Advertisement

ಶ್ರವಣಬೆಳಗೊಳ ಈಗ ಅಭಿವೃದ್ಧಿ ಪಥದತ್ತಸಾಗಿದೆ

06:03 PM Feb 08, 2018 | |

ಹಾಸನ: ಬಾಹುಬಲಿ ಮೂರ್ತಿಯ ಸತತ ನಾಲ್ಕನೇ ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಿರುವ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು, 88ನೇ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರದ ಪ್ರಥಮ ಪ್ರಜೆ ಕೋವಿಂದ್‌ ಚಾಲನೆ ನೀಡಿದ ಕ್ಷಣ ಹರ್ಷದಾಯಕವಾಗಿದೆ. ಶ್ರವಣಬೆಳಗೊಳವೀಗ ಅಭಿವೃದ್ಧಿಯ ಪರ್ವದತ್ತ ಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಚಾವುಂಡರಾಯ ಮಂಟಪದಲ್ಲಿ ಬುಧವಾರ ನಡೆದ ಬಾಹುಬಲಿಮೂರ್ತಿಯ 88ನೇ ಮಹಾಮಸ್ತಕಾಭಿಷೇಕ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಹಾಮಹಾಸ್ತಕಾಭಿಷೇಕಗಳನ್ನು ರಾಷ್ಟ್ರಪತಿಯವರೇ ಉದ್ಘಾಟಿಸುತ್ತಾ ಬಂದಿರುವುದು ಶ್ರವಣ ಬೆಳಗೊಳದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಾಖಲೆಯಾಗಿದೆ. 1981ರ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕಕ್ಕೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಆಗಮಿಸಿದ್ದರು. 

1993ರ ಮಹಾ ಮಸ್ತಕಾಭಿಷೇಕದ ಉದ್ಘಾಟನೆಗೆ ರಾಷ್ಟ್ರಪತಿ ಶಂಕರ್‌ ದಯಾಳ್‌ ಶರ್ಮ ಅವರು ಆಗಮಿಸಿ ಪ್ರಾಕೃತ
ಸಂಶೋಧನಾ ಕೇಂದ್ರಕ್ಕೆ ಚಾಲನೆ ನೀಡಿದ್ದರು. 2006ರ ಮಹಾಮಸ್ತಕಾಭಿಷೇಕಕ್ಕೆ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಚಾಲನೆ ನೀಡುವುದರ ಜೊತೆಗೆ, 100 ಹಾಸಿಗೆಗಳ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಆಗಮಿಸಿ 88ನೇ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡುವುದರ ಜೊತೆಗೆ ಜನರಲ್‌ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ ಎಂದು ಸಂತಸ ಹಂಚಿಕೊಂಡರು.
 
ದೇವೇಗೌಡರ ಸ್ಮರಿಸಿದ ಸ್ವಾಮೀಜಿ: 2006ರಲ್ಲಿ ಶ್ರವಣಬೆಳಗೊಳಕ್ಕೆ ರೈಲು ಆಗಮಿಸಿದ ಕ್ಷಣ. ಈ ಬಾರಿಯ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಶ್ರವಣಬೆಳಗೊಳ ರಾಷ್ಟ್ರದ ರೈಲ್ವೆ ಜಾಲಕ್ಕೆ ಬೆಸೆದುಕೊಂಡಿದೆ. ಹಾಸನ- ಶ್ರವಣಬೆಳಗೊಳ- ಬೆಂಗಳೂರು ರೈಲು ಮಾರ್ಗ ನಿರ್ಮಾಣದ ಕಾರಣಕರ್ತರು ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡರು ಎಂದು ಅವರು ಸ್ಮರಿಸಿದರು. ಅಲ್ಲದೆ, ಮಹಾಮಸ್ತಕಾಭಿಷೇಕಕ್ಕೆ ನೆರವು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿರುವ ವಿಶೇಷಾಧಿಕಾರಿ ರಾಕೇಶ್‌ಸಿಂಗ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ವಿಶ್ವದಲ್ಲಿ ಅಶಾಂತಿ ತುಂಬಿ ತುಳುಕುತ್ತಿದೆ. ಅನಾದಿ ಕಾಲದಿಂದಲೂ ಹಿಂಸೆಯ ನಂತರ ಅಹಿಂಸೆ, ಅನಾಚಾರದ ನಂತರ ಸದಾಚಾರ ಪಾಲನೆ ನಡೆದುಕೊಂಡು ಬಂದಿದೆ. ಕತ್ತಲಿನಿಂದಲೇ ಬೆಳಕಿಗೆ ಬೆಲೆ ಬರುವುದು. ಹಾಗಾಗಿ ಮನಸ್ಸಿನ ಅಂಧಕಾರ ನಿವಾರಣೆಗೆ ಮಹಾಮಸ್ತಕಾ ಭಿಷೇಕದಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು. 

ಬಾಹುಬಲಿ ಪ್ರತಿಕೃತಿ ಅರ್ಪಣೆ: ರಾಷ್ಟ್ರಪತಿಯವರಿಗೆ ವರ್ಣಮಯವಾದ ಆಕರ್ಷಕ ಬಾಹುಬಲಿಯ ಪ್ರಕೃತಿಯನ್ನು ಶ್ರೀ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕೊಡುಗೆಯಾಗಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next