Advertisement

ಕ್ಷತ್ರೀಯ ಸಮುದಾಯದ ಶಕ್ತಿ ತೋರಿಸಿ: ಉದಯಸಿಂಗ್‌

09:39 AM Jul 08, 2019 | Suhan S |

ಹುಬ್ಬಳ್ಳಿ: ನಗರದ ಈದ್ಗಾ ಮೈದಾನ ಹೋರಾಟದಲ್ಲಿ ಗುಂಡು ತಿಂದವರು ಕ್ಷತ್ರೀಯರು, ನ್ಯಾಯಾಲಯಕ್ಕೆ ಅಲೆದಾಡಿದವರು ನಮ್ಮ ಸಮುದಾಯದವರು. ಆದರೆ ಈಗ ನಗರದಲ್ಲಿ ಕ್ಷತ್ರೀಯ ಸಮುದಾಯದ ಒಬ್ಬ ಶಾಸಕರು, ಸಂಸದರೂ ಇಲ್ಲದಂಥ ಸ್ಥಿತಿಯಿದೆ ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯಸಿಂಗ್‌ ಹೇಳಿದರು.

Advertisement

ವಿದ್ಯಾನಗರ ಶ್ರೀ ಭಾರತಿ ಮರಾಠಾ ಭವನದಲ್ಲಿ ಕರ್ನಾಟಕ ಕ್ಷತ್ರೀಯ ಒಕ್ಕೂಟ ಜಿಲ್ಲಾ ಘಟಕದ ಹಾಗೂ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಈದ್ಗಾ ಮೈದಾನದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಕ್ಷತ್ರೀಯ ಸಮಾಜದವರು. ಅಂದು ಹೋರಾಟದಲ್ಲಿದ್ದವರು, ನ್ಯಾಯಾಲಯ ಅಲೆದಾಡಿ, ಪೊಲೀಸರಿಂದ ಹೊಡೆಸಿಕೊಂಡು, ಗುಂಡೇಟು ತಿಂದು ಇಂದಿಗೂ ಕೂಡಾ ಹಿಂದೆ ಇದ್ದಾರೆ. ಆದರೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದವರು ಶಾಸಕರಾಗಿ, ಸಂಸದರಾಗಿ ಮೆರೆಯುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಸುಮಾರು 1.48 ಕೋಟಿ ಜನಸಂಖ್ಯೆ ಹೊಂದಿರುವ ಕ್ಷತ್ರೀಯ ಸಮಾಜ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತುಂಬಾ ಹಿಂದುಳಿದಿದೆ. ನಮ್ಮ ಸಮಾಜ ಬೆಳೆಸಲು ಯಾವುದೇ ಪಕ್ಷಗಳು ಮುಂದೆ ಬರುವುದಿಲ್ಲ. ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ನೀಡುವುದು ಕೇವಲ ಸಿಎ ಸೈಟ್ ಹಾಗೂ ಅಲ್ಪ ಅನುದಾನ. ಇದರಿಂದ ಏನೂ ಸಾಧ್ಯವಿಲ್ಲ. ಬದಲಾಗಿ ನಮ್ಮ ಸಮಾಜಕ್ಕೆ ಒಂದು ಶಕ್ತಿ ಬೇಕು. ಅದಕ್ಕಾಗಿ ಕ್ಷತ್ರೀಯ ಸಮಾಜ ಸಂಘಟನೆ, ಒಗ್ಗಟ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಕ್ಷತ್ರೀಯ ಸಮಾಜ ಒಂದಾದರೆ, ಸಮಾಜದ ಚಿತ್ರಣವನ್ನೇ ಬದಲಿಸಬಹುದು. ಶೇ.18ರಷ್ಟಿರುವ ನಮ್ಮ ಸಮಾಜ ಒಗ್ಗೂಡಿದರೆ ಅದರಲ್ಲಿರುವ ಶಕ್ತಿಯನ್ನು ಎಲ್ಲರಿಗೂ ತೋರಿಸಬಹುದು ಎಂದರು.

ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಇಂದು ಯಾವುದೇ ಕ್ಷೇತ್ರದಲ್ಲೂ ಕ್ಷತ್ರೀಯ ಸಮಾಜಕ್ಕೆ ಆದ್ಯತೆ ಇಲ್ಲದಂತಾಗಿದೆ. ಒಂದು ವೇಳೆ ಇದ್ದಿದ್ದೇ ಆದಲ್ಲಿ ಎಸ್‌.ಆರ್‌. ಮೋರೆ ಅವರಿಗೆ, ವಿಧಾನ ಪರಿಷತ್‌ ಸದಸ್ಯರಾಗಿರುವ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.

Advertisement

ಮಾಜಿ ಸಚಿವ ಎಸ್‌.ಆರ್‌. ಮೋರೆ, ರಾಜಶ್ರೀ ಜಡಿ, ಸರಳಾ ಬಾಂಢಗೆ, ಪೂರ್ಣಿಮಾ ಶಿಂಧೆ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಪಾಂಡುರಂಗ ಪಮ್ಮಾರ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನಾರಾಯಣ ಚಿಕ್ಕೋರ್ಡೆ, ಸುಭಾಸಸಿಂಗ್‌ ಜಮಾದಾರ, ನಾರಾಯಣ ವೈದ್ಯ, ಸರಳಾ ಬಾಂಢಗೆ ಇದ್ದರು.

ವಿವಿಧ ಘಟಕಕ್ಕೆ ನೇಮಕ: ಜಿಲ್ಲಾ ಹಿರಿಯ ಸಲಹಾಗಾರ ಸಮಿತಿ ಸದಸ್ಯರಾಗಿ ವಿಠuಲಸಾ ಲದ್ವಾ, ಕೆ.ಜಿ.ಟಿಕಾರೆ, ನೀಲಕಂಠಸಾ ಜಡಿ, ಟಿ.ವೈ. ಕಲಾಲ, ಶಂಕರರಾವ್‌ ಸಫಾರೆ, ಅಶೋಕ ಪಾಲಕರ. ಜಿಲ್ಲಾ ಘಟಕ: ಜಿಲ್ಲಾಧ್ಯಕ್ಷರಾಗಿ ಕೇಶವ ಯಾದವ, ಉಪಾಧ್ಯಕ್ಷರಾಗಿ ಕೃಷ್ಣ ಊರಣಕರ, ಸಂಘಟನಾ ಕಾರ್ಯದರ್ಶಿಯಾಗಿ ಸುಭಾಶ ಧಾರವಾಡ. ಜಿಲ್ಲಾ ಯುವ ಘಟಕ: ಜಿಲ್ಲಾಧ್ಯಕ್ಷರಾಗಿ ಶಂಭು ಆರೇರ್‌, ಪ್ರಧಾನ ಕಾರ್ಯದರ್ಶಿಯಾಗಿ ವಿನಾಯಕ ಲದ್ವಾ. ಜಿಲ್ಲಾ ಮಹಿಳಾ ಘಟಕ: ಜಿಲ್ಲಾಧ್ಯಕ್ಷೆಯಾಗಿ ರಾಜಶ್ರೀ ಜಡಿ, ಉಪಾಧ್ಯಕ್ಷರಾಗಿ ಲೀಲಾಬಾಯಿ ಪಾಸ್ತೆ. ಹುಬ್ಬಳ್ಳಿ ನಗರ ಘಟಕ: ಅಧ್ಯಕ್ಷರಾಗಿ ಹನುಮಂತಸಾ ನಿರಂಜನ, ಪ್ರಧಾನ ಕಾರ್ಯದರ್ಶಿಯಾಗಿ ಮುರಳಿಧರ ರೇಣಕೆ. ನಗರ ಯುವ ಘಟಕ: ಅಧ್ಯಕ್ಷರಾಗಿ ಪ್ರಕಾಶ ಬುರಬುರೆ, ಉಪಾಧ್ಯಕ್ಷರಾಗಿ ಶ್ರೀನಿವಾಸ ತಪಾಸ್ಕರ, ಕಾರ್ಯದರ್ಶಿಯಾಗಿ ಪ್ರಕಾಶ ಗಿತ್ತೆ. ನಗರ ಮಹಿಳಾ ಘಟಕ: ಅಧ್ಯಕ್ಷರಾಗಿ ಸಂತೋಷಿ ಕಾಪಸೆ, ಕಾರ್ಯದರ್ಶಿಯಾಗಿ ಪುಷ್ಪಾ ಪವಾರ ಅಧಿಕಾರ ವಹಿಸಿಕೊಂಡರು.

2ಎ ಸೇರ್ಪಡೆಗೆ ಮೊದಲ ಆದ್ಯತೆ:

ಕ್ಷತ್ರೀಯ ಮರಾಠಾ ಸಮಾಜದಿಂದ ಕಳೆದ ಹಲವು ವರ್ಷಗಳಿಂದ ಮೀಸಲಾತಿಯನ್ನು 3ಬಿಯಿಂದ 2ಎ ಮಾಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದು, ಈಗಾಗಲೇ ಮರಾಠಾ ಸಮಾಜದಿಂದ ಎಕ್‌ ಮಾರಾಠಾ, ಲಾಕ್‌ ಮಾರಾಠಾ ಹೋರಾಟ ರಾಜ್ಯಾದ್ಯಂತ ಮಾಡಿದ್ದಾರೆ. ಇದುವರೆಗೂ ಯಾವುದೇ ಸ್ಪಂದನೆ ಇಲ್ಲ. ಈದೀಗ ಕರ್ನಾಟಕ ಕ್ಷತ್ರೀಯ ಒಕ್ಕೂಟದಿಂದ ಈ ಹೋರಾಟವನ್ನು ಕೈಗೆತ್ತಿಕೊಳ್ಳುವ ಮೂಲಕ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ಉದಯಸಿಂಗ್‌ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next