Advertisement

ಬಿಸಿಲ ಝಳಕ್ಕೆ ಜೈನ ಕಾಶಿ ಯಾತ್ರಿಗಳ ಸಂಖ್ಯೆ ಕ್ಷೀಣ

04:44 PM Apr 25, 2023 | Team Udayavani |

ಚನ್ನರಾಯಪಟ್ಟಣ: ವಿಶ್ವ ವಿಖ್ಯಾತ ಶ್ರವಣಬೆಳಗೊಳದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು ಬಿಕೋ ಎನ್ನುತ್ತಿದೆ. ಪ್ರವಾಸಿ ತಾಣದಲ್ಲಿ ಜನರಿಲ್ಲದೆ ಬಣಗುಡುತ್ತಿರುವುದಕ್ಕೆ ಬಿಸಿಲ ಧಗೆಯೇ ಕಾರಣ ಎಂಬುದು ಸ್ಥಳೀಯರ ಮಾತು.

Advertisement

ಬೇಸಿಗೆ ಆರಂಭವಾದಾಗಿನಿಂದ ಬಿಸಿಲ ತಾಪ ಕನಿಷ್ಠ 25 ರಿಂದ ಗರಿಷ್ಠ 37 ಡಿಗ್ರಿವರೆಗೆ ಏರಿದೆ. ಈಗಲೂ ಅಷ್ಟೇ ಪ್ರಮಾಣದ ಬಿಸಿಲ ಪ್ರಖರತೆ ಮುಂದುವರೆದಿದೆ. ಹಾಗಾಗಿ ವೈರಾಗ್ಯ ಮೂರ್ತಿ ದರ್ಶನ ಪಡೆಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ. ಪ್ರತಿ ನಿತ್ಯ ಐದಾರು ಸಾವಿರ ಮಂದಿ ಪ್ರವಾಸಿಗರು ಜೈನ ಕಾಶಿಗೆ ಭೇಟಿ ನೀಡಿ ಚಂದ್ರಗಿರಿ ಮತ್ತು ಇಂದ್ರಗಿರಿ ಎರಡೂ ಬೆಟ್ಟವನ್ನು ಏರುತ್ತಿದ್ದರು. ಪ್ರಸಕ್ತ ವರ್ಷ ಬಿಸಿಲ ಝಳ ಹೆಚ್ಚಿದ್ದು ದಿನೇ ದಿನೇ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ.

ತಾಪಮಾನ ಏರಿಕೆ: ಮಾರ್ಚ್‌ ಮೊದಲ ವಾರದಿಂದ ಪ್ರಾರಂಭವಾದ ಬೇಸಿಗೆ ಏಪ್ರಿಲ್‌ ಕೊನೆ ವಾರದ ಸಮೀಪಿಸುತ್ತಿದ್ದರು ಬಿಸಿಲ ತಾಪಮಾನ ಕಡೆ ಮೆ ಯಾಗಿಲ್ಲ. ಯುಗಾದಿ ಹಬ್ಬದ ಸಮಯದಲ್ಲಿ ವರುಣ ಕೃಪೆ ತೋರುತ್ತಾರೆ. ಅಂದು ಕೊಂಚ ಮಟ್ಟಿಗೆ ತಾಪಮಾನ ಕಡಿಮೆಯಾಗಬಹುದು ಎಂದುಕೊಂಡರೆ ಏಪ್ರಿಲ್‌ ತಿಂಗಳು ಅಂತ್ಯ ಆಗುತ್ತಿದ್ದರು ಮಳೆರಾಯನ ಕೃಪೆ ಇಲ್ಲದೆ ಬಂಡೆಗಳು ಬೆಂಕಿಯ ಚಂಡುಗಳಾಗುತ್ತಿವೆ.

ಆದಾಯವಿಲ್ಲ: ಶ್ರೀಕ್ಷೇತ್ರಕ್ಕೆ ಆಗಮಿಸುವ ಬೆರಳೆಣಿಕೆಯಷ್ಟು ಮಂದಿ ಪ್ರವಾಸಿಗರು ಬೆಳಗ್ಗೆ 6 ಗಂಟೆಗೆ ಬೆಟ್ಟವೇರಿ ದೇವರ ದರ್ಶನ ಪಡೆದು, ಬೆಟ್ಟದಲ್ಲಿನ ಬಸದಿಗಳನ್ನು ವೀಕ್ಷಣೆ ಮಾಡಿ 11 ಗಂಟೆಯ ಒಳಗೆ ಕ್ಷೇತ್ರದಿಂದ ಹೊರಗೆ ಹೋಗುತ್ತಿದ್ದಾರೆ. ಇದರಿಂದಾಗಿ ಶ್ರವಣಬೆಳಗೊಳದಲ್ಲಿ ವ್ಯಾಪಾರವಿಲ್ಲದೆ ವರ್ತಕರು ತಲೆ ಮೇಲೆ ಕೈಹೊತ್ತು ಕೊಂಡು ಕೂರುವಂತಾಗಿದೆ. ಅಂಗಡಿಗಳತ್ತ ಗ್ರಾಹಕರು ಸುಳಿಯುತ್ತಿಲ್ಲ. ಇದರಿಂದಾಗಿ ಆದಾಯವಿಲ್ಲದೆ ವರ್ತಕರು ವಾಣಿಜ್ಯ ಸಂಕಿರ್ಣದ ಬಾಡಿಕೆ ಕಟ್ಟಲು ಸಾಲ ಮಾಡುವಂತಾಗಿದೆ.

ಕಲ್ಲಂಗಡಿಗೆ ಬೇಡಿಕೆ: ರಸ್ತೆ ಬದಿ ಕಲ್ಲಂಗಡಿ ಹಣ್ಣು ಮಾರಾಟ ಮಾರುವವರಿಗೆ ಎಲ್ಲಿಲ್ಲದೆ ಬೇಡಿಕೆಯಿದೆ. ಬೆಟ್ಟ ಏರುವ ಪ್ರವಾಸಿ ಗರು ಕಲ್ಲಂಗಡಿ ಹೊತ್ತು ಹೋಗುತ್ತಿದ್ದು, ನೆತ್ತಿಯ ಮೇಲೆ ಸೂರ್ಯನ ತಾಪ, ಕಾದ ಬಂಡೆಯ ಚುರುಕು ಎಷ್ಟು ನೀರು ಕುಡಿದರು ಚಾರಣಿಗಯಾತ್ರಿಗಳ ದಾಹ ನೀಗುತ್ತಿಲ್ಲ. ಆದ್ದರಿಂದ ಕ್ಷೇತ್ರಕ್ಕೆ ಆಗಮಿಸುವ ರಾಜ್ಯ ಮತ್ತು ಹೊರ ರಾಜ್ಯದ ಪ್ರವಾಸಿಗರು ಕಲ್ಲಂಗಡಿಗೆ ಮಾರು ಹೋಗುತ್ತಿದ್ದಾರೆ.

Advertisement

ಬೇಸಿಗೆ ರಜೆ ಇದ್ದರೂ ಸುಳಿಯುತ್ತಿಲ್ಲ: ಮಕ್ಕಳಿಗೆ ಪರೀಕ್ಷೆ ಇರುವ ಸಮಯದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವುದು ಮಾಮೂಲು. ಆದರೆ, ಸಾಲು ಸಾಲು ರಜೆಗಳು ಮಕ್ಕಳಿಗೆ ಬೇಸಿಗೆ ರಜೆ ಇದ್ದರೂ ಪ್ರವಾಸಿಗರು ಮಾತ್ರ ಇತ್ತ ಸುಳಿಯುತ್ತಿಲ್ಲ. ಪ್ರತಿ ವರ್ಷ ನಿತ್ಯವೂ ನೂರಾರು ಮಂದಿ ವಿದೇಶಿ ಪ್ರವಾಸಿಗರು ಕ್ಷೇತ್ರದಲ್ಲಿ ಕಾಣಿಸುತ್ತಿದ್ದರು. ಈಗ ಅವರ ಸಂಖ್ಯೆಯೂ ಇಳಿಮುಖವಾಗಿದೆ ಎನ್ನುತ್ತಾರೆ ವರ್ತಕ ಶ್ರೇಯಸ್‌.

ಉತ್ತರ ಭಾರತದ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌, ದೆಹಲಿ ರಾಜ್ಯಗಳಿಂದ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದರು, ಬಿಸಿಲಿನ ತಾಪಕ್ಕೆ ಕ್ಷೇತ್ರಕ್ಕೆ ಆಗಮಿಸುವ ಪ್ರವಾ ಸಿಗರ ಸಂಖ್ಯೆ ಕಡಿಮೆಯಾಗಿದೆ. ಶಾಲಾ- ಕಾಲೇಜುಗಳು ರಜೆ ತಿಂಗಳಲ್ಲಿ ಬಿಕೋ ಎನ್ನುತ್ತಿವೆ. ಜೂನ್‌ ಇಲ್ಲವೆ ಜುಲೈ ತಿಂಗಳ ಲ್ಲಿಯಾದರು ಹೆಚ್ಚು ಮಂದಿ ಭೇಟಿ ನೀಡಬಹುದು. ಚೇತನ್‌ ಜೈನ್‌, ಶ್ರವಣಬೆಳಗೊಳ

ಶಾಮಸುಂದರ್‌ ಕೆ ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next