Advertisement

ಹಾರುವ ಹಕ್ಕಿಗಳಿಗೆ ದಾರಿ ತೋರಿಸಿ

12:30 AM Jan 02, 2019 | |

ಓದಿದ ಹುಡುಗಿಗೆ ಪ್ರಪಂಚ ಜ್ಞಾನ ಹೆಚ್ಚು. ಆಕೆಗೆ ದಕ್ಕುವ ಗೌರವಾದರವೂ ಹೆಚ್ಚು. ಆದರೆ ಈ ಪ್ರಕ್ರಿಯೆಯಲ್ಲಿ ಶೈಕ್ಷಣಿಕವಲ್ಲದ ಹಲವಾರು ಅಡೆತಡೆಗಳನ್ನು ಹೆಣ್ಣುಮಕ್ಕಳು ಇಂದು ಎದುರಿಸಬೇಕಾಗಿದೆ. ಮನೆ ಗುಡಿಸಿ ಆಯಿತೇ, ನಾಳೆಯ ತಿಂಡಿಗೆ ಉಪ್ಪಿಟ್ಟು ಮಾಡಲೇ, ಇಡ್ಲಿ ಮಾಡಲೇ? ಮಗುವಿನ ಯೂನಿಫಾರಂಗೆ ಇಸ್ತ್ರಿ ಹಾಕಿಟ್ಟಿದ್ದೇನೆಯಲ್ಲವೆ? ಈ ಸೀರೆಗೆ ಮ್ಯಾಚಿಂಗ್‌ ಬಳೆ, ಲಿಪ್‌ಸ್ಟಿಕ್‌ ಇಲ್ಲವಲ್ಲ? ಕಳೆದ ತಿಂಗಳಿಗಿಂತ ಈ ತಿಂಗಳು ಎರಡು ಕೆ.ಜಿ. ದಪ್ಪವಾಗಿದ್ದೀನಾ ಹೇಗೆ?- ಈ ರೀತಿಯ ಸಣ್ಣಪುಟ್ಟ ವಿಷಯಗಳೇ ಓದುವ ಹೆಣ್ಣು ಮಕ್ಕಳ ಏಕಾಗ್ರತೆಯನ್ನು, ಉತ್ಸಾಹವನ್ನು ಕುಂದಿಸುತ್ತಿರುವುದು ಸತ್ಯ.

Advertisement

ಸೀಮಾ ಪ್ರತಿಷ್ಠಿತ ಯುನಿವರ್ಸಿಟಿಯೊಂದರಲ್ಲಿ ಪಿ.ಎಚ್‌ಡಿ ವಿದ್ಯಾರ್ಥಿನಿ. ಅವಳಿಗೆ ಈಗಾಗಲೇ ಮೂವತ್ತೆರಡು ವರುಷ. ಅತ್ಯಂತ ಮಹತ್ವಾಕಾಂಕ್ಷಿಯೂ, ತನ್ನ ಅಭಿಪ್ರಾಯಗಳ ಬಗ್ಗೆ, ಜೀವನದ ಪ್ರಯಾರಿಟಿಗಳ ಬಗ್ಗೆ ಖಚಿತತೆ ಇರುವವಳೂ ಆದ ಆಕೆಗೆ, ಜೀವನ ಸಂಗಾತಿಯ ಬಗ್ಗೆ, ತನ್ನ ಜೀವನ ಪಡೆದುಕೊಳ್ಳಬಹುದಾದ ಸ್ವರೂಪದ ಬಗ್ಗೆ ಸಣ್ಣದಾಗಿ ಆತಂಕ ಶುರುವಾಗಿದೆ. ಇನ್ನು ಕ್ಷಮಾಳ ಮನೆಯಲ್ಲಂತೂ ಆಕೆಯ ಎಮ್ಫಿಲ್‌ನಿಂದ ಮೊದಲುಗೊಂಡು ಪಿ. ಎಚ್‌ಡಿಯವರೆಗೂ ವಾದ- ವಿವಾದಗಳಾಗಿ ಇದೀಗ ತಾತ್ಕಾಲಿಕ ಯುದ್ಧವಿರಾಮ. ಈ ರೀತಿಯ ಸಂಘರ್ಷ ಮೇಲ್ಮಧ್ಯಮ ವರ್ಗದ, ಉನ್ನತ ಶಿಕ್ಷಣ ಪಡೆದ, ಪಡೆಯುತ್ತಿರುವ ಯುವತಿಯರಲ್ಲಿ ಸಾಮಾನ್ಯವೆನ್ನುವಂತೆ ಈಗೀಗ ಕಂಡುಬರುತ್ತಿದೆ.

ತಮಾಷೆಯೆಂದರೆ ನಮ್ಮ ಹಳೆಯ ಸಿನಿಮಾಗಳಲ್ಲಿ , ಈಗಲೂ ಕೆಲವು ನಿಯತಕಾಲಿಕಗಳಲ್ಲಿ, ಧಾರಾವಾಹಿಗಳಲ್ಲಿ, ಜೀವನದಲ್ಲಿ ಸೋತು ಹೋದವರು (ಪ್ರೇಮ, ದಾಂಪತ್ಯ ಇತ್ಯಾದಿ) ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿ ತೋರಿಸುತ್ತಿರುತ್ತಾರೆ. ಉದಾಹರಣೆಗೆ ಜಯಾ ಬಾಧುರಿ ನಟಿಸಿದ ಕೋರಾ ಕಾಗಜ…ದಪ್ಪ ಕನ್ನಡಕ ಧರಿಸಿದ, ಪ್ರಬುದ್ಧತೆಯೇ ಮೈವೆತ್ತಿದ ಹೀರೋಯಿನ್‌, ಮರಳಿ ತನ್ನ ಗಂಡನೊಡನೆ ಹೊಸ ಜೀವನ ನಡೆಸುವುದರೊಂದಿಗೆ ಈ ಫಿಲ್ಮ್ ಸುಖಾಂತ್ಯವಾಗುತ್ತದೆ ಹಾಗೂ ಹೆಣ್ಣಿನ ಜೀವನ ಸಾರ್ಥಕ್ಯ ಇದೇ ಎಂದೂ ಸಂದೇಶ ನೀಡಲಾಗುತ್ತದೆ. 

    ಕಾಲೇಜು ಕ್ಯಾಂಪಸ್‌ನಲ್ಲಿ ಕಾಣಿಸಿಕೊಳ್ಳುವ ಮುಕ್ತ ವಾತಾವರಣ, ಸಮಾನತೆ ರಮ್ಯ ಕನಸಿನಂತೆಯೇ ಕಂಡುಬಂದು ಜೀವನದ ವಾಸ್ತವತೆ ತಿಳಿಯುವಾಗ ಹೊತ್ತು ಮೀರಿರುತ್ತದೆ. ಒಂದೇ ವಯಸ್ಸಿನ ಹುಡುಗ- ಹುಡುಗಿಯರಲ್ಲಿ, ಹುಡುಗನಿಗೆ ತನ್ನ ವಿದ್ಯಾಭ್ಯಾಸದ ಸಾಧ್ಯತೆಗಳನ್ನು, ವೃತ್ತಿಜೀವನದ ಮಜಲುಗಳನ್ನು ನಿರ್ಣಯಿಸಲು ಸಾಕಷ್ಟು ಸಮಯ, ಅವಕಾಶಗಳನ್ನು ಈ ಸಮಾಜ ನೀಡುತ್ತದೆ. ಅದೇ ವಯಸ್ಸಿನ ಹೆಣ್ಣುಮಕ್ಕಳಿಗೆ ಅದಾಗಲೇ ಒತ್ತಡಗಳು. ಭಾಷಣ, ಡಿಬೇಟ್‌ ಎಂದೆಲ್ಲ ಹಾಯಾಗಿರುವ, ನಾಟಕ, ಪದ್ಯ ಎಂದೆಲ್ಲ ಚಟುವಟಿಕೆಯಿಂದಿರುವ ಹುಡುಗಿಯರನ್ನು, ಅಡುಗೆ ಮಾಡಲು ಬರುವುದಿಲ್ಲವೆಂದೋ, ಸರಿಯಾಗಿ ಮೇಕಪ್‌ ಮಾಡಿಕೊಂಡು ಸ್ಟೈಲಿಶ್‌ ಆಗಿರಲು ಗೊತ್ತಿಲ್ಲವೆಂದೋ ನಿತ್ಯ ಹಂಗಿಸಿ ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸುವವರೂ ಇದ್ದಾರೆ. 

ಆದರೆ, ಈಗ ಪರಿಸ್ಥಿತಿ ಈಗ ಎಲ್ಲ ರೀತಿಯಿಂದಲೂ ಬದಲಾಗಿದೆ. ಅರಿವಿನ ಪ್ರಪಂಚದ ಬಾಗಿಲು ತೆರೆದಂತೆ, ಜ್ಞಾನದ, ಏಕಾಗ್ರತೆಯ ಬೆಳಕು ಮನಸಿನ ಮೂಲೆ ಮೂಲೆಗಳಿಗೆ ಪಸರಿಸುವ ಬೆಳಕು ದೊಡ್ಡದು. ಅದನ್ನು ಪಡೆಯಲು ಹೆಣ್ಣೊಬ್ಬಳು ಪಡಬೇಕಾದ ಶ್ರಮವೂ ದೊಡ್ಡದು. ನಮ್ಮ ಸಮಾಜದಲ್ಲಿ ಮದುವೆ ಎನ್ನುವುದೇ ಹೆಣ್ಣಿನ ಜೀವನದ ಅಂತಿಮ ಗುರಿಯಂತೆ, ಕತೆ-ಕಾದಂಬರಿ-ಧಾರಾವಾಹಿಗಳಲ್ಲಿ ಬಿಂಬಿಸುತ್ತಿರುವುದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಒತ್ತು ಕಡಿಮೆ. ಅದೂ ಅಲ್ಲದೆ, ಪಿ.ಎಚ್‌.ಡಿಯಂಥ ಅಪಾರ ಶ್ರಮ, ಸಮಯ, ಏಕಾಗ್ರತೆ ಬೇಡುವ ಕೋರ್ಸ್‌ಗಳಿಗಂತೂ ತುಂಬ ಯೋಚಿಸಿಯೇ ಕಾಲಿಡಬೇಕಾಗುತ್ತದೆ. ಸ್ನಾತಕೋತ್ತರ ಪದವಿ ಮುಗಿಯುವಾಗಲೇ ಪ್ರಶ್ನೆಗಳು; ಯಾವಾಗ ಸೆಟಲ್‌ ಆಗ್ತಿಯಾ? ಜೀವಮಾನವಿಡೀ ಓದುತ್ತಲೇ ಇದ್ದು ಬಿಡುತ್ತೀಯೋ ಹೆಂಗೆ? ಎನ್ನುವ ಕಳಕಳಿಯ, ಕಾಳಜಿಯ, ಕುಹಕದ ಪ್ರಶ್ನೆಗಳು.

Advertisement

ಮೂರು ತಿಂಗಳಿನ ಎಳೆ ಮಗುವನ್ನು ಮನೆಯಲ್ಲಿರಿಸಿ, ಫೀಡಿಂಗ್‌ ಬಾಟಲ್‌ ಕೊಟ್ಟು ಬರುವವರು, ಗಂಡನ ಜೊತೆ ಬಂದು ಸ್ಪರ್ಧಾತ್ಮಕ ಪರೀಕ್ಷೆಗೆ ಬರೆಯುವವರು, ಫೈನಲ್‌ ಇಯರ್‌ನಲ್ಲಿ ಮದುವೆ ಫಿಕ್ಸ್ ಆಗಿ ಕೊನೆಯ ಸೆಮಿಸ್ಟರ್‌ ಅನ್ನು ಪ್ರೈವೇಟ್‌ ಆಗಿ ಕಟ್ಟುವವರು, ತಮ್ಮ ವೃತ್ತಿಗೂ ಅಭಿರುಚಿಗೂ ತಾಳೆ ಆಗದೆ ಕಳವಳಿಸುವವರು. ಹೀಗೆ ಇದೊಂದು ವಿದ್ಯಾಭ್ಯಾಸ- ಉದ್ಯೋಗ- ಮನೆ- ಮದುವೆ ಹೀಗೆ ವಿಚಿತ್ರವಾದ ಸಂತೋಷ, ಸಂಭ್ರಮ, ಮಹತ್ವಾಕಾಂಕ್ಷೆ, ಗೊಂದಲಗಳು ಏಕಕಾಲದಲ್ಲಿ ಮೇಳೈಸಿದ ಬದುಕು. ಈ ಎಲ್ಲಾ ವಿಚಾರಗಳು ಗಂಡು ಮಕ್ಕಳಿಗೆ ಇಲ್ಲವೆಂದಲ್ಲ. ಆದರೆ ಮನೆ-ಸಂಸಾರ ಇವೆಲ್ಲ ಜವಾಬ್ದಾರಿ ಇಪ್ಪತ್ತೆರಡರ ವಯಸ್ಸಿನಲ್ಲಿ ಅವರಿಗೆ ಖಂಡಿತ ಇಲ್ಲ.

 ನಾಳೆಯ ತಿಂಡಿಗೆ ಉಪ್ಪಿಟ್ಟು ಮಾಡಲೇ, ಇಡ್ಲಿ ಮಾಡಲೇ, ಮಗುವಿನ ಯೂನಿಫಾರಂಗೆ ಇಸ್ತ್ರಿ ಹಾಕಿಟ್ಟಿದ್ದೇನೆಯಲ್ಲವೆ? ಈ ಸೀರೆಗೆ ಮ್ಯಾಚಿಂಗ್‌ ಬಳೆ, ಲಿಪ್‌ಸ್ಟಿಕ್‌ ಇಲ್ಲವಲ್ಲ? ಈ ಹೇರ್‌ಸ್ಟೈಲ್‌ನಲ್ಲಿ ನಾನು ಅಧ್ವಾನವಾಗಿ ಕಾಣಿಸುತ್ತಿಲ್ಲವಷ್ಟೆ? ಕಳೆದ ತಿಂಗಳಿಗಿಂತ ಈ ತಿಂಗಳು ಎರಡು ಕೆ.ಜಿ. ದಪ್ಪವಾಗಿದ್ದೀನಾ ಹೇಗೆ?- ಈ ರೀತಿಯ ಸಣ್ಣಪುಟ್ಟ ವಿಷಯಗಳೇ ಓದುವ ಹೆಣ್ಣು ಮಕ್ಕಳ ಏಕಾಗ್ರತೆಯನ್ನು, ಉತ್ಸಾಹವನ್ನು ಕುಂದಿಸುತ್ತಿರುವುದು ಸತ್ಯ.

ಹೆಣ್ಣುಮಕ್ಕಳ ವಿದ್ಯಾಭ್ಯಾಸ ಸ್ವಾತಂತ್ರ್ಯ ಸಂದರ್ಭದಿಂದ ಹಿಡಿದು ಪಂಚವಾರ್ಷಿಕ ಯೋಜನೆಗಳಲ್ಲಿಯೂ ಪ್ರಮುಖವಾಗಿತ್ತು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂದು ಹೇಳಿದರೂ, ಉನ್ನತ ವಿದ್ಯಾಭ್ಯಾಸದ ವಿಚಾರ ಬಂದಾಗ ವಿದ್ಯಾವಂತ  ತಂದೆ-ತಾಯಂದಿರು ಕೂಡ ಸ್ವಲ್ಪ ಹಿಂದೆ ಮುಂದೆ ನೋಡುತ್ತಾರೆ. ಹೆಣ್ಣಿನ ಜೈವಿಕ ಬದಲಾವಣೆಗಳು, ತಾಯಿಯಾಗಬೇಕಾದ ವಯಸ್ಸು, ವಯಸ್ಸಾದಂತೆ ಕಳೆದುಕೊಳ್ಳುವ ಅಂದ, ಹೀಗೆ ಅವರ ಮದುವೆಗೆ ಅವಸರಿಸಲು ಹಲವು ಕಾರಣಗಳು. 

ಹಾಗೆಂದು, ಸ್ವಾತಂತ್ರ್ಯನಂತರದ ಅಭೂತಪೂರ್ವ ಬೆಳವಣಿಗೆಗಳಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸವೂ ಒಂದು. ಎಷ್ಟೋ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಜಾಸ್ತಿ ಇರುವುದೂ ಇದೆ. ಅವರ ಸಂಕಷ್ಟಗಳಿರುವುದು ಸಾಧಾರಣವಾಗಿ ಒಪ್ಪಿತವಾದ, ಕಂಫ‌ರ್ಟಬಲ್‌ ಆಗಿರುವ ವಿದ್ಯಾಭ್ಯಾಸಕ್ಕಿಂತ ಹೆಚ್ಚಿನದನ್ನು ಬಯಸುವ ಸಂದರ್ಭದಲ್ಲಿ. ಮಹಿಳಾ ದಿನಾಚರಣೆಯ ನೆಪದಲ್ಲಿ ಅತಿ ಹೆಚ್ಚು ಸೀರೆ, ಮೇಕಪ್‌ ಸಾಧನಗಳು ಮಾರಾಟವಾಗುತ್ತಿರುವ, ಹೆಣ್ತನದ ಸ್ಥಾಯಿ ಭಾವನೆಗಳನ್ನೇ ವೈಭವೀಕರಿಸುತ್ತಿರುವ ಮಾರುಕಟ್ಟೆ ಪ್ರೇರಿತ ಹೈಪ್‌ಗ್ಳ ನಡುವೆ, ಹೆಣ್ಣಿನ ತಾಳ್ಮೆ, ಸಹನೆ, ಸೌಂದರ್ಯ ವಗೈರೆ ಅನೇಕ ನಾಮ ವಿಶೇಷಣಗಳು, ಅವುಗಳಿಗನುಗುಣವಾಗಿ ಬದುಕಬೇಕಾದ ಅನಿವಾರ್ಯ ಸೃಷ್ಟಿಸಿರುವ ಈ ಸಂದರ್ಭದಲ್ಲಿ  ಜ್ಞಾನದ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರಲು ಆಸೆ ಇರುವ ಎಳೆಯ ಜೀವಗಳಿಗೆ ಪೂರಕವಾದ ವಾತಾವರಣ ಕಲ್ಪಿಸುವುದು ದೇಶದ, ಸಮಾಜದ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ.  

ಜಯಶ್ರೀ ಬಿ. ಕದ್ರಿ 

Advertisement

Udayavani is now on Telegram. Click here to join our channel and stay updated with the latest news.

Next