Advertisement

ಭಾವ ರಸಸ್ವಾದನೆ ಶ್ರಾವ್ಯಾ ಭರತನಾಟ್ಯ

06:14 PM Oct 03, 2019 | mahesh |

ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ರಂಗಪ್ರವೇಶ ಮಾಡಿದ ಕು| ಶ್ರಾವ್ಯಾ ಪಿ. ಶೆಟ್ಟಿಯವರ ನೃತ್ಯವು ಅರ್ಥಪೂರ್ಣವಾಗಿ ಮೂಡಿಬಂತು.ಗುರು ವಿ| ಪ್ರತಿಮಾ ಶ್ರೀಧರ್‌ ನಿರ್ದೇಶನದಲ್ಲಿ ಮೂಡಿಬಂದ ನೃತ್ಯ ಪ್ರಸ್ತುತಿಯು ಕಲಾಸಕ್ತರ ಮನಸ್ಸಿಗೆ ಮುದ ತಂದುಕೊಟ್ಟಿತು.

Advertisement

ಮೊದಲಿಗೆ ಬಹಳ ಅಪರೂಪ ರಾಗ‌ವಾದ ಕದ್ಯೋತ್‌ಕಾಂತಿ ಆದಿ ತಾಳದ ಪುಷ್ಪಾಂಜಲಿಯೊಂದಿಗೆ ನೃತ್ಯ ಆರಂಭಿಸಿ ಮುಂದಿನ ನೃತ್ಯ ಪ್ರಸ್ತುತಿಗೆ ಶೋಭೆಯನ್ನು ತಂದರು. ಎರಡನೆಯದಾಗಿ ತುಳಸೀವನರ‌ ಕೃತಿಯಾದ ಭಜಮಾನಸ ಎಂಬ ಗಣೇಶ ಸ್ತುತಿ. ಈ ಸ್ತುತಿಯಲ್ಲಿ ಸಾಹಿತ್ಯದ ಕೊನೆಗೆ ಸಂಗೀತದ ಸ್ವರಗಳನ್ನು ಜೋಡಿಸಿ ಅದಕ್ಕೆ ಸುಂದರ ಅಡವುಗಳ ಜೋಡಣೆಯೊಂದಿಗೆ ಸಂಯೋಜಿಸಿದ ನೃತ್ಯಾಭಿನಯವು ಕಲಾ ಕೈಂಕರ್ಯಕ್ಕೆ ಮೆರುಗನ್ನು ತ‌ಂದಿರಿಸಿತು. ಮುಂದಿನ ಪ್ರಸ್ತುತಿ ಭರತನಾಟ್ಯ ನೃತ್ಯ ಬಂಧದಲ್ಲಿ ಅತ್ಯಂತ ಕ್ಲಿಷ್ಟಕರವಾದ ಪದವರ್ಣ. ಇಲ್ಲಿ ಕಲಾವಿದೆಯು ಆಯ್ದುಕೊಂಡ ಪದವರ್ಣ ದಂಡಾಯುಧ ಪಾಣಿಪಿಳ್ಳೆ„ ಇವರ ರಚನೆ ಖರಹರಪ್ರಿಯ ರಾಗ ಆದಿತಾಳದ ಮೋಹ ಮಾ ಆಗಿನೇ ಈ ವರ್ಣದ ಪಲ್ಲವಿ ಸಾಹಿತ್ಯದ ತಾತ್ಪರ್ಯದಂತೆ ನಾಯಕಿಯು ತನ್ನ ಮನದಾಳದಲ್ಲಿರುವ ಮೋಹಕತೆಯನ್ನು ತನ್ನ ಸಖೀಯಲ್ಲಿ ಪ್ರಚುರಪಡಿಸಿ ತನ್ನ ಈ ಅವಸ್ಥೆಗೆ ಕಾರಣವಾದ ನಾಯಕನನ್ನು ಅರ್ಥಾತ್‌ ಶಿವನನ್ನು ಕರೆದು ತಾ ಎಂದು ಅಂಗಲಾಚಿ ಬೇಡುವ ಕ್ಷಣಗಳು ವರ್ಣದುದ್ದಕ್ಕೂ ಅಭಿವ್ಯಕ್ತವಾಗುತ್ತಿತ್ತು. ಮನ್ಮಥನ ಪಂಚ ಬಾಣಗಳಿಂದ ನಾಯಕಿಯಲ್ಲಾಗುವ ಮನದ ತುಡಿತವನ್ನು ಕಲಾವಿದೆ ಭಾವಪೂರ್ಣವಾಗಿ ಪ್ರದರ್ಶಿಸಿ ದರು. ಮುಂದೆ ಶಿವನ ಆನಂದ ತಾಂಡವದ ಸಂಚಾರಿ ಭಾಗ ವನ್ನು ಅಭಿನಯಿಸುತ್ತಾ ನಾಯಕಿಯು ನಾಯಕನಿಗಾಗಿ ಪರಿತಪಿಸುವ ವಿರಹೋತ್ಕಂದಿತ ನಾಯಕಿಯ ತುಡಿತವನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದಾರೆ. ಕೆಲವೊಂದು ಕ್ಷಣದಲ್ಲಿ ತನ್ನ ಭಾವುಕತೆಯ ಮಗ್ನತೆಯಿಂದ ಕೊಂಚ ವಿಚಲಿತವಾದಂತೆ ಕಂಡರೂ ವರ್ಣದ ಚೌಕಟ್ಟಿನಿಂದ ಹೊರಬಾರದೆ ಜತಿ ಹಾಗೂ ಅಭಿನಯಗಳ ಸಮ್ಮಿಶ್ರಯತೆಯಿಂದ ರಸಿಕರ ಮನಸ್ಸನ್ನು ಹಿಡಿದಿಟ್ಟರು.

ಉತ್ತರಾರ್ಧದಲ್ಲಿ ಮೀನಾಕ್ಷಿ ಪಂಚರತ್ನವೆಂಬ ಕೃತಿ. ಇಲ್ಲಿ ಬರುವ ಐದು ರತ್ನಗಳಿಗೂ ಕ್ರಮವಾಗಿ ತಿಲಂಗ್‌, ಶ್ರೋತಸ್ವಿನಿ, ಸುಮನೇಶರಂಜನಿ, ಶುದ್ಧ ಧನ್ಯಾಸಿ, ಹಾಗೂ ಅಮೃತವರ್ಷಿಣಿ ರಾಗಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ರಾಗಗಳು ಔಡವ ರಾಗಳಾಗಿದ್ದು ಹಾಡುಗಾರ ವಿ| ಸ್ವರಾಗ್‌ ಮಾಹೆ ಇವರ ಕಲ್ಪನೆಯಲ್ಲಿ ಈ ರಾಗ ಸಂಯೋಜಿತವಾಗಿದೆ. ಅಲ್ಲದೆ ಈ ಔಡವ ರಾಗಗಳು ಸಗಮಪನಿಸ ಸನಿಪಮಗಸ ಈ ಸ್ವರಗಳನ್ನೇ ಹೊಂದಿದ್ದು ರಾಗಕ್ಕೆ ಅನುಗುಣವಾಗಿ ಸ್ವರಸ್ಥಾನಗಳು ಮಾತ್ರ ಬೇರೆಯಾಗಿದೆೆ. ಅನಂತರದ ಪ್ರಸುತಿ ತುಳಸೀದಾಸರ ರಚನೆಯಾದ ಶ್ರೀ ರಾಮಚಂದ್ರ ಕೃಪಾಳು ಭಜಮನ. ಇಲ್ಲಿ ಕೌಸಲ್ಯೆಯ ವಾತ್ಸಲ್ಯ ಶೃಂಗಾರವೇ ಪ್ರಧಾನವಾಗಿದ್ದುª ನೃತ್ಯದುದ್ದಕ್ಕೂ ಶ್ರೀ ರಾಮಚಂದ್ರನ ಬಾಲ್ಯ ಹಾಗೂ ಪ್ರೌಢಾವಸ್ಥೆಗಳನ್ನು ತಾಯಿಗೆ ತನ್ನ ಕಂದನ ಬಗ್ಗೆ ಇರುವ ಅಪಾರ ಪ್ರೀತಿ, ಔದಾರ್ಯ ಹಾಗೂ ಕರುಣೆಯ ವಾತಾವರಣವನ್ನು ಸೃಷ್ಟಿಸಿದಂತೆ ಹಾಡುಗಾರರ ಭಾವುಕತೆಯ ಭಾವನೆಗಳಿಗೆ ಸ್ಪಂದಿಸಿ ಕಲಾವಿದೆ ಇಲ್ಲಿ ತನ್ಮಯತೆಯಿಂದ ಅಭಿನಯಿಸಿ ಸೈ ಎಣಿಸಿಕೊಂದಿರುತ್ತಾರೆ.

ಕೊನೆಯದಾಗಿ ಪ್ರದರ್ಶಿಸಿದ ನೃತ್ಯಬಂಧ ತಿಲ್ಲಾನ ಇದು ಮಧುರೈ ಕೃಷ್ಣನ್‌ರವರ ಕಾಫಿ ರಾಗದ ಆದಿತಾಳದಲ್ಲಿದ್ದು, ಸಹಜವಾಗಿ ತಿಲ್ಲಾನಗಳು ಹಲವು ಶಿಲ್ಪಭಂಗಿ, ಮೈಯಡವು ಹಾಗೂ ಅಡವುಗಳ ವಿಶಿಷ್ಟ ಜೊಡಣೆಯಿಂದ ಕೂಡಿರುತ್ತದೆ. ಆದರೆ ಇಲ್ಲಿ ತಾಳಭೇಧ‌ಗಳಿಂದ ಕೂಡಿದ ಜುಗಲ್ಬಂದಿಯು ಏರ್ಪಟ್ಟು ಕಲಾವಿದೆ ಹಾಗೂ ನಟುವಾನರರ ದ್ವಂದ್ವ ಪೈಪೋಟಿಯಿಂದ ಹೊಸ ಆಯಾಮವನ್ನು ಸೃಷ್ಟಿಸಿತು.

ವಿ| ರಂಜನಿ ಕೃಷ್ಣ ಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next