Advertisement

Shravana Month: ಅನುಭವದಿಂದ ಅನುಭಾವದ ಕಡೆಗೆ…

03:41 PM Aug 04, 2024 | Team Udayavani |

“ಶ್ರಾವಣ ಮಾಸ’ ಅಂದಾಗ ತಕ್ಷಣ ನೆನಪಾಗುವ ವರಕವಿ ಬೇಂದ್ರೆಯವರ “ಶ್ರಾವಣ’ ಪದ್ಯದ ಕೆಲವು ಅಪೂರ್ವ ಸಾಲುಗಳು ಇಲ್ಲಿವೆ. ಇಡೀ ಪದ್ಯದಲ್ಲಿ “ಶ್ರಾವಣ ಬಂತು ಬಂತು’ ಎನ್ನುವ ಪುನರುಕ್ತಿ ಇದೆ. ಇದು ಕಾಯುವ ಕಾತುರತೆಯನ್ನು, ಸಂಭ್ರಮವನ್ನೂ ಹೇಳುತ್ತದೆ. ಮಾತ್ರವಲ್ಲ, ನಿಸರ್ಗದಲ್ಲಿನ ಪ್ರಕ್ರಿಯೆಯನ್ನೇ ಬೇಂದ್ರೆ ಕಾವ್ಯದಲ್ಲಿ ತರುತ್ತಾರೆ. ಮಳೆ ಬಿಟ್ಟು ಬಿಟ್ಟು ಬರುವುದು, ಗಾಳಿ ಕೂಡ ಆವರ್ತನಶೀಲವಾಗಿ ಚಲಿಸುವುದು, ದುಂಬಿಗಳ ಸುತ್ತಾಟ, ಮರಳಿ ಹೂವು ಚಿಗುರು, ಹಣ್ಣು ಕಾಯಿ, ಬೀಜ ಹೀಗೆ ನಿಸರ್ಗ ವ್ಯಾಪಾರವನ್ನು ಮನುಷ್ಯ ಜೀವಿತದ ಎಲ್ಲ ಅವಸ್ಥಾಂತರಗಳಿಗೆ ಹೋಲಿಸುವುದನ್ನು ನೋಡುತ್ತೇವೆ. ಜತೆಗೆ ಶ್ರಾವಣ ಎಲ್ಲಿಗೆ ಬಂತು? ಹೇಗೆ ಬಂತು? ಯಾಕೆ ಬಂತು? ಎನ್ನುವ ಕುತೂಹಲ, ಅಚ್ಚರಿ, ಬೆರಗನ್ನು ಒಳಗೊಂಡಿದೆ. ಇಡೀ ಪದ್ಯದ ತುಂಬ ಶಬ್ದಚಿತ್ರಗಳೇ. ಬೇಂದ್ರೆಯವರಿಗೆ ಮಳೆ ಮೊದಲಿಗೇ ರೌದ್ರವಾಗಿ ಕಂಡಿದೆ. ಕಡಲಿಗೆ ಬಂದ ಶ್ರಾವಣವನ್ನು “ಕುಣಿದಾಗ ರಾವಣ’ ಎಂದಿರುವುದು ಮಳೆ ಗಾಳಿಯ ಜೊತೆ ಸೇರಿ ಇಡೀ ಪ್ರಕೃತಿಯೇ ಕೆರಳಿ ರೌದ್ರವಾಗುವ ಅನುಭವವನ್ನು ಕೊಡುತ್ತದೆ. ಅಂದರೆ ಮಳೆ ಬರಿಯ ಸೌಂದರ್ಯಾನುಭೂತಿ ಮಾತ್ರವಲ್ಲ; ಅದರೊಂದಿಗೆ ರೌದ್ರತೆಯೂ ಸೇರಿಕೊಂಡಿದೆ. ಮುಂದೆ ಮೃದುವಾಗುತ್ತಾ ಅವರು ಹೇಳುತ್ತಾರೆ.

Advertisement

ಮನೆಮನೆಯಲ್ಲೂ ಹಾಡಿದೆ, ಶುಭಗಳಿಗೆಯ ಸಂಭ್ರಮವಿದೆ, ಅದು ಪ್ರಕೃತಿ ಮೈದುಂಬಿಕೊಳ್ಳುವ ಕಾಲ, ಝರಿ, ಹೊಳೆ, ನದಿ ಎಲ್ಲವೂ ತುಂಬಿಕೊಳ್ಳುತ್ತವೆ. ಬೆಟ್ಟ ಹಸುರಂಗಿಯನ್ನು ಧರಿಸಿದರೆ, ಕಾಡು ಮದುಮಗನ ಹಾಗೆ ಶೃಂಗಾರಗೊಳ್ಳುತ್ತದೆ. ಗುಡ್ಡಗಳೂ ಸ್ಥಾವರಲಿಂಗವಾಗಿ ಮೋಡಗಳು ಅವಕ್ಕೆ ಅಭ್ಯಂಜನ ಮಾಡಿಸಲಿಕ್ಕೆ ನೆರೆದಂತೆಯೂ ಕಾಣುತ್ತಿದೆ ಎನ್ನುತ್ತಾ ಮಾನವ, ನಿಸರ್ಗ ಮತ್ತು ದೈವವನ್ನು ಒಂದುಗೂಡಿಸಿ ಪೂರ್ಣವಾಗುವ ವಿಶ್ವಚೈತನ್ಯವನ್ನು ವಿಷದೀಕರಿಸು­ತ್ತಾರೆ. ಅಷ್ಟಕ್ಕೆ ನಿಲ್ಲದೆ ಈ ಮಳೆಯ ನೀರು ಜೀವಕುಲಕ್ಕೆ ಅಮೃತ ಎನ್ನುವುದನ್ನು “ಹಾಲಿನ ತೊರಿ’ ಎಂದು ಪಾಲನೆಯ ಬಹುದೊಡ್ಡ ಸಂಕೇತವಾಗಿಸುತ್ತಾರೆ. ಹೀಗೆ “ಅನುಭವ’ದಿಂದ “ಅನುಭಾವ’ದ ಕಡೆಗೆ ಕವಿತೆ ಹೊರಳುತ್ತದೆ.

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ |

ಬಂತು ಬೀಡಿಗೆ | ಶ್ರಾವಣಾ ಬಂತು ||

ಕಡಲಿಗೆ ಬಂತು ಶ್ರಾವಣಾ | ಕುಣಿದಾØಂಗ ರಾವಣಾ

Advertisement

ಕುಣಿದಾಗ ಗಾಳಿ | ಭೈರವನ ರೂಪತಾಳಿ ||

ಶ್ರಾವಣ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ| ಬಾನಮಟ್ಟಕ್ಕ |

ಏರ್ಯಾವ ಮುಗಿಲು | ರವಿ ಕಾಣೆ ಹಾಡೆಹಗಲು ||

ಬನ ಬನ ನೋಡು ಈಗ ಹ್ಯಾಂಗ | ಮದುವಿ ಮಗನ್ಹಾಂಗ |

ತಲಿಗೆ ಬಾಸಿಂಗ | ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು ||

ಹಸಿರುಟ್ಟ ಬಸುರಿಯ ಹಾಂಗ | ನೆಲಾ ಹೊಲಾ ಹಾಂಗ |

ಅರಿಸಿಣ ಒಡೆಧಾಂಗ | ಹೊಮ್ಮತಾವ | ಬಂಗಾರ ಚಿಮ್ಮತಾವ ||

ಗುಡ್ಡ ಗುಡ್ಡ ಸ್ಥಾವರಲಿಂಗ | ಅವಕ ಅಭ್ಯಂಗ | ಎರಿತಾವನ್ನೋ ಹಾಂಗ |

ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||

ನಾಡೆಲ್ಲ ಏರಿಯ ವಾರಿ | ಹರಿತಾವ ಝರಿ |

ಹಾಲಿನ ತೊರಿ | ಈಗ ಯಾಕ | ನೆಲಕೆಲ್ಲ ಕುಡಿಸಲಾಕ |

 

-ಪಿ. ಚಂದ್ರಿಕಾ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next