Advertisement

ಗಾಂಧಿ ಜಯಂತಿಯಂದು “ಶ್ರಮದಾನ’; ಪ್ಲಾಸ್ಟಿಕ್‌ ಮುಕ್ತ‌ “ವಾಗ್ಧಾನ’

11:09 PM Sep 30, 2019 | Lakshmi GovindaRaju |

ಬೆಂಗಳೂರು: ಕಳೆದ ವರ್ಷ ರಾಜ್ಯದ ಗ್ರಾಮೀಣ ಪ್ರದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಗುರಿ ಸಾಧಿಸಿದ್ದ ರಾಜ್ಯ ಸರ್ಕಾರ ಈ ವರ್ಷ ಹಳ್ಳಿಗಳನ್ನು ಪ್ಲಾಸ್ಟಿಕ್‌ ಮುಕ್ತ ಮಾಡುವ ಪಣ ತೊಟ್ಟಿದೆ. ಅದಕ್ಕಾಗಿ ಗಾಂಧಿ ಜಯಂತಿ ದಿನದಿಂದ ರಾಜ್ಯವ್ಯಾಪಿ ವಿಶೇಷ ಆಂದೋಲನಕ್ಕೆ ಚಾಲನೆ ಸಿಗಲಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು 73ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ “ಸ್ವಚ್ಛತಾ ಹೀ ಸೇವಾ’ ಕಲ್ಪನೆ ಮೂಲಕ ಪ್ಲಾಸ್ಟಿಕ್‌ ಮುಕ್ತ ದೇಶಕ್ಕಾಗಿ ಕರೆ ನೀಡಿದ್ದರು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಶಯದಂತೆ “ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯಡಿ “ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಆಂದೋಲನ-ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಗಾಂಧಿ ಜಯಂತಿ ದಿನವಾದ ಅ.2ರಂದು ರಾಜ್ಯದ ಎಲ್ಲ 6,024 ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲಕ್ಕೆ ಶ್ರಮದಾನ ನಡೆಯಲಿದ್ದು, ಪ್ಲಾಸ್ಟಿಕ್‌ ಮುಕ್ತ ಗ್ರಾಮಗಳನ್ನಾಗಿ ಮಾಡಲು ಪ್ರತಿಜ್ಞೆ ಸ್ವೀಕಾರ ನಡೆಯಲಿದೆ.

ಗ್ರಾಮೀಣ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಸ್ವಚ್ಛತಾ ಹೀ ಸೇವಾ ಆಂದೋಲನದಡಿ ಸೆ.11ರಿಂದ ಅ.27ರವರೆಗೆ ಅಭಿಯಾನ ರೂಪದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ, ಸೆ.11ರಿಂದ ಅ.1ರವರೆಗೆ ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಭಾಗದ ಎಲ್ಲ ಜನವಸತಿಗಳನ್ನು ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತವನ್ನಾಗಿಸಲು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.

ಗಾಂಧಿ ಜಯಂತಿಗೆ “ಶ್ರಮದಾನ’: ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಅಭಿಯಾನಕ್ಕೆ ವಿಶೇಷ ಮಹತ್ವ ತಂದುಕೊಡುವ ಉದ್ದೇಶದಿಂದ ಅ.2ರಂದು ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಶ್ರಮದಾನ ನಡೆಯಲಿದೆ. ಈ ದಿನ ಗ್ರಾಮೀಣ ಭಾಗದ ಜನವಸತಿಗಳನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಪ್ರತಿಜ್ಞೆ ಬೋಧಿಸಲಾಗುತ್ತದೆ. ಬಳಿಕ ಅ.3ರಿಂದ 27ರವರೆಗೆ ಸಂಗ್ರಹಿಸಿದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರು ಬಳಿಕೆ ಮಾಡುವುದು ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಕಾರ್ಯಕ್ರಮಗಳು ನಡೆಯಲಿವೆ. ಈ ಬಗ್ಗೆ ಈಗಾಗಲೇ ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ರವಾನಿಸಲಾಗಿದೆ.

Advertisement

ವ್ಯಾಪಕ ಪ್ರಚಾರ: ಈ ಆಂದೋಲನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಸ್‌, ರೈಲು ನಿಲ್ದಾಣಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಜನವಸತಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈವರೆಗೆ ರಾಜ್ಯದ 30 ಜಿಲ್ಲೆಗಳಲ್ಲಿ 400ಕ್ಕೂ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ರಾಜ್ಯ ಮಟ್ಟದ ಕಲಾ ಜಾಥಾ ಎಲ್ಲ ಕಡೆ ಸಂಚರಿಸಿದೆ. ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಸ್ವಚ್ಛತಾ ಹೀ ಸೇವಾ’ ಆಂದೋಲನದಲ್ಲಿ ಏನಿರಲಿದೆ?
-ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸುವ ಕೇಂದ್ರಗಳನ್ನು ಗುರುತಿಸು ವುದು. ಈಗಾಗಲೇ ಜಿಲ್ಲೆಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣಾ ಘಟಕಗಳು ಸ್ಥಾಪಿಸಿದ್ದಲ್ಲಿ, ಅಲ್ಲಿ ಈ ಆಂದೋಲನದಡಿ ಸಂಗ್ರಹಿಸುವ ತ್ಯಾಜ್ಯವನ್ನು ಶೇಖರಣೆ ಮಾಡಬೇಕು.

-ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹಿಸಲಾದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸ್ಥಳೀಯ ಸಿಮೆಂಟ್‌ ಕಾರ್ಖಾನೆಗಳೊಂದಿಗೆ ಸಮನ್ವಯ ಮಾಡಿಕೊಂಡು ಆ ಪ್ಲಾಸ್ಟಿಕ್‌ ತ್ಯಾಜ್ಯ ಸಾಗಾಣಿಕೆಗೆ ಅಗತ್ಯ ವ್ಯವಸ್ಥೆಗೆ ಯೋಜನೆ ರೂಪಿಸುವುದು.

-ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗಿದ್ದಲ್ಲಿ ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಹಂತದಲ್ಲಿ ಸಂಗ್ರಹಿಸಲಾದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ರೈಲು ಬೋಗಿಗಳಲ್ಲಿ ಸಾಗಿಸಲು ಕ್ರಮ ಕೈಗೊಳ್ಳುವುದು.

-ಗಾಂಧಿ ಜಯಂತಿ ದಿನ ಎಲ್ಲ ಗ್ರಾಪಂಗಳ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಕುರಿತು ಪ್ರತಿಜ್ಞಾ ವಿಧಿ ಬೋಧನೆ ಮಾಡುವುದು.

ಸಜ್ಜಾಗಿರುವ ಬೆಂ.ಗ್ರಾಮಾಂತರ: ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಅನೇಕಲ್‌ ತಾಲೂಕಿನ ಸುಮಾರು 96 ಗ್ರಾಪಂಗಳಲ್ಲಿ ಏಕಕಾಲದಲ್ಲಿ “ಸ್ವಚ್ಛತೆಯೇ ಸೇವೆ’ ಕಾರ್ಯಕ್ರಮ ಜಾರಿಗೆ ಬರಲಿದೆ. ಪ್ರಧಾನಿ ಮೋದಿ ಅವರು ಯುವ ಸಮೂಹವನ್ನು ಕೇಂದ್ರೀಕರಿಸಿ ಕೌಶಲ್ಯಭಾರತ್‌, ಯೋಗ, ಸ್ವಚ್‌f ಭಾರತ್‌, ಫೀಟ್‌ ಭಾರತ್‌ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದರಲ್ಲಿ ಈಗ ಸ್ವಚ್ಛತೆಯೇ ಸೇವೆ ಆಂದೋಲನ ಕೂಡ ಸೇರಿದೆ.

ಪ್ರಧಾನಿ ಮೋದಿ ಅವರು ಪ್ಲಾಸ್ಟಿಕ್‌ ಮುಕ್ತ ಭಾರತ ಮಾಡುವ ಆಶಯ ಹೊಂದಿದ್ದು ಆ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ “ಸ್ವಚ್ಛತೆಯೇ ಸೇವೆ’ ಕಾರ್ಯಕ್ರಮ ರೂಪಿಸಿದ್ದಾರೆ. ಇದರ ಯಶಸ್ಸಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಪಣತೊಟ್ಟಿದೆ.
-ಡಾ.ಸಿದ್ದರಾಮಯ್ಯ, ಉಪ ಕಾರ್ಯದರ್ಶಿ, ಬೆಂ. ನಗರ ಜಿಪಂ

ಬಯಲು ಬಹಿರ್ದೆಸೆ ಮುಕ್ತದ ಮೂಲಕ ಸಾಧಿಸಿದ ಸ್ವಚ್ಛತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು “ಸ್ವಚ್ಛತಾ ಹೀ ಸೇವಾ’ ಅಭಿಯಾನದ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಗ್ರಾಮಗಳ ಗುರಿ ಇಟ್ಟುಕೊಳ್ಳಲಾಗಿದೆ. ಇದರಲ್ಲಿ ಮುಖ್ಯವಾಗಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಒಮ್ಮೆ ಉಪಯೋಗಿಸುವ ಪ್ಲಾಸ್ಟಿಕ್‌ ಬಳಕೆ ತ್ಯಜಿಸುವುದು ಮತ್ತು ಪ್ಲಾಸ್ಟಿಕ್‌ ಮರುಬಳಕೆ ಹಾಗೂ ವಿಲೇವಾರಿಗೆ ವಿಶೇಷ ಒತ್ತು ಕೊಡಲಾಗಿದೆ.
-ಡಾ. ಆರ್‌. ವಿಶಾಲ್‌, ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

* ರಫೀಕ್‌ ಅಹ್ಮದ್‌/ ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next