Advertisement

ಗೊಮ್ಮಟನ ತಲೆಗೆ ಸಕಲ ನದಿಗಳ ನೀರು

06:00 AM Feb 18, 2018 | |

ಶ್ರವಣಬೆಳಗೊಳ: ವಿಂಧ್ಯಗಿರಿಯ ಬಾಹುಬಲಿಯ ಮಸ್ತಕದ ಮೇಲೆ ಭಾರತದ ಸಕಲ ನದಿಗಳ ನೀರು!. ಇದು ಮಹಾಮಜ್ಜನದ ಧಾರ್ಮಿಕ ಮಹತ್ವ.

Advertisement

ಮೊದಲ ದಿನ 108 ಜಲಕಲಶಗಳ ಅಭಿಷೇಕ ನಂತರ ಪಂಚಾಮೃತ ಕಲಶಗಳ ಅಭಿಷೇಕ. ಮುಂದಿನ ದಿನಗಳಲ್ಲಿ 1008 ಜಲಕಲಶಗಳ ಅಭಿಷೇಕ ನಡೆಯಲಿದೆ. 108 ಕಲಶಗಳಿಗೆ ಇಂದ್ರರು (ಅರ್ಚಕರು) ಅರ್ಚನೆ ಪೂಜೆ ನಡೆಸಿದ ತರುವಾಯ ಅಭಿಷೇಕ ನಡೆಸಲಾಗುತ್ತದೆ. ಪ್ರಾರಂಭದಲ್ಲಿ ಕಲಶಮಂಟಪದಲ್ಲಿ ರಂಗವಲ್ಲಿ ಹುಡಿ ಅಥವಾ ಅಕ್ಕಿಹುಡಿಯಿಂದ ಮಂಡಲ ಬರೆದು ಅದರಲ್ಲಿ ದಪ್ಪನೆಯ ಬಟ್ಟೆಯಿಂದ ಸೋಸಿ ಕ್ರಿಮಿಕೀಟಗಳಿಲ್ಲದಂತೆ ತಂದ ಶುದ್ಧಜಲ ಪೂರಣ ಮಾಡಿದ ಪೂರ್ಣಕುಂಭ ಕಲಶ ಮಧ್ಯಭಾಗದಲ್ಲಿ, ಅದರ ಸುತ್ತ ಚತುಷೊRàನ ಕಲಶ, ನಂತರ 9 ಕಲಶಗಳು, 1 ಮೂಲೆಯಲ್ಲಿ 7 ಕಲಶಗಳ ಸಾಲಿನಂತೆ 2 ಸಾಲು, 4 ಮೂಲೆಗೆ 5 ರಂತೆ 20 ಕಲಶಗಳು ಹೀಗೆ ಒಟ್ಟು 108 ಕಲಶಗಳನ್ನು ಭತ್ತದ ರಾಶಿಯ ಮೇಲೆ ಇಟ್ಟು ಆರಾಧಿಸಲಾಗುತ್ತದೆ. ಕಲಶಕ್ಕೆ ಅಷ್ಟಗಂಧ ಪ್ರಾಸಕಜಲವನ್ನು ಪೂರಣ ಮಾಡಿ , ಶ್ವೇತದಾರದ  ಬಂಧನ ಮಾಡಿ, ವಸಉಗಳಿಂದ ಅಲಂಕರಿಸಿ, ಮಾವಿನ ಎಲೆ,ದಭೆì, ನಾರಿಕೇಳ ಫಲವನ್ನಿಟ್ಟು ಕಲಶ ಜೋಡಿಸಲಾಗುತ್ತದೆ.

ಇಂದ್ರರ (ವೈದಿಕರ) ಮಂತ್ರೋಕ್ತ ವಿಧಿವಿಧಾನ ಮೂಲಕ ಈ ಕಲಶಗಳಿಗೆ ಗಂಗಾ, ಸಿಂಧು ಮೊದಲಾದ ಪವಿತ್ರ ನದಿಗಳನ್ನು
ಆಹ್ವಾನಿಸಲಾಗುತ್ತದೆ. ನಂತರ ಕ್ರಮವಾಗಿ ಜಲಕಲಶ, ಎಳನೀರು(ನಾರಿಕೇಳ), ಕಬ್ಬಿನರಸ (ಇಕ್ಷುರಸ), ಹಾಲು, ಅಕ್ಕಿಹಿಟ್ಟು (ಶ್ವೇತಕಲ್ಕಚೂರ್ಣ), ಅರಿಶಿನ, ಕಷಾಯ (ಗಿಡಮೂಲಿಕೆಗಳಿಂದ ತಯಾರಿಸಿದ್ದು), ಪ್ರಥಮಕೋನ ಕಲಶ, ದ್ವಿತೀಯ ಕೋನ ಕಲಶ, ತೃತೀಯ ಕೋನ ಕಲಶ, ಚತುರ್ಥಕೋನ ಕಲಶ, ಗಂಧ, ಚಂದನ, ಅಷ್ಟಗಂಧ, ಕೇಸರಿ, ರಜತ, ಸುವರ್ಣ, ಪುಷ್ಪ, ಪೂರ್ಣಕುಂಭ ಕಲಶಗಳ ಅಭಿಷೇಕ ನಡೆಯುವುದು ರೂಢಿ.

ಮಸ್ತಕಾಭಿಷೇಕದಲ್ಲಿ ಕಲಶಗಳ ವರ್ಗೀಕರಣ ಹೀಗಿದೆ; ಪ್ರಥಮ ಕಲಶ, ಶತಾಬ್ದಿ ಕಲಶ, ನವರತ್ನ ಕಲಶ, ರತ್ನ ಕಲಶ, ಸುವರ್ಣ ಕಲಶ, ದಿವ್ಯ ಕಲಶ, ರಜತ ಕಲಶ, ತಾಮ್ರ ಕಲಶ,ಕಾಂಚ್ಯ ಕಲಶ, ಶುಭಮಂಗಲ ಕಲಶ, ಜನಮಂಗಲ ಕಲಶ,ಗುಳಕಾಯಜ್ಜಿ ಕಲಶ ಎಂದು ವಿಂಗಡಿಸಲಾಗಿದೆ.

ಗುಳಕಾಯಜ್ಜಿ ಕಲಶ: ಶ್ರವಣಬೆಳಗೊಳದಲ್ಲಿ ಮಾತ್ರ ಇರುವುದು. ಚಾವುಂಡರಾಯ ಬಾಹುಬಲಿಗೆ ಪಂಚಾಮೃತ ಅಭಿಷೇಕ ಮಾಡಿಸಿದ. ಅದು ಬಾಹುಬಲಿಯ ನಿಲುವಿನ ವಿಗ್ರಹದ ಮೊಣಕಾಲಿನವರೆಗೂ ತಲುಪಲಿಲ್ಲ. ಆಗ ಗುಳ್ಳಕಾಯಿ ಅಜ್ಜಿ ಅಭಿಷೇಕಕ್ಕೆ ಚಾವುಂಡರಾಯನ ಅನುಜ್ಞೆ ಕೇಳಿದಳು, ಆದರೆ ರಾಜ ನಕ್ಕು ಅಣಕಿಸಿ ಮುದುಕಿಗೆ ಅವಕಾಶ ನೀಡಿದ. ಆಕೆ ಚಿಕ್ಕ ಗಿಂಡಿಯಲ್ಲಿ ಹಾಕಿದ ಹಾಲಿನಿಂದ ಇಡೀ ಮೂರ್ತಿಯ ಮೈ ತೋಯ್ದು ಹೋಯಿತು. ಅಭಿಷೇಕ ಪೂರ್ಣವಾಯಿತು. ಬಟ್ಟಲಿನಿಂದ ಸುರಿದ ಹಾಲು ಹೊಳೆಯಾಗಿ ಹರಿದು ಬೆಟ್ಟದ ತಳದ ಕೊಳ ಸೇರಿ ತುಂಬಿತು ಎನ್ನುವುದು ಉಲ್ಲೇಖ. ಹೀಗಾಗಿ ಅದೇ ಹೆಸರಿನಲ್ಲಿ ಇಲ್ಲಿ ವಿಶೇಷ ಕಲಶ ಇಡಲಾಗುತ್ತದೆ ಪ್ರತಿದಿನ ಕೊನೆಯಲ್ಲಿ ಈ ಕಳಶ ಅಭಿಷೇಕ ನಡೆಯುವುದು ಪ್ರತೀತಿ.

Advertisement

ಅಭಿಷೇಕದ ವೇಳೆ ಬಿಸಿಲು ನೆತ್ತಿಗೇರಿತ್ತು: ಈ ಸಹಸ್ರಮಾನದ ಎರಡನೆ ಮಸ್ತಕಾಭಿಷೇಕದ ಸಂಭ್ರಮದಲ್ಲಿ ಮೊತ್ತ ಮೊದಲ ಕಲಶವನ್ನು ಅಭಿಷೇಕ ಮಾಡುವ ಸಮಯ ಆದಾಗ ಮಧ್ಯಾಹ್ನ ಗಡಿಯಾರ 2.32 ತೋರಿಸುತ್ತಿತ್ತು. ವಿಂಧ್ಯಗಿರಿಯ ಎದುರಿನ ಚಂದ್ರಗಿರಿ (ಚಿಕ್ಕಬೆಟ್ಟ) ಮೂಲಕ ಮಸ್ತಕಾಭಿಷೇಕ ವೀಕ್ಷಿಸಲು ಬರಿಗಾಲಲ್ಲಿ, ಬಿರು ಬಿಸಿಲಲ್ಲಿ ಕರಿ ಕಲ್ಲಿನ ಮೇಲೆ ನಡೆದು ಬಂದು ಕೆಂಪಿರಿದ ಪಾದಗಳಿಗೆ ಬಿಸಿಗಾಳಿ ಊದುತ್ತಾ ಯಾವಾಗ ಗೋಮಟೇಶನ ಅಭಿಷೇಕವಾಗುವುದೋ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರು ಮೊದಲ ಕಲಶದ ನೀರ ಹನಿಗಳು ಗೋಮಟನ ಶಿರದ ಮುಂಗುರಿಳಿನ ರಚನೆಯ ಮೇಲೆ ಸ್ಪರ್ಶವಾಗುತ್ತಿದ್ದಂತೆ ಜೈ ಬೋಲೊ ಬಾಹುಬಲಿ ಭಗವಾನ್‌ ಕೀ ಜೈ, ಗೋಮಟೇಶ್ವರ ಭಗವಾನ್‌ ಕೀ ಜೈ ಎಂದು ಹರ್ಷೋದ್ಗಾರ ಮಾಡಿದರು.

ಜಾರಿದ ಕಲಶ 
108 ಕಲಶಗಳ ಅಭಿಷೇಕದ ವೇಳೆ ಮಹಿಳೆಯೊಬ್ಬರ ಕೈಯಿಂದ ಕಲಶ ಜಾರಿ ಕೆಳಗೆ ಬಿತ್ತು. ಇದೊಂದು ಅಪರೂಪದ ಘಟನೆಯಾಗಿದ್ದು, ಇಂತಹ ಪ್ರಮಾದ ಹಿಂದೆಂದೂ ಆಗಿರಲಿಲ್ಲ ಎಂದು ಭಕ್ತರು ಮಾತಾಡಿಕೊಂಡರು.

ಭೋಜನಕ್ಕಾಗಿ 17 ಪಾಕಶಾಲೆಗಳು 
ಬೆಟ್ಟದ ಸುತ್ತ ತಲೆ ಎತ್ತಿರುವ ಉಪನಗರಗಳು ಹಾಗೂ ಸಾರ್ವಜನಿಕ ಸೇರಿ 17 ಪಾಕಶಾಲೆಗಳು ಹಾಗೂ ಭೋಜನಾಲಯಗಳು ಶ್ರವಣಬೆಳಗೊಳದಲ್ಲಿ ಮಹಾಮಸ್ತಾಭಿಷೇಕಕ್ಕೆ ಬರುವ ಭಕ್ತಾದಿಗಳು ಹಾಗೂ ಕರ್ತವ್ಯನಿರತ ಸಿಬ್ಬಂದಿಗಳಿಗೆ ಬೆಳಗಿನ ಉಪಹಾರ ಮತ್ತು
ಮಧ್ಯಾಹ್ನ ಮತ್ತು ರಾತ್ರಿಯ ಭೋಜನಗಳನ್ನು ಸ್ವಾದಿಷ್ಟಭರಿತವಾಗಿ ಮತ್ತು ವ್ಯವಸ್ಥಿತವಾಗಿ ಉಣಬಡಿಸುತ್ತಿವೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next