೈಪ್‌ನಲ್ಲಿ ಕೃಷಿ ಹೇಗೆ?
ಪೈಪ್‌ನಲ್ಲಿ ಕಾಳು ಮೆಣಸಿನ ಕೃಷಿ ಮಾಡುವ ವಿನೂತನ ಕ್ರಮವನ್ನು ಶ್ರೀಧರ ಕುಂಬ್ಳೆ ಅವರೇ ಕಂಡುಹುಡುಕಿದ್ದಾರೆ. 6 ಇಂಚಿನ 4 ಅಡಿ ಉದ್ದ ಪೈಪ್‌ಗ್ಳನ್ನು ಈ ಕೃಷಿಗೆ ಬಳಸಲಾಗುತ್ತದೆ. ಪೈಪ್‌ನಲ್ಲಿ ಮೇಲಿನಿಂದ ಕೆಳಕ್ಕೆ 4 ಕಡೆಗಳಲ್ಲಿ ಸುತ್ತಲೂ 3 ಕಡೆಗಳಲ್ಲಿ ತೂತು ಮಾಡಲಾಗುತ್ತದೆ. ಬಳಿಕ ಪ್ರತಿ ತೂತಿನಲ್ಲೂ ಎರಡೆರಡು ಗಿಡಗಳನ್ನು ನೆಡಲಾಗುತ್ತದೆ. ಈ ರೀತಿ 12 ತೂತಿನಲ್ಲಿ 24 ಗಿಡಗಳನ್ನು ನೆಡಬಹುದಾಗಿದೆ.

ಪೈಪಿನೊಳಗೆ ಮಣ್ಣು, ಹೊಗೆ ಹಾಗೂ ಹಟ್ಟಿ ಗೊಬ್ಬರವನ್ನು ಹಾಕುತ್ತಾರೆ. ಆದರೆ ಗಿಡಗಳಲ್ಲಿ ರೋಗ ಹರಡುತ್ತದೆ ಎಂಬ ಕಾರಣಕ್ಕೆ ಪೈಪನ್ನು ಭೂಮಿಯೊಳಗೆ ಹೂಳುವುದಿಲ್ಲ. ಬದಲಾಗಿ ಅದರ ಕೆಳಗೆ ನೆಟ್ಟನ್ನು ಬಳಸುತ್ತಾರೆ. ಬಳಿಕ ಹಗ್ಗವನ್ನು ಬಳಸಿ ಅದನ್ನು ನೇರವಾಗಿ ನಿಲ್ಲಿಸಲಾಗುತ್ತದೆ. ಪ್ರತಿ ಗಿಡಗಳನ್ನು ನೆಡುವ ತೂತಿಗೂ ಕೂಡ ನೆಟ್‌ ಬಳಸಲಾಗುತ್ತದೆ. ಸಣ್ಣ ಕೈಗಾರಿಕೆ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಧರ್‌ ಬಿಡುವಿನ ವೇಳೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ.

ಸಾವಿರ ಗಿಡಗಳ ಹಂಬಲ
ಸಂಕೊಳಿಗೆಯಲ್ಲಿ 12 ಸೆಂಟ್ಸ್‌ ಜಾಗವನ್ನು ಹೊಂದಿರುವ ಶ್ರೀಧರ್‌ ಅವರು ಮನೆಯ ಹಿತ್ತಲಲ್ಲಿ 9 ತೆಂಗಿನಮರಗಳಿವೆ. ಹೀಗಾಗಿ ತೆಂಗಿನ ಮರದ ಬುಡದಲ್ಲಿ ಕಾಳುಮೆಣಸು ಬೆಳೆಸಲು ಸಾಧ್ಯವಿಲ್ಲ ಎಂದು ತನ್ನ ಅಂಗಳದಲ್ಲಿ ಪೈಪಿನ ಮೂಲಕ ಕಾಳುಮೆಣಸು ಕೃಷಿ ಮುಂದಾದರು. ಈಗ ಮನೆಯ ಟೆರೇಸ್‌ನಲ್ಲಿ ತರಕಾರಿ ಕೃಷಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ಇದೇ ರೀತಿ ಪೈಪ್‌ನ ಮೂಲಕ ಸಾವಿರ ಕಾಳು ಮೆಣಸಿನ ಗಿಡಗಳನ್ನು ಬೆಳೆಸುವ ಹಂಬಲ ಅವರಿಗಿದೆ.

Advertisement

ಸ್ಥಳೀಯ ತೋಟಗಾರಿಕೆ ಇಲಾಖೆ ಹಾಗೂ ಬ್ರಹ್ಮಾವರದಿಂದ ಕಾಳುಮೆಣಸಿನ ಗಿಡಗಳನ್ನು ತರಿಸಿ ನಾಟಿ ಮಾಡಿದ್ದು, ಅವುಗಳಿಗೆ ನರ್ಸರಿಯಿಂದ ಗೊಬ್ಬರ ತರುತ್ತಾರೆ. ಜತೆಗೆ ತಮ್ಮ ಬಾವಿಯಿಂದ ನೀರನ್ನು ಬಳಸುತ್ತಾರೆ. ಜತೆಗೆ ಕಾಳು ಮೆಣಸಿನ ಬಳ್ಳಿ ಹರಡುವುದಕ್ಕೆ ಈಟಿನ ಗಿಡ (ಗೊಬ್ಬರದ ಗಿಡ)ವನ್ನು ಸಣ್ಣ ಪ್ಲಾಸ್ಟಿಕ್‌ ಡಬ್ಬದಲ್ಲಿ ನೆಟ್ಟಿ ಮಾಡಿದ್ದು, ಅದು ಬೆಳದಂತೆ ಕತ್ತರಿಸಿ ಈ ಪೈಪಿನೊಳಗೆ ಹಾಕುತ್ತಾರೆ.

ಅವರ ಕೃಷಿ ಪದ್ಧತಿಯನ್ನು ಕೃಷಿ ಕೇಂದ್ರ ಪ್ರಾಧ್ಯಾಪಕ ಡಾ| ಲಕ್ಷ್ಮಣ್‌ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಸ್ಥಳೀಯ ಇಬ್ಬರು ವ್ಯಕ್ತಿಗಳು ತಮ್ಮ ಜಮೀನಿನಲ್ಲೂ ಅದೇ ರೀತಿ ಕಾಳು ಮೆಣಸು ಬೆಳೆಯಲು ನಿರ್ಧರಿಸಿದ್ದು, ಒಬ್ಬರು ಈಗಾಗಲೇ ಶ್ರೀಧರ್‌ ಅವರ ಸಹಾಯದಿಂದ ಗಿಡಗಳನ್ನು ನೆಟ್ಟಿದ್ದಾರೆ. 

ಉತ್ತಮ ಫಸಲು ಸಿಗಬಹುದು
ನಾನು ಈಗಾಗಲೇ ಶ್ರೀಧರ್‌ ಅವರ ಕೃಷಿ ಪದ್ಧತಿಯನ್ನು ವೀಕ್ಷಿಸಿದ್ದೇನೆ. ಗಿಡಗಳನ್ನು ಉತ್ತಮವಾಗಿದ್ದು, ಉತ್ತಮ ಫಸಲು ಕೂಡ ಸಿಗಬಹುದು. ಇದಕ್ಕೆ ನಿರ್ವಹಣೆ ಅಗತ್ಯವಾಗಿದ್ದು, ಪೈಪ್‌ಗ್ಳ ಆಧಾರ ಗಟ್ಟಿ ಇರಬೇಕು. ಆಧಾರ ತಪ್ಪಿದ್ದರೆ ಪೂರ್ತಿ ಗಿಡಗಳಿಗೆ ತೊಂದರೆಯಾಗುವ ಸ್ಥಿತಿ ಇದೆ.
ಡಾ| ಲಕ್ಷ್ಮಣ, ಕೃಷಿ ಪ್ರಾಧ್ಯಾಪಕ,
   ಉಳ್ಳಾಲ 

ಗಿಡಗಳು ಉತ್ತಮ ಸ್ಥಿತಿಯಲ್ಲಿದೆ
ನಾವು ಸ್ಥಳವಿಲ್ಲ ಎಂದು ಕೃಷಿಯ ಕುರಿತು ಆಸಕ್ತಿ ತೋರುವುದಿಲ್ಲ. ಈ ಕಾರಣಕ್ಕೆ ತಾನು ಸ್ಥಳವಿಲ್ಲದಿದ್ದರೂ ಹೇಗೆ ಕೃಷಿ ಮಾಡಬಹುದು ಎಂದು ಆಲೋಚಿಸಿ, ಈ ಪದ್ಧತಿಯನ್ನು ಕಂಡುಕೊಂಡಿದ್ದೇನೆ. ಈಗ ಗಿಡಗಳಿಗೆ ಒಂದೂವರೆ ತಿಂಗಳಾಗಿದ್ದು, ಉತ್ತಮವಾಗಿ ಬೆಳೆದಿದೆ. ಫಸಲು ನೀಡಲು ಕನಿಷ್ಠ ಒಂದೂವರೆ ವರ್ಷ ಆಗಬೇಕು.
ಶ್ರೀಧರ್‌ ಕುಂಬ್ಳೆ, ಹೊಸ
   ಪ್ರಯೋಗದ ಕೃಷಿಕ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next