ಬೆಲ್ಗ್ರೇಡ್: ಸೌಹಾರ್ದ ಟೆನಿಸ್ ಪಂದ್ಯಾವಳಿ ನಡೆಸಿ ಆಟಗಾರರಿಗೆ ಕೋವಿಡ್-19 ಹಬ್ಬಿಸಿದರೆಂಬ ಟೀಕೆಗೆ ಗುರಿಯಾಗಿರುವ ಸರ್ಬಿಯಾದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಅವರಿಗೆ ತವರಿನ ಫುಟ್ಬಾಲಿಗ ನೆಮಾಂಜ ಮ್ಯಾಟಿಕ್ ಸಂಪೂರ್ಣ ಬೆಂಬಲ ನೀಡಿದ್ದಾರೆ.
“ಇಲಿಗಳು ಕೂಡ ಬಿಲದಿಂದ ಹೊರಬಂದು ಜೊಕೋವಿಕ್ ಅವರನ್ನು ಟೀಕಿಸುವ ಮಟ್ಟಕ್ಕೆ ಇಳಿದಿವೆ. ಅವರೇನೂ ಸರ್ಬಿಯಾದ ಕಾನೂನು ಅಥವಾ ನಿಯಮಾವಳಿಯನ್ನು ಮೀರಿ ಕೂಟವನ್ನು ಸಂಘಟಿಸಿಲ್ಲ. ಈಗ ಎಲ್ಲರೂ ಅವರನ್ನು ಟೀಕಿಸಲಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ನಡತೆ ಬಗ್ಗೆಯೂ ಸಲ್ಲದ ಅಪವಾದ ಹೊರಿಸುತ್ತಿದ್ದಾರೆ. ಆದರೆ ಶೀಘ್ರವೇ ಬೆಕ್ಕು ಅಖಾಡಕ್ಕಿಳಿಯಲಿದೆ. ಇಲಿಗಳೆಲ್ಲ ಮತ್ತೆ ಬಿಲ ಸೇರಲಿವೆ. ಆದರೆ ಅವರು ಈ ಇಲಿಗಳಲ್ಲಿ ಕ್ಷಮೆ ಯಾಚಿಸಬಾರದಾಗಿತ್ತು…’ ಎಂದು ಮ್ಯಾಟಿಕ್ ಖಾರವಾದ ಹೇಳಿಕೆಯೊಂದನ್ನು ನೀಡಿದ್ದಾರೆ.
ಜೊಕೋ ಕೋಚ್‌ಗೂ ಕೋವಿಡ್-19 ಇದೇ ವೇಳೆ ಜೊಕೋವಿಕ್ ಅವರ ಕೋಚ್, ಕ್ರೊವೇಶಿಯಾದ ಮಾಜಿ ಆಟಗಾರ ಗೊರಾನ್ ಇವಾನಿಸೆವಿಕ್ ಅವರಿಗೂ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಶುಕ್ರವಾರ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಮೊದಲೆರಡು ಪರೀಕ್ಷೆ ವೇಳೆ ನೆಗೆಟಿವ್ ಫಲಿತಾಂಶ ಬಂದಿತ್ತು. ಆದರೆ 3ನೇ ಕೋವಿಡ್-19 ಟೆಸ್ಟ್ ಫಲಿತಾಂಶ ಪಾಸಿಟಿವ್ ಆಗಿದೆ ಎಂದು 48 ವರ್ಷದ ಇವಾನಿಸೆವಿಕ್ ತಿಳಿಸಿದ್ದಾರೆ.