Advertisement

ಬಾಹುಬಲಿ ಮಜ್ಜನಕ್ಕೆ ವಿಂಧ್ಯಗಿರಿ ಸಜ್ಜು

06:00 AM Jan 23, 2018 | Team Udayavani |

ಶ್ರವಣಬೆಳಗೊಳ: ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ನಡೆಸುತ್ತಿರುವ ಪೂರಕ ಸಿದ್ಧತಾ ಕಾರ್ಯಗಳು ಶೇ.90ರಷ್ಟು ಪೂರ್ಣಗೊಂಡಿದ್ದು, ಮಾಸಾಂತ್ಯಕ್ಕೆ ಸಂಪೂರ್ಣವಾಗಲಿವೆ ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರೂ ಆದ ಸಚಿವ ಎ.ಮಂಜು, ಶ್ರವಣಬೆಳಗೋಳ ಮಠದ ಚಾರುಕೀರ್ತಿ ಬಟ್ಟಾರಕ ಸ್ವಾಮೀಜಿ ತಿಳಿಸಿದರು.

Advertisement

ಶ್ರವಣಬೆಳಗೋಳದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, 12 ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕ ಫೆಬ್ರುವರಿ 7 ರಿಂದ 22ರವರೆಗೆ ನಡೆಯಲಿದ್ದು, ಮಾಸಾಂತ್ಯದ ವೇಳೆಗೆ ಎಲ್ಲ ಕೆಲಸಗಳು ಪೂರ್ಣಗೊಂಡು ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಿದ್ಧವಾಗಲಿವೆ ಎಂದರು.

ಇದೇ ಮೊದಲ ಬಾರಿಗೆ ಜರ್ಮನ್‌ನ “ರಿಂಗ್‌ ಅಂಡ್‌ ಲಾಕ್‌’ ತಂತ್ರಜ್ಞಾನ ಬಳಸಿ “ಸ್ಕಫ್ ಹೋಲ್ಡಿಂಗ್‌(ಅಟ್ಟಣಿಗೆ)’ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಮೂರು ಲಿಫ್ಟ್ಗಳನ್ನು ಸಹ ಅಳವಡಿಸಲಾಗುತ್ತಿದ್ದು, ಸುಮಾರು 5,500 ಮಂದಿ ಕುಳಿತುಕೊಳ್ಳಲು ವಿಂಧ್ಯಗಿರಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಚಿವ ಮಂಜು ಮಾಹಿತಿ ನೀಡಿದರು.
ಸುಮಾರು 89 ಕೋಟಿ ರೂ. ವೆಚ್ಚದಲ್ಲಿ ಶ್ರವಣಬೆಳಗೋಳಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ವಾರದೊಳಗೆ ಪೂರ್ಣಗೊಳ್ಳಲಿವೆ. ಮಹೋತ್ಸವದ ಹಿನ್ನೆಲೆಯಲ್ಲಿ 400 ವೈದ್ಯರನ್ನು ಆರೋಗ್ಯ ಸೇವೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

12 ಉಪನಗರಗಳ ನಿರ್ಮಾಣ ಕಾರ್ಯವೂ ಬಹುತೇಕ ಅಂತಿಮ ಹಂತದಲ್ಲಿದ್ದು, ಜನವರಿ 30ರೊಳಗೆ ಬಳಕೆಗೆ ನೀಡಲಾಗುವುದು. ಒಟ್ಟಾರೆಯಾಗಿ ಸುರಕ್ಷತೆ, ಸ್ವತ್ಛತೆ ಹಾಗೂ ಆರೋಗ್ಯಕರ ವಾತಾವರಣದಲ್ಲಿ ವ್ಯವಸ್ಥಿತವಾಗಿ ಮಹೋತ್ಸವ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 30 ರಿಂದ 35 ಲಕ್ಷ ಮಂದಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಎ.ಮಂಜು ವಿವರಿಸಿದರು.

ಹೆಲಿ ಟೋರಿಸಂ: ಬಾಹುಬಲಿ ಮೂರ್ತಿ ವೀಕ್ಷಣೆಗೆ ಹೆಲಿಕಾಪ್ಟರ್‌ ಮೂಲಕವೂ ಅವಕಾಶ ಕಲ್ಪಿಸಲಾಗುತ್ತಿದ್ದು, 2200 ರಿಂದ 2300 ರೂ. ನಿಗದಿಪಡಿಸಲಾಗಿದೆ. ಸಮೀಪದ ಜನಿವಾರದ ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಸಹ ಸಹ ಕಲ್ಪಿಸಲಾಗುತ್ತಿದೆ ಎಂದರು.

Advertisement

ಕೇಂದ್ರದಿಂದ ಅನುದಾನ ಬಂದಿಲ್ಲ: ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿಗಳು 175 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ಅನುದಾನ ಬಂದಿಲ್ಲ. ರಾಜ್ಯ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ವಹಿಸಿ ನಿರ್ವಹಿಸುತ್ತಿದೆ ಎಂದು ಮಂಜು ತಿಳಿಸಿದರು.

ಶ್ರವಣಬೆಳಗೋಳ ಮಠದ ಚಾರುಕೀರ್ತಿ ಬಟ್ಟಾರಕ ಸ್ವಾಮೀಜಿ ಮಾತನಾಡಿ, ಫೆಬ್ರುವರಿ 7 ರಿಂದ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಪೂರ್ವಸಿದ್ಧತಾ ಕಾರ್ಯಗಳ ಪ್ರಗತಿ ತೃಪ್ತಿತಂದಿದೆ. ಈಗಾಗಲೇ 175 ಮುನಿಗಳು ಆಗಮಿಸಿದ್ದು, ಇನ್ನೂ 100 ಮಂದಿ ಜೈನಮುನಿಗಳು ಆಗಮಿಸುವ ನಿರೀಕ್ಷೆಯಿದೆ. ಪರಂಪರೆಯ ಸಂಸ್ಕೃತಿಯಂತೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.

ಫೆ.7 ರಿಂದ 16ರವರೆಗೆ ಬೆಟ್ಟದ ಕೆಳಭಾಗದಲ್ಲಿ ಪಂಚಕಲ್ಯಾಣ ಕಾರ್ಯಕ್ರಮ ನಡೆಯಲಿದ್ದು, ಫೆ.17ರಿಂದ 25ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ನಂತರ ಆಗಸ್ಟ್‌ವರೆಗೆ ಪ್ರತಿ ಭಾನುವಾರ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಭಕ್ತರು ಕಣ್ತುಂಬಿಕೊಳ್ಳಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಗೋಪಾಲಕೃಷ್ಣ ಇದ್ದರು. ಬಳಿಕ ಸಚಿವ ಎ.ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಅವರು ಮುನಿನಗರ, ತ್ಯಾಗಿನಗರಗಳಿಗೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಗಣ್ಯರ ಭೇಟಿ ಸಾಧ್ಯತೆ
ಮಹಾಮಸ್ತಕಾಭಿಷೇಕಕ್ಕೆ ಪ್ರಧಾನ ಮಂತ್ರಿ, ರಾಷ್ಟ್ರಪತಿ ಸೇರಿ ಇತರೆ ಗಣ್ಯರಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ. ಆದರೆ, ಗಣ್ಯರ ಪಾಲ್ಗೊಳ್ಳುವಿಕೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಆದರೆ, ಉನ್ನತ ಮೂಲಗಳ ಪ್ರಕಾರ ರಾಷ್ಟ್ರಪತಿಯವರು ಫೆ.17ರಂದು ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಎಲ್ಲಾರೀತಿಯ ಸಹಕಾರ ನೀಡಲಾಗುವುದು: ಡಿಸಿ
ಮಹಾಮಸ್ತಕಾಭಿಷೇಕಕ್ಕೆ ಸುಮಾರು 30 ರಿಂದ 40 ಲಕ್ಷ ಮಂದಿ ಬರುವ ನಿರೀಕ್ಷೆಯಿದ್ದು, ಅವರಿಗೆ ಪೂರಕ ಮೂಲಸೌಕರ್ಯವನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗುವುದು. ಭದ್ರತೆಗಾಗಿ 5 ಸಾವಿರ ಪೊಲೀಸರನ್ನು ನಿಯೋಜಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಮಹೋತ್ಸವದ ವೇಳೆ ಸಂಚಾರ ದಟ್ಟಣೆ ತಪ್ಪಿಸಲು 5 ಕಿ.ಮೀ. ದೂರದಲ್ಲಿಯೇ ಖಾಸಗಿ ವಾಹನ ಸಂಚಾರ ನಿರ್ಬಂಧಿಸಿ, ಒಳಾವರಣದ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿಯ 65 ಮಿನಿಬಸ್‌ಗಳನ್ನು ನಿಯೋಜಿಸಿಕೊಂಡು ಉಚಿತ ಸಂಚಾರ ಸೇವೆ ಕಲ್ಪಿಸಲಾಗುವುದು. ಇದರೊಂದಿಗೆ 750ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಬೈಕ್‌ ಟೂರಿಸಂ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next