Advertisement

ಅಜ್ಜನ ಜಾತ್ರೆ: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-ನೋಡಲೆರಡು ಕಣ್ಣುಗಳು ಸಾಲವು…

05:05 PM Jan 27, 2024 | Team Udayavani |

ಗವಿಸಿದ್ದಪ್ಪನ ಜಾತ್ರೆಯು ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿಯಾಗಿದೆ. ಈ ಜಾತ್ರೆಯಲ್ಲಿ ಲಕ್ಷಾಂತರ ಜನರು ಕಿಕ್ಕಿರಿದು
ಸೇರುತ್ತಾರೆ. ತಿಂಗಳಾನುಗಟ್ಟಲೇ ನಡೆಯುವ ಅಜ್ಜನ ಜಾತ್ರೆ ನೋಡುವುದೇ ಒಂದು ವೈಭವ. ದೇಶ- ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸುತ್ತಿರುವುದು ಈ ಜಾತ್ರೆಯ ವಿಶೇಷತೆ. ಸಿದ್ಧಗಂಗಾಮಠದ ತ್ರಿವಿಧ ದಾಸೋಹಿ ಡಾ|ಶಿವಕುಮಾರ ಮಹಾಸ್ವಾಮಿಗಳು,

Advertisement

ಡಾ|ಎಂ.ಎಂ. ಕಲಬುರ್ಗಿ, ಡಾ|ಚಂದ್ರಶೇಖರ ಕಂಬಾರ, ಡಾ|ಗೊ.ರು.ಚನ್ನಬಸಪ್ಪ, ಧರ್ಮಸ್ಥಳ ಧರ್ಮಾ ಧಿಕಾರಿ ಡಾ|ವೀರೇಂದ್ರ ಹೆಗಡೆ, ಯೋಗಗುರು ಬಾಬಾ ರಾಮದೇವ, ಅಣ್ಣಾ ಹಜಾರೆ ಸೇರಿದಂತೆ ರಾಷ್ಟ್ರದ ಹಲವಾರು ಕ್ಷೇತ್ರದ ಸಾಧಕರು, ಗಣ್ಯರು ಗವಿಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ.

ಅಜ್ಜನ ಜಾತ್ರೆ ಎಂದ ಕೂಡಲೇ ಮೊದಲು ನಮ್ಮ ಕಣ್ಮುಂದೆ ಬರುವ ದೃಶ್ಯವೇ ಜಾನಪದ ಸೊಗಡು. ಜಾತ್ರೆಗಳೆಂದರೆ ಗ್ರಾಮೀಣ ಜನಜೀವನದ ಅವಿಭಾಜ್ಯ ಅಂಗ. ಗ್ರಾಮೀಣ ಭಾಗದ ರೈತರು ತಾವು ಬೆಳೆದ ಧಾನ್ಯ, ತರಕಾರಿ, ತಾವೇ ಮನೆಯಲ್ಲಿ ಸಿದ್ಧಪಡಿಸಿದ ಮಾದಲಿ, ತಮ್ಮ ಕೈಯಾರೆ ಸುಟ್ಟ ಜೋಳದ ರೊಟ್ಟಿ, ಹಪ್ಪಳ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಹಾಲು, ತುಪ್ಪ ತೆಗೆದುಕೊಂಡು, ಎತ್ತುಗಳ ಕೊರಳಿಗೆ ಗಂಟೆ, ಗೆಜ್ಜೆ ಕಟ್ಟಿ, ಕೋಡುಗಳಿಗೆ ಕೋಡಣಸುಗಳನ್ನು ಹಾಕಿ, ಹಣೆಗೆ ಹಣೆಕಟ್ಟು, ಗೊಂಡೆವು ಕಟ್ಟಿಕೊಂಡು ಎತ್ತಿಗೆ ಜೂಲಾ ಹಾಕಿಕೊಂಡು ಅವುಗಳನ್ನು ಮಧುವಣಿಗರಂತೆ ಸಿಂಗರಿಸಿ, ಬಂಡಿ ಗಾಲಿಗಳಿಗೆ ಬಣ್ಣ ಹಚ್ಚಿ, ಬಂಡಿಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಬಂಡಿಗಳಿಗೆ ಬಾಳೆದಿಂಡುಗಳನ್ನು ಕಟ್ಟಿಕೊಂಡು ಮಠಕ್ಕೆ ಹೋಗುತ್ತಾರೆ.

ತಮ್ಮೂರಿನಿಂದ ಮಠಕ್ಕೆ ಹೋಗುವ ಮಧ್ಯದಲ್ಲಿ ಬರುವ ಊರು ಆರಂಭವಾದಾಗಿನಿಂದ
ಮುಕ್ತಾಯದವರೆಗೆ ಭಜನಾ ಮೇಳದ ಕಲಾವಿದರು ಭಜನೆ ಮಾಡುತ್ತ ಹೋಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಭಕ್ತಿಭಾವದಿಂದ ಹಾಡುತ್ತಾ, ಹಲಗೆ, ಶಹನಾಯಿ, ಬಾರಿಸುತ್ತ, ಗವಿಸಿದ್ದಪ್ಪಜ್ಜನ ಸ್ಮರಣೆ, ಧ್ಯಾನ ಮಾಡುತ್ತ, ತಾವು ತಂದ ದವಸ-ಧಾನ್ಯ ಮಠಕ್ಕೆ ಅರ್ಪಿಸಿ, ಮನದಲ್ಲಿ ಕೃತಜ್ಞತಾ ಭಾವ ತಾಳಿ ಸಂತೃಪ್ತಿ ಪಡುತ್ತಾರೆ.

Advertisement

ಇಡೀ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತ
ಸಮುದಾಯಕ್ಕೆ ಪ್ರಸಾದ ವ್ಯವಸ್ಥೆಯಲ್ಲಿ ಗ್ರಾಮೀಣರದೇ ಸಿಂಹಪಾಲು. ಅಜ್ಜನ ಜಾತ್ರೆ ದಿವಸ ಜೋಡುಬಸವನ ಬಂಡಿ ಕಟ್ಟಿಕೊಂಡು ಎತ್ತಿನ ಕೊರಳಲ್ಲಿರುವ ಗಂಟೆ ಗೆಜ್ಜೆಗಳ ಘಲ್‌ ಘಲ್‌ ನೀನಾದವೇ ಕೇಳುಗರಿಗೆ ಇಂಪೆನಿಸುತ್ತದೆ. ಜನರು ಚಕ್ಕಡಿಯಲ್ಲಿ ಜಾತ್ರೆಗೆ ಬರುವುದನ್ನು ನೋಡುವುದೇ ಸಂಭ್ರಮ.

ಯುವಕ-ಯುವತಿಯರು ಹೊಸ ಹೊಸ ಉಡುಪು ಧರಿಸಿಕೊಂಡು, ಅಲಂಕಾರ ಮಾಡಿಕೊಂಡು ಉತ್ಸಾಹದಿಂದ ಪಾದಯಾತ್ರೆ ಮೂಲಕ ಜಾತ್ರೆಗೆ ಹೋಗುವ ದೃಶ್ಯ ಸುಂದರವಾಗಿ ಕಾಣುತ್ತದೆ. ಜನರು ತಮ್ಮ ಮನೆಗೆ ದೂರದ ತಮ್ಮ ಬೀಗರನ್ನು ಮುಂಚಿತವಾಗಿಯೇ ಬರಮಾಡಿಕೊಂಡಿರುತ್ತಾರೆ. ಹೊಸದಾಗಿ ಮದುವೆಯಾದ ಜೋಡಿಗಳಂತೂ ಜಾತ್ರೆಗೆ ಹೋಗಿ ತೇರು ಎಳೆಯುವುದನ್ನು ನೋಡುವುದು ಕಡ್ಡಾಯವಾಗಿರುತ್ತದೆ. ಜಾತಿ, ಮತ, ಪಂಥ ಇವು ಯಾವುದನ್ನೂ ನೋಡದೇ ಎಲ್ಲ ಜಾತಿಯ, ಎಲ್ಲ ಧರ್ಮದ ಅನುಯಾಯಿಗಳು ಇಲ್ಲಿ ನಡೆದುಕೊಳ್ಳುತ್ತಾರೆ. ವಿಶೇಷವಾಗಿ ಹಳ್ಳಿಗಳಲ್ಲಿ ಗವಿಸಿದ್ಧೇಶ್ವರ ಬಗ್ಗೆ ಅಪಾರವಾದ ಭಕ್ತಿಯುಳ್ಳ ಜನರಿದ್ದಾರೆ.

ಭಕ್ತರು ಪೂಜ್ಯರ ಅನುಭಾವಿಕ ನುಡಿಗಳಿಂದ ಪ್ರಭಾವಿತರಾಗಿದ್ದಾರೆ. ಗ್ರಾಮೀಣ ಜನತೆಯ ಸಮಸ್ಯೆಗಳಿಗೆ ಶ್ರೀಗಳು ಸ್ಪಂದಿಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಪೂಜ್ಯರ ಬಗ್ಗೆ ಭಕ್ತಿಭಾವ ಹೊಂದಿದ್ದಾರೆ. ಅಜ್ಜನ ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆಹ್ವಾನಿತ ಮಹಿಳಾ ಮತ್ತು ಪುರುಷ ತಂಡಗಳಿಂದ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿರುತ್ತದೆ. ಮಲ್ಲಗಂಬ, ಕುಸ್ತಿ ಆಡಿಸಲಾಗುತ್ತದೆ. ಈ ಮೂಲಕ ಭಕ್ತ ಸಮೂಹಕ್ಕೆ ಕ್ರೀಡಾ ಮನೋಭಾವನೆ ಬೆಳೆಸಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸುವಲ್ಲಿ ಶ್ರಮಿಸಲಾಗುತ್ತದೆ.

ಗವಿಸಿದ್ದೇಶ್ವರ ಮಠದ ಮೇಲ್ಭಾಗದಲ್ಲಿ ಅನ್ನಪೂರ್ಣೇಶ್ವರಿ ಮೂರ್ತಿ ಇದೆ. ಅನ್ನಪೂರ್ಣೆàಶ್ವರಿ ದೇವಿಗೆ ಭಕ್ತಿಯಿಂದ
ಉಡಿ ತುಂಬುವ ಕಾರ್ಯ ಸಂಭ್ರಮದಿಂದ ನಡೆಯುತ್ತದೆ. ಲಕ್ಷಾಂತರ ಮಹಿಳೆಯರು ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಾಗರೋಪಾದಿಯಲ್ಲಿ ಬರುವ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಉಡಿ ತುಂಬಿಸಿಕೊಳ್ಳುತ್ತಾರೆ.

ಅಜ್ಜನ ಜಾತ್ರೆಯಲ್ಲಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನ ಜನರು ಪಾಲ್ಗೊಳ್ಳುತ್ತಾರೆ. ಕೆಲ ಅಜ್ಜಂದಿರಂತೂ ಧೋತರ ಉಟ್ಟು, ಮಂಜೂರು ಪಾಟು ಅಂಗಿ ಹಾಕಿಕೊಂಡು, ತಲೆಯ ಮೇಲೆ ಜರತಾರಿ ರೂಮಾಲು ಸುತ್ತಿಕೊಂಡು, ಹೆಗಲ ಮೇಲೊಂದು ಟವಲ್‌ ಹಾಕಿಕೊಂಡು, ಮೊಮ್ಮಕ್ಕಳನ್ನು ಹೆಗಲ ಮೇಲೆ ಕೂಡಿಸಿಕೊಂಡು ಅಜ್ಜನ ಜಾತ್ರೆಯಲ್ಲಿ ಪಾಲ್ಗೊಂಡಿರುತ್ತಾರೆ ಗ್ರಾಮೀಣ ಪ್ರದೇಶದ ಜನರು ತಾವು ಬೆಳೆದ ಕಾಳುಕಡಿಯನ್ನು ಅಜ್ಜನ ಜಾತ್ರೆಗೆ ಅರ್ಪಿಸುತ್ತಾರೆ.

ದಾಸೋಹದಲ್ಲಿ ಅಡುಗೆ ಮಾಡುವ ಸೇವೆಯಲ್ಲಿ ಗ್ರಾಮೀಣ ಪ್ರದೇಶದ ಜನರೇ ಹೆಚ್ಚಿರುತ್ತಾರೆ. ಮನೆಯ ಎಲ್ಲಾ ಕೆಲಸಗಳನ್ನು ಬಿಟ್ಟು ತಿಂಗಳಗಟ್ಟಲೆ ನಡೆಯುವ ದಾಸೋಹ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.

ಚಿಕ್ಕೇನಕೊಪ್ಪದ ಶ್ರೀ ಶಿವಶಾಂತವೀರ ಶರಣರು ಶ್ರೀಮಠದ 16ನೇ ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯತನಕ ಹೂವಿನ ಹಾಸಿಗೆ ಮೇಲೆ ದೀರ್ಘ‌ದಂಡ ನಮಸ್ಕಾರ ಹಾಕುತ್ತಾರೆ. ವಿವಿಧ ಹಳ್ಳಿಯ ಜನರು ತಮ್ಮ ತಮ್ಮ ಊರಿನಿಂದ ಭಜನಾ ತೆಗೆದುಕೊಂಡು ಬಂದು ಭಜನೆ ಪದ ಹಾಡುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.

ಜಾತ್ರಾ ಸಂದರ್ಭದಲ್ಲಿ ನಡೆಯುವ ತೆಪ್ಪೋತ್ಸವ, ಪಟೋತ್ಸವದಲ್ಲಿ ಗ್ರಾಮೀಣ ಪ್ರದೇಶದ ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಆಗಸದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸಿ ಕುಣಿದು ಕುಪ್ಪಳಿಸುವಂತೆ ಮಾಡುವ “ಮದ್ದು ಸುಡುವ ಕಾರ್ಯಕ್ರಮ’ದಲ್ಲಿ ಬಹುಪಾಲು ಗ್ರಾಮೀಣ ಜನರೇ ಕಿಕ್ಕಿರಿದು ತುಂಬಿರುತ್ತಾರೆ. ಈ ಕಾರ್ಯಕ್ರಮ ಮುಗಿಯುವವರೆಗೆ ಗ್ರಾಮೀಣ ಪ್ರದೇಶದ ಜನರು ಕದಲಲ್ಲ.

ಜಾತ್ರೆಗೆ ಹೋದ ಜನರು, ಗೆಳೆಯ-ಗೆಳತಿಯರು ಮತ್ತು ಕುಟುಂಬದ ಸದಸ್ಯರು ಸೇರಿಕೊಂಡು ಜಾತ್ರೆಯಲ್ಲಿ ಸಿಗುವ ತಿನಿಸುಗಳನ್ನು ತಿನ್ನುತ್ತ ಕುಳಿತಿರುವುದನ್ನು ಕಾಣಬಹುದಾಗಿದೆ. ಮಂಡಳ-ದಾಣಿ, ಮಿರ್ಚಿ ತಿನ್ನದಿದ್ದರೆ ಜಾತ್ರೆ ಅಪೂರ್ಣವಾಗುತ್ತದೆ. ಮನೆಗೆ ಬರುವ ಬೀಗರಿಗೆ ಜಿಲೇಬಿ, ಬೆಂಡು, ಬತ್ತಾಸ, ಮಂಡಾಳ ಖರೀದಿಸಿ ಕೊಡುವುದರ ಜತೆಗೆ ತಾವೂ ಕೂಡ ಖರೀದಿಸಿಕೊಂಡು ಹೋಗುತ್ತಾರೆ.

ಬಳೆಯ ಅಂಗಡಿಗಳ ಮುಂದೆ ಮಹಿಳೆಯರು ತಮಗಿಷ್ಟವಾದ ಬಳೆಗಳನ್ನು ಹಾಕಿಸಿಕೊಳ್ಳುತ್ತಾರೆ. ಜತೆಗೆ ಜಾತ್ರೆಗೆ ತಮ್ಮ ಮನೆಗೆ
ಬಂದಿದ್ದ ಬೀಗರಿಗೂ ಬಳೆಗಳನ್ನು ಹಾಕಿಸುತ್ತಾರೆ.
*ಡಾ|ಹನುಮಂತಪ್ಪ ಅಂಡಗಿ ಚಿಲವಾಡಗಿ
ಅಧ್ಯಕ್ಷರು, ಜಿಲ್ಲಾ ಚುಟುಕು
ಸಾಹಿತ್ಯ ಪರಿಷತ್ತು, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next