ಮಂಜೇಶ್ವರ: ಡಾ| ಡಿ.ಕೆ. ಚೌಟ ಅವರು ಸಂಸ್ಕೃತಿ ಮತ್ತು ಕೃಷಿ ಎರಡರಲ್ಲೂ ಸಮನ್ವಯ ಸಾಧಿಸಿದವರು. ಲಲಿತ ಕಲೆಗಳ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದ ಬಹುಮುಖ ಪ್ರತಿಭೆ ಆಗಿದ್ದರು. ಅವರ ಅಗಲುವಿಕೆ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸಾಹಿತಿ ಡಾ| ರಮಾನಂದ ಬನಾರಿ ಹೇಳಿದರು.
ಡಾ| ಡಿ.ಕೆ. ಚೌಟ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬಗ್ಗೆ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದ ‘ಗಿಳಿವಿಂಡು’ ಸೌಧದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಟ್ರಸ್ಟ್‌ನ ಸದಸ್ಯ ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ, ಗೋವಿಂದ ಪೈ ಸ್ಮಾರಕ ನಿರ್ಮಾಣದ ಸಂದರ್ಭದಲ್ಲಿ ಯೋಜನೆಯ ರೂವಾರಿ ಡಾ| ವೀರಪ್ಪ ಮೊಲಿ ಅವರೊಂದಿಗೆ ದುಡಿದು, ಸ್ಮಾರಕದ ಆಡಳಿತ ನಿರ್ದೇಶಕರಾಗಿ ಸಂಸ್ಥೆಗೆ ಹಣಕಾಸಿನ ನೆರವನ್ನೂ ನೀಡುತ್ತಾ ಉದಾರ ದಾನಿಗಳಾಗಿದ್ದ ಡಾ| ಚೌಟ ಅವರ ಸೇವೆ ಅವಿಸ್ಮರಣೀಯ. ಸಾರಸ್ವತ ಲೋಕಕ್ಕೆ ಅವರು ನೀಡಿದ ‘ಮಿತ್ತಬೈಲ್ ಯಮುನಕ್ಕ’ ಮತ್ತು ‘ಕರಿಯಜ್ಜೆರೆನ ಕತೆಕುಲು’ ಪರಿಣಾಮಕಾರಿ ತುಳು ಕೃತಿಗಳಾಗಿವೆ. ಸ್ನಾತಕೋತ್ತರ ತುಳು ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯವಾದುದು ಎಂದು ಹೇಳಿದರು.
ಟ್ರಸ್ಟ್ ಕೋಶಾಧಿಕಾರಿ ಬಿ.ವಿ. ಕಕ್ಕಿಲಾಯ ಮಾತನಾಡಿದರು. ಟ್ರಸ್ಟ್‌ನ ಆಡಳಿತಾಧಿಕಾರಿ ಡಾ| ಕಮಲಾಕ್ಷ ಸ್ವಾಗತಿಸಿ, ವಂದಿಸಿದರು. ಸಹಾಯಕ ಅಧಿಕಾರಿ ಸುಬ್ರಹ್ಮಣ್ಯ, ಶ್ರೀಮತಿ ವಿ. ಕಕ್ಕಿಲಾಯ ಉಪಸ್ಥಿತರಿದ್ದರು.