Advertisement
ಶ್ರೀಲಂಕಾದ ಪರಿಸ್ಥಿತಿಯನ್ನೂ ಗಮನಿಸೋಣ. ಆರ್ಥಿಕತೆ ಕುಸಿದು ಬಿದ್ದು, ಹಣದುಬ್ಬರ ಎಲ್ಲ ಹಂತಗಳನ್ನೂ ಮೀರಿ ಬದುಕೇ ದುರ್ಭರವೆನಿಸಿದಾಗ ಜನರು ‘ಇನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬೀದಿಗಿಳಿದರು. ಇಂಥದೊಂದು ಸ್ಥಿತಿ ನಿರ್ಮಾಣವಾಗಲು ದೇಶದ ಅಧ್ಯಕ್ಷ ಹಾಗೂ ಪ್ರಧಾನಿ ನೇತೃತ್ವದ ಸರಕಾರಗಳು ಕೈಗೊಂಡ ವಿಚಿತ್ರ ತೀರ್ಮಾನಗಳು ಕಾರಣ ಎಂಬುದು ಜಗಜ್ಜಾಹಿರ. ಅದರ ಪರಿಣಾಮವನ್ನು ಅನುಭವಿಸಲಾಗದೇ ಜನರು ಹತಾಶರಾದರು. ಅವರ ಕೈಯಲ್ಲಿ ಇದ್ದ ಒಂದೇ ಅಸ್ತ್ರವೆಂದರೆ ಪ್ರತಿಭಟನೆ. ಆ ಮೂಲಕ ವ್ಯವಸ್ಥೆಯನ್ನು ಬದಲಾಯಿಸುವುದು. ಒಂದು ರೀತಿಯಲ್ಲಿ ಕ್ರಾಂತಿ.
Related Articles
Advertisement
ಚಿತ್ರದ ನಿರ್ದೇಶಕ ಮೊಹ್ಸಿನ್ ಮಕ್ಮಲ್ಬಫ್ ಬಹಳ ವ್ಯಂಗ್ಯ ಹಾಗೂ ವಿನೋದದ ಎಳೆಯಲ್ಲಿ ಕಥೆ ಹೇಳಲು ಪ್ರಯತ್ನಿಸಿದ್ದಾರೆ. ಇವೆಲ್ಲವೂ ಯಾವ ನಗರದಲ್ಲಿ ನಡೆದದ್ದು, ಯಾರ ಕಥೆ ಎಂದು ಕೇಳಿದರೆ, ‘ಒಂದು ಆನಾಮಿಕ ನಗರ’ ಎಂಬ ಕಲ್ಪನಾ ಲೋಕವನ್ನು ತೆರೆದಿಡುತ್ತಾರೆ. ಈ ಮೂಲಕ ನಿರ್ದೇಶಕ ನೇರವಾಗಿ ಈ ಕಥೆ ಇಂಥವರದ್ದು, ಇಂಥ ದೇಶದ್ದು ಎಂದು ನಿರ್ದಿಷ್ಟ ಪಡಿಸದೇ ಮಕ್ತವಾಗಿಡುತ್ತಾರೆ. ಇವರ ಉದ್ದೇಶವೂ ಅದೇ.ಇಂಥದೊಂದು ಕಥೆ ಹಿಂದೆ ಹಲವು ದೇಶಗಳಲ್ಲಿ ನಡೆದಿರಬಹುದು, ಮುಂದೆಯೂ ಕೆಲವು ದೇಶಗಳಲ್ಲಿ ನಡೆಯಬಹುದು. ಹಾಗಾಗಿ ಕಥೆಗೆ ಸಾರ್ವಕಾಲಿಕತನ ತಂದುಕೊಡಲು ನಿರ್ದಿಷ್ಟತೆಯ ಹಣೆಪಟ್ಟಿ ಕಟ್ಟುವುದಿಲ್ಲ. ಸರ್ವಾಧಿಕಾರಿಗೆ ತನ್ನ ಆಡಳಿತದ ದುಷ್ಪರಿಣಾಮಗಳನ್ನು ದರ್ಶನ ಮಾಡಿಸಲು ನಿರ್ದೇಶಕರು ಬಹಳ ವಿಚಿತ್ರವಾದ ಸನ್ನಿವೇಶಗಳನ್ನು ಹೆಣೆಯುತ್ತಾರೆ. ಅದರಲ್ಲಿ ಸರ್ವಾಧಿಕಾರಿಯ ಕ್ರೌರ್ಯತೆಯೂ ವ್ಯಕ್ತವಾಗುತ್ತದೆ. ಹಾಗೆಯೇ ನಾಗರಿಕರ ಬೆಂಬಲವಿಲ್ಲದಿದ್ದರೆ ಒಬ್ಬ ಅಧ್ಯಕ್ಷನೂ ಕೇವಲ ಬೆದರು ಬೊಂಬೆಯೆಂಬುದನ್ನು ಚೆನ್ನಾಗಿ ಸಾಬೀತು ಪಡಿಸುತ್ತಾರೆ. ಚಿತ್ರದ ಕೊನೆಯ ಸನ್ನಿವೇಶಕ್ಕಿಂತ ಕೊಂಚ ಮೊದಲಿನ ಸನ್ನಿವೇಶದಲ್ಲಿ ಸೈನಿಕರು ಅಧ್ಯಕ್ಷನನ್ನು ಹುಡುಕಿಕೊಂಡು ರೈಲಿನಲ್ಲಿ ಬರುತ್ತಿರುವುದು ಕಾಣುತ್ತದೆ. ಏನು ಮಾಡಲೂ ತೋರದೇ ಅಲ್ಲಿಯೇ ಇದ್ದ ಬೆದರುಬೊಂಬೆಯ ಟೊಪ್ಪಿ, ದಿರಿಸು ತೆಗೆದುಕೊಂಡು ಅಧ್ಯಕ್ಷ ಹಾಗು ಮೊಮ್ಮಗ ಬೆದರುಬೊಂಬೆಯ ಭಂಗಿಯಲ್ಲಿ ನಿಲ್ಲುತ್ತಾರೆ. ಸೈನಿಕರು ಹಾಗೆಯೇ ಮುಂದುವರಿಯುತ್ತಾರೆ. ಇದು ಎಂಥ ವ್ಯಂಗ್ಯವೆಂದರೆ, ಎಲ್ಲ ದೇಶವನ್ನಾಳುವ ಮಂದಿಗಳು ನೆನಪು ಮಾಡಿಕೊಳ್ಳುವಂಥದ್ದು. ಇಂಥ ವ್ಯಂಗ್ಯ ಭರಿತ ಸನ್ನಿವೇಶಗಳು ಚಿತ್ರದ ತುಂಬಾ ಇವೆ.
ಕುರಿಮಂದೆಯ ಮಧ್ಯೆ ತನ್ನ ವೈಭವೋಪೇತ ಕಾರು ಬಿಟ್ಟು, ಒಂದು ದಂಪತಿಗೆ ಬಂದೂಕು ತೋರಿಸಿ, ತನ್ನ ಕಾರಿನಲ್ಲಿ ಕುಳ್ಳಿರಿಸಿ ಅವರ ದ್ವಿಚಕ್ರವಾಹನವನ್ನು ದರೋಡೆ ಮಾಡಿಕೊಂಡು ಪರಾರಿಯಾಗುತ್ತಾನೆ. ಇಂಥ ಪ್ರತಿ ಸನ್ನಿವೇಶಗಳಲ್ಲೂ ಸರ್ವಾಧಿಕಾರಿಯ ದೀನ ಸ್ಥಿತಿಯನ್ನು ಉಲ್ಲೇಖೀಸುತ್ತಲೇ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾನೆ. ಹಾಗೆಂದು ಚಿತ್ರ ಬರೀ ಸರ್ವಾಧಿಕಾರಿಯ ಕ್ರೌರ್ಯವನ್ನಷ್ಟನ್ನೇ ಹೇಳುವುದಿಲ್ಲ. ಪ್ರತಿ ಸನ್ನಿವೇಶದಲ್ಲೂ ನಾಗರಿಕರ ಹಿಂಸಾರೂಪದ ಪ್ರತಿಭಟನೆಯನ್ನು ಅನಾವರಣಗೊಳಿಸುತ್ತಾ ಕ್ರಾಂತಿಯೆಂಬುದರ ಹಿಂದಿರುವ ಹಿಂಸೆಯನ್ನು ಉಲ್ಲೇಖೀಸುತ್ತಾರೆ. ಸಂದರ್ಶನವನೊಂದರಲ್ಲಿ ಸ್ವತಃ ಮೊಹ್ಸಿನ್ ಹೇಳುವಂತೆಯೇ, ‘ಸರ್ವಾಧಿಕಾರಿಯ ಏಕಮುಖೀಯಾದ ಆಡಳಿತವೇ ಕ್ರೌರ್ಯಮಯವಾದುದು. ಆದರೆ ಅದನ್ನು ಖಂಡಿಸಿ ಪ್ರಜಾಪ್ರಭುತ್ವ ಬೇಕೆಂದು ಪ್ರತಿಪಾದಿಸಿ ಹಿಂಸಾರೂಪದ ಪ್ರತಿಭಟನೆಗಿಳಿಯುವ ನಾಗರಿಕರು ಅಂತಿಮವಾಗಿ ಆಯ್ದುಕೊಳ್ಳುವುದು ಹಿಂಸೆಯನ್ನೇ. ಇದೇ ವೈರುಧ್ಯ. ನಾನು ಎರಡೂ ನೆಲೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದವರು. ಚಿತ್ರ ನಿರ್ದೇಶಕರ ಈ ಉದ್ದೇಶ ಚಿತ್ರದಲ್ಲಿ ಯಶಸ್ವಿಯಾಗಿದೆ. ಮೊಹ್ಸಿನ್ ಅವರೂ ಕ್ರಾಂತಿಯ ನೆಲೆಯಿಂದಲೇ ಬಂದವರು. ಹೋರಾಟಕ್ಕೆ ಇಳಿದು ಜೈಲು ವಾಸ ಅನುಭವಿಸಿ ಹೊರಬಂದವರು. ಹಾಗಾಗಿ ಅವರಿಗೆ ಎರಡೂ ನೆಲೆಗಳ ಅನುಭವವೂ ಇದೆ. ಅದನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಚೆನ್ನಾಗಿ ಮೂಡಿಬಂದಿದೆ.
ಉತ್ಸಾಹ ಭರಿತ ಕಥಾನಕವನ್ನು ತೆರೆಯ ಮೇಲೆ ತಂದಿರುವ ಮೊಹ್ಸಿನ್, ಕೊನೆಯಲ್ಲಿ ಪ್ರಜಾಪ್ರಭುತ್ವದ ಆಶಯದೊಂದಿಗೆ ಕೊನೆಗೊಳಿಸುತ್ತಾರೆ. ಉದ್ರಿಕ್ರ ಗುಂಪು ಅಧ್ಯಕ್ಷನ ತಲೆ ಕಡಿಯಲು ಬಂದು ಕೊನೆಗೆ ಶಾಂತವಾಗಿ ಜೀವದಾನ ಮಾಡುವುದು ವಿಶೇಷ ಎನಿಸುತ್ತದೆ. ಸಮುದ್ರ ತೀರದಲ್ಲಿ ಅಧ್ಯಕ್ಷನ ಪಿಟೀಲಿಗೆ ಮೊಮ್ಮಗ ಕುಣಿಯತೊಡಗುತ್ತಾನೆ. ಅದೇ ಕೊನೆಯ ದೃಶ್ಯ. ಮೊಮ್ಮಗ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವ ತಲೆಮಾರು ಎಂದು ಗುರುತಿಸುವುದಾದರೆ ಜನ ಬೆಂಬಲಿಸುವ ಪ್ರಜಾತಂತ್ರಕ್ಕೆ ಒಬ್ಬ ಸರ್ವಾಧಿಕಾರಿಯನ್ನೂ ಮಣಿಸುವ ಹಾಗೂ ತನ್ನನ್ನು ಬೆಂಬಲಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವ ಸಾಮರ್ಥಯವಿದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಒಟ್ಟಿನಲ್ಲಿ ಉತ್ಸಾಹ ಭರಿತ ರೂಪಕವನ್ನು ಕಡೆದು ಕೊಟ್ಟಿರರುವ ನಿರ್ದೇಶಕ, ಎರಡು ಗಂಟೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸೋಲುವುದಿಲ್ಲ. ಇದೇ ಕಾರಣದಿಂದ ಗೊಟಬಯಾ ರಾಜಪಕ್ಷ ಅವರ ಮನೆಯನ್ನು ಪ್ರತಿಭಟನಾಕಾರರು ಆವರಿಸಿದಾಗ, ರಸ್ತೆಯಲ್ಲಿ ಹಿಂಸಾರೂಪಕ್ಕೆ ಪ್ರತಿಭಟನೆ ಜಾರಿದಾಗ, ಗೊಟಬಯಾ ಜೀವ ಉಳಿಸಿಕೊಳ್ಳಲು ಪರಾರಿಯಾದಾಗ..ಇದೇ ಸಿನಿಮಾದ ಹಲವು ದೃಶ್ಯಗಳು ನೆನಪಿಗೆ ಬಂದವು. ಇನ್ನೊಂದು ವಿಚಿತ್ರವೆಂದರೆ, ಈ ಚಿತ್ರದ ಬಗ್ಗೆ ಬರೆಯುವ ಹೊತ್ತಿಗೆ ಬ್ರಿಟನ್ ಅಧಿಪತ್ಯಕ್ಕೆ ಹೊಸ ರಾಜ ಪಟ್ಟಕ್ಕೇರಿದ್ದಾರೆ !