ರಬಕವಿ-ಬನಹಟ್ಟಿ: ದೇಶದಲ್ಲಿ ದ್ರೇಶದ್ರೋಹಿಗಳಿಂದ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಗಳು ಕಳವಳಕಾರಿಯಾದ ಸಂಗತಿಯಾಗಳಾಗಿವೆ. ಶಾಂತಿಯ ಸನ್ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಕೊಲೆ ಮಾಡುವುದು ಹೇಡಿಗಳ ಲಕ್ಷಣ. ಹರ್ಷ ಅವರ ಕೊಲೆ ಖಂಡಣೀಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಬನಹಟ್ಟಿಯ ಬಸ್ ನಿಲ್ದಾಣದ ಹತ್ತಿರ ಶಿವಮೊಗ್ಗಾದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ದೇಶಭಕ್ತಿಯ ಪಾಠವನ್ನು ಬಿಜೆಪಿಯವರು ಕಾಂಗ್ರೆಸ್ ನಿಂದ ಕಲಿಯುವ ಅಗತ್ಯವಿಲ್ಲ. ಅಧಿಕಾರದ ಆಸೆಗಾಗಿ, ಗದ್ದುಗೆಯನ್ನು ಹಿಡಿಯುವ ನಿಟ್ಟಿನಲ್ಲಿ ಮತ್ತು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಇಂಥ ರಾಜಕಾರಣ ಮಾಡುತ್ತಾರೆ. ಬಿಜೆಪಿ ಪಕ್ಷದ ಕುರಿತು ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಹತ್ಯೆಯಾದ ಹಿಂದೂ ಕಾರ್ಯಕರ್ತನ ಮನೆಗೆ ಇದುವರೆಗೆ ಯಾವುದೆ ಕಾಂಗ್ರೆಸ್ ನಾಯಕ ಭೇಟಿ ನೀಡಿಲ್ಲ. ಇದು ಅವರ ಕೀಳು ಮಟ್ಟದ ರಾಜಕೀಯವನ್ನು ಎತ್ತಿ ತೋರಿಸುತ್ತದೆ.
ಸಮವಸ್ತ್ರಕ್ಕೆ ಸಂಬಂಧಪಟ್ಪಂತೆ ಹೈಕೋರ್ಟ್ ಆದೇಶವನ್ನು ವಿದ್ಯಾರ್ಥಿಗಳು ಪಾಲಿಸಲಿ ಎಂದು ಹೇಳುವ ಧೈರ್ಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿಲ್ಲ. ಮತ ಬ್ಯಾಂಕ್‍ಗಾಗಿ ಇಂಥ ಕೀಳು ಮಟ್ಟದ ರಾಜಕಾರಣದಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಶಾಸಕ ಸವದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತ ಶಿವಾನಂದ ಗಾಯಕವಾಡ ಮಾತನಾಡಿ, ಬನಹಟ್ಟಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಶಿಕ್ಷನ ಮೇಲೆ ಹಲ್ಲೆ ಮಾಡಿದ ಐವರಲ್ಲಿ ಕೇವಲ ಇಬ್ಬರನ್ನು ಮಾತ್ರ ಅಧಿಕಾರಿಗಳು ಬಂಧಿಸಿದ್ದಾರೆ. ಒಂದು ವಾರದೊಳಗಾಗಿ ಉಳಿದ ಆರೋಪಿಗಳನ್ನು ಬಂಧಿಸದೆ ಇದ್ದರೆ ಮತ್ತೆ ರಬಕವಿ ಬನಹಟ್ಟಿ ಬಂದ್ ಕರೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀಶೈಲ ಬೀಳಗಿ, ರಾಜು ಅಂಬಲಿ, ಧರೆಪ್ಪ ಉಳ್ಳಾಗಡ್ಡಿ, ಪುಂಡಲೀಕ ಪಾಲಭಾವಿ, ಶ್ರೀಶೈಲ ಯಾದವಾಡ, ಚಿದಾನಂದ ಹೊರಟ್ಟಿ, ಬಸವರಾಜ ತೆಗ್ಗಿ, ಲಕ್ಕಪ್ಪ ಪಾಟೀಲ, ಈರಣ್ಣ ಚಿಂಚಖಂಡಿ, ಪ್ರವೀಣ ಕೋಲಾರ, ಗೋವಿಂದ ಡಾಗಾ, ಕುಮಾರ ಕದಮ್, ಪ್ರವೀಣ ಧಬಾಡಿ, ಪವಿತ್ರಾ ತುಕ್ಕನ್ನವರ, ವೈಷ್ಣವಿ ಬಾಗೇವಾಡಿ, ಸುವರ್ಣಾ ಕೊಪ್ಪದ, ರತ್ನಾ ಕೊಳಕಿ ಸೇರಿದಂತೆ ಅನೇಕರು ಇದ್ದರು.