ನಾಮಾಗೆ ಶಹಜಹಾನ್ ಸಹಿ ಮಾಡಿದ್ದು ಎಂದು? ವಕ್ಫ್ ಮಂಡಳಿಗೆ ಹಸ್ತಾಂತರಿಸಿದ್ದು ಯಾವಾಗ? ಈ ಬಗ್ಗೆ ದಾಖಲೆಗಳಿದ್ದರೆ, ವಾರದೊಳಗೆ ಅದನ್ನು ತಂದು ತೋರಿಸಿ’! ಸಾವಿರಾರು ವರ್ಷಗಳ ಇತಿಹಾಸವಿರುವ “ಪ್ರೇಮ ಸೌಧ’ದ ಕುರಿತು ಇಂಥ ಪ್ರಶ್ನೆಗಳನ್ನೆಲ್ಲ ಹಾಕಿದ್ದು ಮತ್ಯಾರೂ ಅಲ್ಲ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ನೇತೃತ್ವದ ಪೀಠ. ತಾಜ್ ಮಹಲ್ ಒಡೆತನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅವರು ಇಂಥ ಖಡಕ್ ಪ್ರಶ್ನೆಗಳನ್ನು ಕೇಳಿ ಅಚ್ಚರಿ ಮೂಡಿಸಿದ್ದಾರೆ.
Advertisement
1631ರಲ್ಲಿ ಪ್ರೇಯಸಿ ಮಮ್ತಾಜ್‌ಳ ಪ್ರೀತಿಯ ಸಂಕೇತವಾಗಿ ಕಟ್ಟಿಸಲಾದ ವಿಶ್ವ ಪ್ರಸಿದ್ಧ ತಾಜ್‌ಮಹಲ್ ಅನ್ನು ಮೊಘಲ್ಚಕ್ರವರ್ತಿ ಶಹಜಹಾನ್ ಸ್ವತಃ ಸಹಿ ಮಾಡಿ ತಮಗೆ ಬರೆದುಕೊಟ್ಟಿದ್ದಾರೆ ಎಂದು ಉತ್ತರಪ್ರದೇಶ ವಕ್ಫ್ ಮಂಡಳಿ ಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ಪ್ರಶ್ನಿಸಿ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) 2010ರಲ್ಲಿ ಪ್ರತಿವಾದ ಮಂಡಿಸಿ ಅರ್ಜಿ ಸಲ್ಲಿಸಿತ್ತು. ವಕ್ಫ್ ಮಂಡಳಿ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಎಎಸ್‌ಐ ಹೇಳಿತ್ತು. ಮಂಗಳವಾರ ಈ ಸಂಬಂಧ ಮು.ನ್ಯಾ. ದೀಪಕ್ ಮಿಶ್ರಾ, ನ್ಯಾ. ಎ.ಎಂ. ಖನ್ವಿಲ್ಕರ್ ಮತ್ತು ನ್ಯಾ. ಡಿ.ವೈ. ಚಂದ್ರಚೂಡ್ ಪೀಠ ಪ್ರಕರಣದ ವಿಚಾರಣೆ ನಡೆಸಿದೆ. ವಕ್ಫ್ ಮಂಡಳಿ ವಾದವನ್ನು ಆಧರಿಸಿ ಸೂಕ್ತ ದಾಖಲೆಗಳನ್ನು ಒಂದು ವಾರದೊಳಗೆ ಕೋರ್ಟ್‌ಗೆ ಹಾಜರು ಪಡಿಸುವಂತೆ ತಾಕೀತು ಮಾಡಿದೆ. ಶಹಜಹಾನ್ ಸಹಿ ಇರುವ ಎಲ್ಲಾ ದಾಖಲೆಗಳನ್ನು ತೋರಿಸಿ ಎಂದು ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ಆದೇಶಿಸಿದ್ದಾರೆ. ಎಎಸ್‌ಐ ಪರ ವಕೀಲ ಎಡಿಎನ್ ರಾವ್ ವಾದ ಮಂಡಿಸುತ್ತಿದ್ದು, ಆ ಸಮಯದಲ್ಲಿ ವಕ್ಫ್ನಾಮಾ ಅಸ್ತಿತ್ವದಲ್ಲೇ ಇರಲಿಲ್ಲ ಎಂದಿದ್ದಾರೆ.