Advertisement

ಜಗತ್ತೇ ಸಿದ್ಧಗಂಗಾ ಮಠದತ್ತ ಆಕರ್ಷಿಸಿದ ವ್ಯಕ್ತಿತ್ವ ಪೂಜ್ಯರದ್ದು

09:42 PM Apr 01, 2023 | Team Udayavani |

ತುಮಕೂರು: ನಾಡಿಗೆ ಏ.1 ಪವಿತ್ರವಾದ ದಿನ. ಡಾ.ಶಿವಕುಮಾರ ಶ್ರೀಗಳು ಈ ಭೂಮಿಯಲ್ಲಿ ಅವತರಿಸಿದ ದಿನ. ಜಗತ್ತನ್ನೇ ಸಿದ್ಧಗಂಗಾ ಮಠದತ್ತ ಆಕರ್ಷಿಸುವ ವ್ಯಕ್ತಿತ್ವ ಹೊಂದಿದ್ದ ಗುರುದೇವರು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

Advertisement

ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತ್ಯುತ್ಸವ ಹಾಗೂ ಗುರುವಂದನಾ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಶ್ರೀಗಳ ವ್ಯಕ್ತಿತ್ವ ಬಹಳ ದೊಡ್ಡದು. ಸಿದ್ಧಗಂಗಾ ಮಠವೇ ಶ್ರೀಗಳ ಜಗತ್ತು ಆಗಿತ್ತು. ಯಾವುದೇ ದೇಶ, ರಾಜ್ಯಗಳಿಗೆ ಶ್ರೀಗಳು ಹೋಗದೆ ಜಗತ್ತನ್ನೇ ಸಿದ್ಧಗಂಗಾ ಮಠದತ್ತ ಆಕರ್ಷಿಸುವ ವ್ಯಕ್ತಿತ್ವ ಉಳ್ಳವರಾಗಿದ್ದರು ಎಂದು ವಿವರಿಸಿದರು.

ಈ ಜಗತ್ತಿನಲ್ಲಿ 89 ವರ್ಷ ಮಠವನ್ನು ಮುನ್ನಡೆಸಿಕೊಂಡು ಸುದೀರ್ಘ‌ ಸೇವೆ ಮಾಡಿದವರು ಶಿವಕುಮಾರ ಸ್ವಾಮೀಜಿ. ಈ ರೀತಿಯ ಸುದೀರ್ಘ‌ ಸೇವೆ ಸಲ್ಲಿಸಿದ ಇನ್ನೊಬ್ಬ ಮಠಾಧೀಶರು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.

ಪ್ರಸಾದ ನಿಲ್ಲದಂತೆ ಎಚ್ಚರ ವಹಿಸಿದ್ದರು:
ಮಠದ ಮಕ್ಕಳನ್ನು ನೋಡಿದಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ಕೇಳಿದಾಗ ಶ್ರೀಗಳು ಅತೀವ ಸಂತೋಷ ಪಡುತ್ತಿದ್ದರು. ಮಕ್ಕಳಿಗೆ ಎಂದೂ ಪ್ರಸಾದ ನಿಲ್ಲದಂತೆ ಎಚ್ಚರ ವಹಿಸಿದ್ದರು. ಸ್ವತಃ ಶ್ರೀಗಳೇ ನಿಂತು ಅಡುಗೆ ಮಾಡಿ ಬಡಿಸುತ್ತಿದ್ದರು ಎಂದು ವಿವರಿಸಿದರು.

ಸಿದ್ಧಗಂಗೆ ಮತ್ತು ಸುತ್ತೂರು ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಪೂಜ್ಯರ ಕಾಯಕ ಶಕ್ತಿಯ ಫ‌ಲ ಸಿದ್ಧಗಂಗಾ ಮಠ ಇಂದು ಜಗತ್ತಿನಾದ್ಯಂತ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

Advertisement

ಸುತ್ತೂರು ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ಧಗಂಗೆಯನ್ನು ಪ್ರಜ್ವಲಮಾನವಾಗಿ ಬೆಳೆಸಿದ ಮಹಾನ್‌ ಬೆಳಕು ಡಾ.ಶಿವಕುಮಾರ ಸ್ವಾಮೀಜಿ. ಶ್ರೀಗಳಿಗೆ ಮತ್ತೂಬ್ಬರನ್ನು ಹೋಲಿಕೆ ಮಾಡಲಾಗದಷ್ಟು ಎತ್ತರಕ್ಕೆ ಬೆಳೆದ ಮಹಾತಪಸ್ವಿಗಳು ಎಂದು ಅಭಿಪ್ರಾಯಪಟ್ಟರು.

ಕೆರೆಕೋಡಿ-ರಂಗಾಪುರದ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಮಠ ಎಲ್ಲ ಮಠಮಾನ್ಯಗಳಿಗೆ ವಿಶ್ವವಿದ್ಯಾನಿಲಯ ಇದ್ದಂತೆ. ಸಿದ್ಧಗಂಗಾ ಶ್ರೀಗಳು ಕುಲಪತಿಗಳ ರೀತಿ ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು ಎಂದರು.

ಸಮಾರಂಭದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಬೆಳಗಾವಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಪ್ರಭಾಕರ ಕೋರೆ, ಆಶಾ ಕೋರೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಂತೇಶ ಕವಟಗಿಮಠ, ಎಸ್‌ಐಟಿ ನಿರ್ದೇಶಕರಾದ ಡಾ. ಎಂ.ಎನ್‌.ಚನ್ನಬಸಪ್ಪ, ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಮತ್ತಿತರರು ಉಪಸ್ಥಿತರಿದ್ದರು.

ಶ್ರೀಗಳಿಗೆ ಭಾರತ ರತ್ನ ನೀಡಬೇಕಿತ್ತು: ಕೋರೆ
ಭರತ ಖಂಡದ ಮಹಾ ಬೆಳಕು, ನಿಸ್ವಾರ್ಥ ಕಾಯಕ ಮಾಡಿದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿಗಿಂತಲೂ ಮಿಗಿಲಾದ ದೊಡ್ಡ ಪ್ರಶಸ್ತಿ ಸಿಗಬೇಕಾಗಿತ್ತು ಎಂದು ಬೆಳಗಾವಿ ಕೆಎಲ್‌ಇ ಸೊಸೈಟಿ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.

ನಗರದ ಸಿದ್ಧಗಂಗಾ ಮಠದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಡಾ ಶ್ರೀ ಶಿವಕುಮಾರಸ್ವಾಮೀಜಿ ರವರ 116ನೇ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 111 ವರ್ಷಗಳ ಕಾಲ ಜಾತಿ, ಮತ, ವರ್ಣ ಭೇದ ಎಣಿಸದೆ ಸಾಮಾಜಿಕ ಸೇವಾ ಕಾರ್ಯ ಮಾಡಿದ ಮಹಾನ್‌ ಮಾನವತಾವಾದಿ ಶಿವಕುಮಾರ್‌ ಶ್ರೀಗಳು ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next