ಶ್ರಾವಣ… ಹಬ್ಬಗಳ ಸಾಲಿಗೆ ಮುನ್ನುಡಿ ಇಡುವ ಮಾಸ. ನಾಗರ ಪಂಚಮಿ, ವರಮಹಾಲಕ್ಷ್ಮೀ, ಗೌರಿ ಹಬ್ಬ, ಗಣೇಶ ಚತುರ್ಥಿ…. ಸಂಭ್ರಮ ಪಡಲು, ನಮ್ಮವರು ತಮ್ಮವರನ್ನು ಕರೆದು ಖುಷಿಪಡಲು ಈ ಹಬ್ಬಗಳು ಒಂದು ನೆಪ ಅಷ್ಟೇ. ಆದರೆ, ಒಂದಾದ ಮೇಲೆ ಒಂದರಂತೆ ಬರುವ ಹಬ್ಬಗಳಿಗೆ ನಡೆಯುವ ತಯಾರಿಗಳು ಹಲವಾರು. ಶ್ರಾವಣದಲ್ಲಿ, ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ವಲ್ಪ ಮಹತ್ವ ಜಾಸ್ತಿ. ಹೆಣ್ಣುಮಕ್ಕಳ ಹಬ್ಬವೆಂದೇ ಕರೆಯಲ್ಪಡುವ ಈ ಹಬ್ಬವನ್ನು ಮೊದಲಿನಿಂದಲೂ ನಾವು ಅದ್ದೂರಿಯಾಗಿ ಆಚರಿಸುತ್ತಿದ್ದೆವು. ಬೆಂಗಳೂರಿನಲ್ಲೇ ಇರುವ ಇಬ್ಬರು ಸೋದರಿಯರು, ಮೈಸೂರಿನಲ್ಲಿರುವ ದೊಡ್ಡಕ್ಕ, ಕೋಲಾರದಲ್ಲಿರುವ ಅಮ್ಮ, ಅತ್ತಿಗೆ, ವ್ರತ ಮಾಡಲು ಪ್ರತಿ ವರ್ಷವೂ ನಮ್ಮನೆಗೇ ಬರುವುದು. ಹೀಗೆ ಒಟ್ಟಾಗಿ ಹಬ್ಬ ಆಚರಿಸುವುದು ಕಳೆದ ಏಳೆಂಟು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ.ಒಂದು ವರ್ಷವೂ ತಪ್ಪಿರಲಿಲ್ಲ. ಆದರೆ, ಈ ವರ್ಷ? “ಕೋವಿಡ್ ಕಾಟ ಕಳೆಯಲಿ, ಆಮೇಲೆ ಹಬ್ಬ ಮಾಡೋಣ. ಹೊರಗೆಲ್ಲೂ ಹೋಗ್ಬೇಡಿ. ಎಷ್ಟೇ ಪರಿಚಯ ಇದ್ದರೂ ಸರಿ, ಯಾರನ್ನೂ ಬಾಗಿನಕ್ಕೆಲ್ಲ ಕರೆಯಲೇಬೇಡಿ ಅಂದಿದ್ದಾಳೆ’ ಅಮ್ಮ. ಆಕೆ ಯಾವತ್ತೂ ಹಾಗೆ ಹೇಳಿದವಳಲ್ಲ. “ಹತ್ತು ಜನರನ್ನು ಕರೆದರೇನೇ ಹಬ್ಬಕ್ಕೊಂದು ಕಳೆ.
ನಾವೇ ಹಬ್ಬದಡುಗೆ ಮಾಡಿ, ನಾವೇ ಉಂಡರೆ ಏನು ಬಂತು?’ ಅಂತ ಅಕ್ಕಪಕ್ಕದೋರನ್ನು ಊಟಕ್ಕೆ ಕರೆಯುವುದು, ಅವರು ಹಬ್ಬದಡುಗೆ ಉಂಡು ಖುಷಿಪಡುವುದನ್ನು ನೋಡಿ ಸಂಭ್ರಮಿಸುವುದು ಅಮ್ಮನ ಗುಣ. ನಾನೂ ಅಷ್ಟೇ, ಮದುವೆಯಾಗಿ ಬೆಂಗಳೂರು ಸೇರಿದ ಮೇಲೆ, ಯಾವುದಾದರೂ ನೆಪ ಮಾಡಿಕೊಂಡು, ಅಕ್ಕಪಕ್ಕದವರನ್ನು ಆಗಾಗ ಅರಿಶಿನ ಕುಂಕುಮಕ್ಕೆ ಕರೆಯುತ್ತೇನೆ. ಈ ನೆಪದಲ್ಲಿಯೇ ನಮ್ಮ ಆಚೀಚೆ ಮನೆಯವರೆಲ್ಲರೂ ಸ್ನೇಹಿತೆಯರಾಗಿದ್ದೇವೆ. ಹಬ್ಬ ಹರಿದಿನಗಳ ನೆಪದಲ್ಲಿ ಬಾಂಧವ್ಯ ಬೆಸೆಯುವುದೇ ಆಚರಣೆಗಳ ಹಿಂದಿನ ಒಳಗುಟ್ಟು ತಾನೇ? ಆದರೆ, ಈ ಎಲ್ಲ ಸಂಭ್ರಮಕ್ಕೂ ಕೊರೊನಾ ಬ್ರೇಕ್ ಹಾಕಿದೆ. ಈ ಮೊದಲೇ ಹೇಳಿದಂತೆ, ಅಮ್ಮ- ಅಕ್ಕಂದಿರು ಹಬ್ಬಕ್ಕೆ ಬರುವುದಿಲ್ಲ ಎಂದಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ತಕ್ಷಣ ಊರಿಗೆ ಹೋದ ಪಕ್ಕದಮನೆಯವರು, ಇನ್ನೂ ವಾಪಸ್ ಬಂದೇ ಇಲ್ಲ. ಮನೆಯಿಂದ ಮೂರು ಕ್ರಾಸ್ ಆಚೆಗೆ ಯಾರೋ ಒಬ್ಬರಿಗೆ ಕೋವಿಡ್ ಪಾಸಿಟಿವ್ ಎಂದು ವಾರದ ಹಿಂದೆ ಗೊತ್ತಾಗಿದೆ. ಅವತ್ತಿಂದ, ಇಡೀ ರಸ್ತೆಯೇ ಸೀಲ್‌ಡೌನ್ ಆಗಿತ್ತು.ಮೊನ್ನೆಯಷ್ಟೇ ಅದು ತೆರವಾಗಿದೆ. ಆದರೂ ರಸ್ತೆಗಿಳಿಯಲು ಜನ ಹಿಂದೆಮುಂದೆ ನೋಡುತ್ತಿದ್ದಾರೆ.
ಪ್ರತಿ ಹಬ್ಬದ ಸಮಯದಲ್ಲಿಯೂ ಹೂವು-ಹಣ್ಣು ಖರೀದಿಗೆ ಕರೆಯುತ್ತಿದ್ದ, ದೇವಿಯ ಅಲಂಕಾರಕ್ಕೆ ನೆರವಾಗುತ್ತಿದ್ದ ಎದುರು ಮನೆಯ ಹಿರಿಯ ಮಹಿಳೆಗೆ, ಈಗ ಮನೆಯಿಂದ ಹೊರ ಬರುವುದಕ್ಕೆ ಭಯ. ಬೀದಿ ಬದಿಯಲ್ಲಿ ಬಾಳೆಕಂದು, ಮಾವಿನೆಲೆ, ಬಾಳೆ ಎಲೆ, ಹೂವು, ಹಣ್ಣು, ಕುಂಬಳಕಾಯಿ ರಾಶಿ ಹಾಕಿ, ಮೆಟ್ರೋ ಸಿಟಿಯ ಹಬ್ಬಕ್ಕೂ ಹಳ್ಳಿಯ ಕಳೆ ಮೂಡಿಸುತ್ತಿದ್ದ ವ್ಯಾಪಾರಿಗಳೂ ಈ ವರ್ಷ ಬರುವುದಿಲ್ಲವೇನೋ. (ವ್ಯಾಪಾರಕ್ಕಿಂತ ಜೀವ ಮುಖ್ಯ ಎಂಬುದು ಅವರಿಗೂ ಅರಿವಾಗಿದೆ.) ಅಕಸ್ಮಾತ್ ಆ ಜನರು ಬಂದರೂ, ಅವರಿಂದ ಹಣ್ಣು- ಹೂವು ಖರೀದಿಸುವ ಧೈರ್ಯವಾದರೂ ಯಾರಿಗಿದೆ ಹೇಳಿ? (ಹಬ್ಬದ ಆಚರಣೆಗಿಂತ ಪ್ರಾಣ ಮುಖ್ಯ ಎನ್ನುವುದು ಸಿಟಿಯ ಜನರಿಗೂ ಅರ್ಥವಾಗಿದೆ) ಇದನ್ನೆಲ್ಲಾ ಯೋಚಿಸಿಯೇ- ವ್ರತ ಮಾಡುವುದೇ ಬೇಡ. ಸಣ್ಣದಾಗಿ ಪೂಜೆ ಮಾಡಿ ಮುಗಿಸುವ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಎಲ್ಲಾ ಸರಿ ಹೋದರೆ, ಅಂದರೆ, ಇನ್ನು 20-25 ದಿನಗಳಲ್ಲಿ ಈ ಕೋವಿಡ್ ನ ಆರ್ಭಟ ತಗ್ಗಿದರೆ, ಎಲ್ಲರೂ ಒಂದೆಡೆ ಸೇರಿ, ಗೌರಿ ವ್ರತವನ್ನು ಗ್ರ್ಯಾಂಡ್ ಆಗಿ ಆಚರಿಸೋಣ ಅಂತ ಅಕ್ಕಂದಿರೆಲ್ಲ ಮಾತಾಡಿಕೊಂಡಿದ್ದೇವೆ. ಆದರೆ, ಸೋಂಕು ಕಡಿಮೆಯಾಗುತ್ತದಾ? ಈಗ ಇರುವಂತೆಯೇ ಪರಿಸ್ಥಿತಿ ಮುಂದುವರಿದರೆ, ಎಷ್ಟೋ ಕೋಟಿ ಜನಕ್ಕೆ ಸೋಂಕು ಹರಡಬಹುದು ಅನ್ನುತ್ತಾರಲ್ಲ… ಅಯ್ಯೋ ದೇವರೇ! ನಿರಾತಂಕವಾಗಿ ನಿನ್ನ ಪೂಜೆ ಮಾಡಲೂ ಆಗುತ್ತಿಲ್ಲವಲ್ಲ, ಇದೆಂಥ ಎಂಥ ವಿಘ್ನ ತಂದಿಟ್ಟೆ ನೀನು!
ಶ್ರಾವಣ ಮಾಸ ಮುಗಿಯುತ್ತಿದ್ದಂತೆಯೇ ದಸರಾ ಸಂಭ್ರಮ ಕೂಡ ಆರಂಭವಾಗ್ತದೆ. “ಹಿಂಗಾದ್ರೆ ನಮ್ಮ ದಸರಾ ಮೆರವಣಿಗೆ ಹೇಗೆ ನಡೆಸೋದಪ್ಪಾ?…’ ಹಿರಿಯರೊಬ್ಬರು ಮೊನ್ನೆ ಚಿಂತೆಯಿಂದ ಕೇಳುತ್ತಿದ್ದರು. ಮಗ ಹೇಳುತ್ತಾನೆ- ಚೀನಾದಿಂದಲೇ ಗಣೇಶನ ಮೂರ್ತಿಗಳು ಬರ್ತಾ ಇದ್ದದ್ದು. ಈ ಸಲ ಗಣೇಶನೂ ಇಲ್ಲ, ಹಬ್ಬವೂ ಇಲ್ಲ… ಅಂತ. ಯುಗಾದಿ ಯಿಂದಲೇ ಆವರಿಸಿದ ಈ ಕರಿಛಾಯೆ ಯಾವಾಗ ಸರಿಯುವುದೋ ಏನೋ!
ಶಿಲ್ಪಾ, ಬೆಂಗಳೂರು