Advertisement

ಆರ್ಥಿಕ ಅರಿವು ಶಿಕ್ಷಣದ ಭಾಗವಾಗಬೇಕಲ್ಲವೇ?

10:19 AM Nov 21, 2019 | mahesh |

2018-19 ಆರ್ಥಿಕ ವರ್ಷದಲ್ಲಿ ಸುಮಾರು 71,500 ಕೋಟಿ ರೂ. ಮೊತ್ತದ ಬ್ಯಾಂಕಿಂಗ್‌ ವಂಚನೆ ನಡೆದಿದೆ ಎಂದು ಆರ್‌ ಬಿಐ ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ವಂಚನೆ ಪ್ರಕರಣಗಳು ಬ್ಯಾಂಕಿಂಗ್‌ ನ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿದೆ. ದೇಶದ ಆರ್ಥಿಕ ಪ್ರಗತಿಯ ಮುಖ್ಯ ಆಧಾರ ಸ್ತಂಭವೆನಿಸಿದ ಬ್ಯಾಂಕಿಂಗ್‌ ಕ್ಷೇತ್ರವನ್ನು ಸ್ಥಿರ ಹಾಗೂ ಸದ‌ೃಢವಾಗಿರುವಂತೆ ನೋಡಿಕೊಳ್ಳುವುದು ಆರ್‌ ಬಿಐ, ಸರ್ಕಾರದ ಜವಾಬ್ದಾರಿ ಯಷ್ಟೇ ಅಲ್ಲ ಜನಸಾಮಾನ್ಯರ ಕರ್ತವ್ಯವೂ ಹೌದು. ನಂಬಿಕೆ-ವಿಶ್ವಾಸದ ತಳಹದಿಯ ಮೇಲೆ ನಡೆಯುವ ಬ್ಯಾಂಕಿಂಗ್‌ ವ್ಯವಹಾರದ ತಳಪಾಯ ವಂಚನೆ ಮತ್ತು ಹಗರಣಗಳಿಂದ ಶಿಥಿಲವಾಗುತ್ತಿದೆ. ದೇಶದ ಅಭಿವೃದ್ಧಿಗೆ ಸ್ಥಿರ ಸರಕಾರ ಇರುವುದು ಎಷ್ಟು ಅಗತ್ಯವೋ ಉತ್ತಮ ಬ್ಯಾಂಕಿಂಗ್‌ ವ್ಯವಸ್ಥೆ ಇರಬೇಕಾದದ್ದು ಕೂಡಾ ಅಷ್ಟೇ ಮುಖ್ಯವಾದದ್ದು. ಸಾಕ್ಷರತೆ ಹೆಚ್ಚುತ್ತಿದ್ದರೂ ಉತ್ತಮ ಬ್ಯಾಂಕಿಂಗ್‌ ಅಭ್ಯಾಸ ಶಿಕ್ಷಿತರಲ್ಲೂ ಕಾಣುತ್ತಿಲ್ಲ. ನಮ್ಮ ಶಿಕ್ಷಣದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯ ಜಾಗರೂಕತೆ, ಅರಿವು ಪರಿಣಾಮಕಾರಿಯಾಗಿ ನೀಡಬೇಕಾದ ಅಗತ್ಯವಿದೆ.

Advertisement

ಕನಿಷ್ಠ ಬ್ಯಾಂಕಿಂಗ್‌ ಜ್ಞಾನ
ಕೊಟ್ಟವ ಕೋಡಂಗಿ… ಎನ್ನುವ ನಾಣ್ಣುಡಿಯಂತೆ ಆರ್ಥಿಕ ಶಿಸ್ತು ಇಂದಿನ ಮಾರುಕಟ್ಟೆ ಕೇಂದ್ರಿತ ಭೋಗ ಪ್ರಧಾನ ಸಮಾಜದಲ್ಲಿ ಕಾಣೆಯಾಗುತ್ತಿದೆ. ಸಹಿ ಫೋರ್ಜರಿ, ಎಟಿಎಂ ಕಾರ್ಡ್‌ ವಿವರ ಇನ್ನೊಬ್ಬರೊಂದಿಗೆ ಹಂಚಿ ಕೊಳ್ಳುವುದು, ಸಾಲ ಮರುಪಾವತಿಯ ಕುರಿತು ನಿರಾಸಕ್ತಿ, ಕ್ರೆಡಿಟ್‌ ಕಾರ್ಡ್‌ಗಳ ಬೇಕಾಬಿಟ್ಟಿ ಬಳಕೆ, ಕ್ರೆಡಿಟ್‌ ಸ್ಕೋರ್‌ ವ್ಯವಸ್ಥೆಯ ಕುರಿತು ಕನಿಷ್ಠ ಅರಿವು ಇಲ್ಲದಿರುವುದು ಎದ್ದು ಕಾಣುತ್ತದೆ. ಬ್ಯಾಂಕಿಂಗ್‌ ನಿಯಮಾವಳಿಗಳ ತಿಳಿವಳಿಕೆ ಮತ್ತು ಅವುಗಳ ಪ್ರಾಮಾಣಿಕ ಪಾಲನೆಯ ಕುರಿತು ಸಾರ್ವಜನಿಕರಲ್ಲಿ ಸಾಮಾನ್ಯ ಜ್ಞಾನವಿಲ್ಲದೆ ಇರುವುದೇ ಅನೇಕ ಜ್ವಲಂತ ಸಮಸ್ಯೆಗಳಿಗೆ ಕಾರಣವಾಗಿದೆ. ನೀರವ್‌ ಮೋದಿ, ವಿಜಯ ಮಲ್ಯ ಮೊದಲಾದ ಕಾರ್ಪೊರೇಟ್‌ ಕುಳಗಳ ಭಾರೀ ಆರ್ಥಿಕ ಅಪರಾಧಗಳು ಇಂದಿನ ಪೀಳಿಗೆಗಳ ಆರ್ಥಿಕ ಶಿಸ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಭಾರೀ ಮೊತ್ತದ ಅನುತ್ಪಾದಕ ಸಾಲಗಳಿಂದ ಬ್ಯಾಂಕಿಂಗ್‌ ವ್ಯವಸ್ಥೆಯ ಸಮತೋಲನ ಬಿಗಡಾಯಿ ಸುತ್ತಿದೆ. ಆಗಾಗ್ಗೆ ನಡೆಯುವ ಸಾಲ ಮನ್ನಾ ಘೋಷಣೆ ಹಾಗೂ ರಾಜಕಾರಣಿಗಳ ಸಾಲ ಮರುಪಾವತಿ ಮಾಡದಂತೆ ನೀಡುವ ಹೇಳಿಕೆಗಳು ಸಾಲ ವಾಪಸಾತಿಯ ಕುರಿತು ಕಾಳಜಿ ವಹಿಸುವ ಮಧ್ಯಮ ವರ್ಗದ ಸಾಲ ಗಾರರೂ ಕೂಡಾ ಕ್ಲಪ್ತ ಕಾಲಕ್ಕೆ ಸಾಲದ ಕಂತು ಕಟ್ಟದಂತೆ ಮಾಡುತ್ತಿದೆ. ಬ್ಯಾಂಕುಗಳಿಂದ ಪಡೆದ ಸಾಲ ವಾಪಾಸು ಮಾಡದಿದ್ದರೆ ಏನೂ ಆಗುವುದಿಲ್ಲ ಎನ್ನುವ ಧೋರಣೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ವ್ಯಾಪಿಸಿರುವ ಈ ಅಭಿಮತವೇ ಶಿಕ್ಷಣ ಪೂರೈಸಿ ಉದ್ಯೋಗ ಸೇರಿದವರು ಶಿಕ್ಷಣ ಸಾಲ ಮರುಪಾವತಿಯ ಕುರಿತು ಗಂಭೀರ ರಾಗದಿರಲು ಕಾರಣವಾಗುತ್ತಿದೆ.

ಪಾರದರ್ಶಕ ವ್ಯವಹಾರದ ಅರಿವು
ಜವಾಬ್ದಾರಿಯುತ ನಾಗರಿಕರೆನ್ನಿಸಿಕೊಂಡವರು ತಮ್ಮ ಆರ್ಥಿಕ ವ್ಯವಹಾರಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕಾ ದದ್ದು ಅಪೇಕ್ಷಣೀಯ. ದೊಡ್ಡ ಮೊತ್ತದ ನೋಟುಗಳ ಡಿಮಾನಿಟೈಸೇಶನ್‌ ಸಮಯದಲ್ಲಿ ನಾಗರಿಕರು ಕಪ್ಪು ಹಣವಿದ್ದವರ ಬಳಿಯ ಹಳೆಯ ನೋಟುಗಳನ್ನು ತಮ್ಮ ಖಾತೆಗಳ ಮೂಲಕ ಬದಲಾಯಿಸಿ ಕಪ್ಪು ಹಣಮಟ್ಟ ಹಾಕುವ ಸರಕಾರದ ಉದ್ದೇಶವನ್ನು ನಿಷ್ಪಲಗೊಳಿಸಿದರು. ಅನೇಕ ದೊಡ್ಡ ದೊಡª ವ್ಯವಹಾರಸ್ಥರು ಚಾಲ್ತಿ ಖಾತೆ ತೆರೆದು ಪಾರದರ್ಶಕ ವ್ಯವಹಾರ ಮಾಡುವುದರ ಬದಲು ತಮ್ಮ ಹಣಕಾಸು ವ್ಯವಹಾರವನ್ನು ನೌಕರರ ಉಳಿತಾಯ ಖಾತೆಗಳ ಮೂಲಕ ಕಾನೂನು ಬಾಹಿರವಾಗಿ ನಿರ್ವಹಣೆ ಮಾಡುತ್ತಾರೆ. ಭಾರೀ ಮೊತ್ತದ ಹಣವನ್ನು ನೌಕರರ ಉಳಿತಾಯ ಖಾತೆಗೆ ಹಾಕಿ ಅಲ್ಲಿಂದ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಪಾವತಿ ಮಾಡುತ್ತಾರೆ.

ಆದಾಯ ತೆರಿಗೆ ಫೈಲ್‌ ಮಾಡುವ, ಪಾನ್‌ ಕಾರ್ಡ್‌ ಮೂಲಕ ಪ್ರಾಮಾಣಿಕ ಆರ್ಥಿಕ ವ್ಯವಹಾರ ನಡೆಸುವ ಕುರಿತು ಇನ್ನೂ ಜನರಲ್ಲಿ ಹಿಂಜರಿಕೆ ಇದೆ. ಗ್ರಾಹಕರ ಅಜ್ಞಾನವನ್ನೇ ಬಂಡವಾಳ ಮಾಡಿ ಕೊಂಡು ಡಿಪಾಜಿಟ್‌ ಸಂಗ್ರಹಿಸುವ, ಸಾಲ ಒದಗಿಸುವ ನಾನ್‌ ಬ್ಯಾಂಕಿಂಗ್‌ ವಿತ್ತೀಯ ಸಂಸ್ಥೆಗಳು ಗ್ರಾಹಕರನ್ನು ದೋಚುತ್ತಿವೆ. ವಿತ್ತೀಯ ಸಂಸ್ಥೆಗಳ ಕುರಿತು ಸರಿಯಾದ ಮಾಹಿತಿ ಪಡೆಯದೇ ಕಷ್ಟಪಟ್ಟು ದುಡಿದ ಬಂಡವಾಳವನ್ನು ಕಳೆದುಕೊಳ್ಳಬೇಕಾಗುತ್ತದೆ. ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಂದ ಮನೆ, ವಾಹನ ಸಾಲ ಸೌಲಭ್ಯ ಪಡೆಯಲು ಒದಗಿಸಬೇಕಾದ ಆದಾಯ ತೆರಿಗೆ ಫೈಲಿಂಗ್‌ ದಾಖಲೆಗಳನ್ನಿಟ್ಟುಕೊಳ್ಳದೆ ಖಾಸಗಿ ಬ್ಯಾಂಕುಗಳ ಮೊರೆ ಹೋಗುವ ಗ್ರಾಹಕರು ಬ್ಯಾಂಕಿಂಗ್‌ ಅಜ್ಞಾನದಿಂದಾಗಿ ಅಧಿಕ ಬಡಿªಯ ಸಾಲ ಪಡೆಯಲು ಮುಂದಾಗುತ್ತಾರೆ.

ಕ್ರೆಡಿಟ್‌ ಸ್ಕೋರ್‌ ಚೆನ್ನಾಗಿಟ್ಟುಕೊಳ್ಳುವುದು
ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMGEP), ಮುದ್ರಾ ಸಾಲ ಸೌಲಭ್ಯ, ಗುಂಪು ಸಾಲಗಳನ್ನು ಬ್ಯಾಂಕುಗಳು ಕಠಿನ ಶರ್ತವಿಲ್ಲದೆ ನೀಡುತ್ತಿವೆ. ಪ್ರಧಾನಮಂತ್ರಿ ಜನಧನ ಖಾತೆಯಡಿ ಸಣ್ಣ ಗ್ರಾಹಕರಿಗೆ ಅನುಕೂಲವಾಗಲೆಂದು ಐದು ಸಾವಿರದವರೆಗೆ ಓವರ್‌ ಡ್ರಾಫ್ಟ್ ಸಾಲ ಸೌಲಭ್ಯ ನೀಡಲಾಗಿದೆ. ಖಾತರಿ ಇಲ್ಲದೆ ಮುದ್ರಾ ಸಾಲ ಪಡೆದ ಎಷ್ಟೋ ಗ್ರಾಹಕರು ಸಾಲ ಮರುಪಾವತಿಯ ಬದ್ದತೆ ತೋರಿಸುವುದಿಲ್ಲ. ಇದರಿಂದಾಗಿ ಕ್ರೆಡಿಟ್‌ ಸ್ಕೋರ್‌ ಬಾಧಿತವಾಗುತ್ತದೆ ಎನ್ನುವ ವಾಸ್ತವ ಅನೇಕರಿಗೆ ತಿಳಿದಿಲ್ಲ. ಎಲ್ಲಾ ವಿಧದ ಸಾಲವನ್ನು CIBIL (Credit Information Bureau (India) Limited) ರಿಪೋರ್ಟ್‌ ಆಧಾರದ ಮೇಲೆ ನೀಡಲಾಗುವ ಇಂದಿನ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಚಿನ್ನದ ಮೊಟ್ಟೆಯಿಡುವ ಕೋಳಿಯ ಕತ್ತನ್ನೇ ಸೀಳಿದಂತೆ ಬ್ಯಾಂಕ್‌ ಸಾಲ ಮರುಪಾವತಿಯಲ್ಲಿ ತೋರಿದ ಉದಾಸೀನದಿಂದಾಗಿ ಭವಿಷ್ಯದಲ್ಲಿ ಸಾರ್ವ ಜನಿಕ ಬ್ಯಾಂಕ್‌ಗಳ ದ್ವಾರವೇ ಮುಚ್ಚಿದಂತಾ ಗುತ್ತದೆ ಎನ್ನುವ ಅರಿವು ಗ್ರಾಹಕರಲ್ಲಿಲ್ಲ. ಇಐಆಐಔ ಸ್ಕೋರ್‌ ಎಂದರೇನು, ಬ್ಯಾಂಕಿಂಗ್‌ ಸಾಲ ಸೌಲಭ್ಯ ಪಡೆಯುವಲ್ಲಿ ಅದು ಎಷ್ಟು ಮಹತ್ವಪೂರ್ಣ ಎನ್ನುವ ಕುರಿತು ಹೆಚ್ಚಿನ ಗ್ರಾಹಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ.

Advertisement

ಎಷ್ಟೊ ಶಿಕ್ಷಿತ ಗ್ರಾಹಕರಿಗೆ ಬಹುಭಾಷೆಯಲ್ಲಿ ಮುದ್ರಿತವಾಗಿರುವ ಸಾಮಾನ್ಯ ಚಲನ್‌ಗಳನ್ನು, ಚೆಕ್‌ಗಳನ್ನು ಬರೆಯಲೂ ಬಾರದೇ ಬ್ಯಾಂಕ್‌ ಸಿಬ್ಬಂದಿಯೆ ಅವುಗಳನ್ನು ಬರೆದುಕೊಡಲಿ ಎಂದು ಅಪೇಕ್ಷಿಸುವ ದಯನೀಯ ಸ್ಥಿತಿ ಇದೆ. ಖಾಲಿ ಚೆಕ್‌ಗಳಿಗೆ ಸಹಿ ಹಾಕಿ ತಮ್ಮ ಪ್ರತಿನಿಧಿಗಳನ್ನು ಶಾಖೆಗೆ ಕಳುಹಿಸುವ ಅನೇಕ ಗ್ರಾಹಕರು ಸುಲಭವಾಗಿ ವಂಚಿಸಲ್ಪಡುತ್ತಾರೆ. ಅನಾಮಧೇಯ ವ್ಯಕ್ತಿಗಳ ಕರೆಗಳಿಗೆ ಸ್ಪಂದಿಸಿ ಖಾತೆ ಹಾಗೂ ಎಟಿಎಮ್‌ ವಿವರ ನೀಡಿ ವಂಚನೆಗಳಿಗೆ ತಾವೇ ಆಸ್ಪದ ಮಾಡಿಕೊಡುವ ಸಜ್ಜನರೂ ಕಡಿಮೆ ಸಂಖ್ಯೆಯಲ್ಲಿಲ್ಲ. ಐದು ಟ್ರಿಲಿಯನ್‌ ಆರ್ಥಿಕತೆಯ ಕನಸು ಕಾಣುವ ಹೊತ್ತಿನಲ್ಲಿ ದೇಶದ ನಾಗರಿಕರಲ್ಲಿ good banking practice ಕುರಿತು ಅರಿವು ಅಪೇಕ್ಷಣೀಯ.

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next