Advertisement
ಕಥೆಯಲ್ಲಿ ಸೂಕ್ಷ್ಮತೆ ಇದೆ. ಎಚ್ಚರಿಕೆ ಮತ್ತು ಜಾಣತನದಿಂದ ಪ್ರತಿ ದೃಶ್ಯವನ್ನು ಕುತೂಹಲವಾಗಿ ಕಟ್ಟಿಕೊಡುವ ಮೂಲಕ ಭಯೋತ್ಪಾದನೆ ವಿಷಯವನ್ನು ಸವಾಲೆನ್ನಿಸದೆ, ಸರಳವಾಗಿ ನಿರೂಪಿಸಲಾಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಒಂದೇ ಒಂದು ಕಡೆ ಕಮಾಂಡೋಗಳ ಬುಲೆಟ್ ಸದ್ದು ಬಿಟ್ಟರೆ, ಇಲ್ಲಿ ಮುಗಿಲು ಮುಟ್ಟುವ ಆಕ್ರಂದನವಿಲ್ಲ, ರಕ್ತಪಾತವಿಲ್ಲ, ಬಾಂಬ್‌ಗಳ ಸದ್ದುಗದ್ದಲವಿಲ್ಲ, ನೂರಾರು ಸಾವು-ನೋವುಗಳಿಲ್ಲ.
Related Articles
Advertisement
ಇಲ್ಲಿ ಕಥೆ ಇದೆ, ಚಿತ್ರಕಥೆಯ ಹಿಡಿತವೂ ಇದೆ. ಅದಕ್ಕೆ ಪೂರಕವಾಗಿ ಹೊಸ ಮುಖದ ಪಾತ್ರಗಳೂ ತುಂಬಿವೆ. ಈ ಕಾರಣಕ್ಕೂ “ಟೆರರಿಸ್ಟ್’ ಕೊಂಚ “ಬೆಸ್ಟ್’ ಎನಿಸದೇ ಇರದು. ಹೊಡಿ, ಬಡಿ, ಕುಣಿ ಚಿತ್ರಗಳ ಮಧ್ಯೆ ತಣ್ಣನೆ ಕ್ರೌರ್ಯ ತೋರಿಸುತ್ತಲೇ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕ್ಕಿದೆ. ಇನ್ನು, ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ. ಮೊದಲರ್ಧ ಒಂದಷ್ಟು ಪ್ರಶ್ನೆಗಳ ಮೂಲಕ ಸಾಗುತ್ತೆ. ಅಷ್ಟೇ ವೇಗದಲ್ಲಿ ಆ ಪ್ರಶ್ನೆಗಳಿಗೆ ದ್ವಿತಿಯಾರ್ಧದಲ್ಲಿ ಉತ್ತರವೂ ಸಿಗುತ್ತದೆ. ಆ ಪ್ರಶ್ನೆ ಏನು, ಅದಕ್ಕೆ ಉತ್ತರವೇನು? ಎಂಬ ಕುತೂಹಲಕ್ಕಾದರೂ “ಟೆರರಿಸ್ಟ್’ ಭೇಟಿಗೆ ಅಡ್ಡಿಯಿಲ್ಲ.
ರೇಷ್ಮಾ (ರಾಗಿಣಿ) ಅವಳದು ಮಧ್ಯಮವರ್ಗ ಕುಟುಂಬ. ಅಪ್ಪ,ಅಮ್ಮ, ತಮ್ಮ,ತಂಗಿ ಜೊತೆ ಸಂತಸವಾಗಿರುವ ರೇಷ್ಮಾ ಲೈಫಲ್ಲೂ ಪ್ರೀತಿ ಚಿಗುರಿ, ಬಹುಬೇಗ ಕಮರಿ ಹೋಗುತ್ತೆ. ಇದ್ದಕ್ಕಿದ್ದಂತೆ ಜೀವದಂತಿರುವ ತಂಗಿಯನ್ನು ಉಗ್ರರು ಕಿಡ್ನಾಪ್ ಮಾಡಿ, ಆ ಮೂಲಕ ತಮ್ಮ ಭಯೋತ್ಪಾದಕ ಚಟುವಟಕೆ ನಡೆಸಲು ರೇಷ್ಮಾಳನ್ನು ಬೆದರಿಸಿ, ತಮ್ಮ ಕಾರ್ಯ ಸಾಧನೆಗೆ ಮುಂದಾಗುತ್ತಾರೆ. ಉಗ್ರರ ಆ ಕೆಲಸ ನೆರವೇರುತ್ತಾ, ಇಲ್ಲವಾ ಅನ್ನೋದೇ ಕಥೆ.
ಹಿಂದಿನ ರಾಗಿಣಿಯನ್ನು ಇಲ್ಲಿ ಕಾಣುವಂತಿಲ್ಲ. ಅವರಿಲ್ಲಿ ಮುಗ್ಧ ಮುಸ್ಲಿಂ ಹುಡುಗಿಯಾಗಿ ಇಷ್ಟವಾಗುತ್ತಾರೆ. ಅಷ್ಟೇ ಚೆನ್ನಾಗಿ ಪಾತ್ರ ಕಟ್ಟಿಕೊಟ್ಟಿದ್ದಾರೆ. ರವಿಭಟ್ ಹೊರತುಪಡಿಸಿದರೆ, ಇಲ್ಲಿ ಬಹುತೇಕ ರಂಗಭೂಮಿ ಕಲಾವಿದರಿದ್ದಾರೆ. ಅವರೆಲ್ಲರ ಪಾತ್ರಗಳಿಗೆ ಮೋಸವಿಲ್ಲ. ಪ್ರದೀಪ್ ವರ್ಮ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಗಲ್ಲಿ ಗಲ್ಲಿಯಲ್ಲೂ ಕ್ಯಾಮೆರಾ ಕಣ್ಣಿಟ್ಟ ಮುರಳಿ ಕ್ರಿಶ್ ಅವರ ಛಾಯಾಗ್ರಹಣದಲ್ಲಿ ಅಂದವಿದೆ.
ಚಿತ್ರ: ದಿ ಟೆರರಿಸ್ಟ್ನಿರ್ಮಾಣ: ಅಲಂಕಾರ್ ಸಂತಾನಂ
ನಿರ್ದೇಶನ: ಪಿ.ಸಿ.ಶೇಖರ್
ತಾರಾಗಣ: ರಾಗಿಣಿ, ರವಿಭಟ್, ಪದ್ಮಾ, ಬಾಲಾಜಿ ಮನೋಹರ್, ಶ್ರೀಕಾಂತ್, ಮನು, ಕೀರ್ತಿ ಭಾನು, ಶಶಿಕಾಂತ್‌ಗಟ್ಟಿ, ರಾಘವೇಂದ್ರ ಪ್ರಸಾದ್, ಕೃಷ್ಣ ಹೆಬ್ಟಾಳೆ, ಗಿರೀಶ್ ಇತರರು. * ವಿಜಯ್ ಭರಮಸಾಗರ