Advertisement

Kalaburgi; ವಿಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ‌ ನೀಡಬೇಕೆ: ಪ್ರಿಯಾಂಕ್ ಖರ್ಗೆ

02:55 PM Jun 01, 2024 | Team Udayavani |

ಕಲಬುರಗಿ: ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಬಗ್ಗೆ ಎಸ್ಐಟಿ ತನಿಖೆಗೆ ಆದೇಶಿಸಲಾಗಿದೆ. ಪ್ರಾಥಮಿಕ‌‌ ವರದಿ ಬರಲಿ, ಅಗತ್ಯ ಬಿದ್ದರೆ ಸಿಬಿಐಗೂ ಕೊಡೋಣ. ಆದರೆ, ವಿರೋಧ ಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ‌ ನೀಡಬೇಕಾ? ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸಿಎಂ ಅವರ ಪರಮಾಧಿಕಾರವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

Advertisement

ಕಲಬುರಗಿ ನಗರದಲ್ಲಿ ತಮ್ಮನ್ನು ಭೇಟಿಯಾಗಿದ್ದ ಟಿವಿ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ನಿನ್ನೆ ಯತ್ನಾಳ‌ ಅವರು ಮಾತನಾಡಿದ್ದನ್ನು ಗಮನಿಸಿದ್ದೇನೆ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಪಿಎಸ್ಬೈ ಅಕ್ರಮ ನಡೆದಿತ್ತಲ್ಲ ಆಗ ಯಾಕೆ ಮಾತನಾಡಲಿಲ್ಲ.? ಯಾಕೆ ದಾಖಲೆ ಒದಗಿಸಲಿಲ್ಲ? ಈಗ ಇದ್ದಕ್ಕಿದ್ದಂತೆ ಪರಿಶಿಷ್ಠ ಪಂಗಡದ ಮೇಲೆ ಯಾಕೆ ಪ್ರೀತಿ ಹೆಚ್ಚಾಗಿದೆ? ಈ ಹಿಂದೆ‌ ಯಡಿಯೂರಪ್ಪ ಸರ್ಕಾರದಲ್ಲಿ ಎಸ್ ಸಿ‌ಪಿ/ ಟಿಎಸ್ ಪಿಯ 10,000 ಕೋಟಿ ಅನುದಾನ ಡೈವರ್ಟ್ ಆಗಿದ್ದಾಗ ಯತ್ನಾಳ ಯಾವ ದಾಖಲೆ ಕೊಟ್ಟಿದ್ದರು. ಪದೇ ಪದೇ ವಿಜಯೇಂದ್ರ ದುಬೈಗೆ ಹೋಗುತ್ತಾರೆ ಎಂದು ಆರೋಪಿಸಿದಾಗ ಯಾವ ದಾಖಲೆ ನೀಡಿದ್ದರು ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಕುರಿತಂತೆ ಸರ್ಕಾರ ಈಗಾಗಲೇ ಎಸ್ಐಟಿ ತನಿಖೆಗೆ ಆದೇಶಿಸಿದೆ. ಅಧಿಕಾರಿಗಳ ತಂಡ ಕೂಡಾ ರಚನೆಯಾಗಿದೆ ತಂಡ ತನಿಖೆ‌‌ ನಡೆಸಲಿ. ಇದರಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ, ವಿರೋಧ ಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರ ರಾಜೀನಾಮೆ‌ ಸಲ್ಲಿಸಬೇಕಾ? ಈ ವಿಚಾರದಲ್ಲಿ ಏನೇ ಹೇಳಲಿ ಸಚಿವರ ರಾಜೀನಾಮೆ ಪಡೆಯುವುದು ಸಿಎಂ ಅವರ ಪರಮಾಧಿಕಾರವಾಗಿದೆ ಎಂದರು.

ಕೆಆರ್ಐಡಿಎಲ್ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರ ಡೆತ್ ನೋಟ್ ನಲ್ಲಿ ಕೆಲವೊಂದು ವೈಯಕ್ತಿಕ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ. ಘಟನೆಯ ಹಿನ್ನೆಲೆಯ ಕುರಿತಂತೆ ತನಿಖೆಗೆ ಮೂವರು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ, ತನಿಖೆ‌‌ ನಡೆಯಲಿದೆ ಎಂದರು.

ಸಂವಿಧಾನದ ಆರ್ಟಿಕಲ್ 371 ಜೆ ವಿಚಾರಕ್ಕೆ‌ ಸಂಬಂಧಿಸಿದಂತೆ ಕೆಲವರು ಅಪಸ್ವರ ಎತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆದ ಕೆಲ ಗೊಂದಲಗಳನ್ನು ನಾವು ಸರಿಪಡಿಸಿದ್ದೇವೆ. ಕಲ್ಯಾಣ ಕರ್ನಾಟಕ‌ ಭಾಗಕ್ಕೆ ಆದ ಐತಿಹಾಸಿಕ‌ ಅನ್ಯಾಯ ಹಾಗೂ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಉದ್ದೇಶದಿಂದ ಸಂವಿಧಾನಕ್ಕೆ‌ ತಿದ್ದುಪಡಿ ತಂದು‌ ಆರ್ಟಿಕಲ್ 371 ಗೆ ಜೆ ಸೇರಿಸಲಾಗಿದೆ. ಹಾಗಾಗಿ, ಇದನ್ನು‌ ವಿರೋಧಿಸುವವರು ನಮ್ಮ‌ ಭಾಗದ ಅಭಿವೃದ್ದಿಯನ್ನು ರಾಜ್ಯದ ಇತರೆ ಭಾಗದೊಂದಿಗೆ ಹೋಲಿಕೆ ಮಾಡಿ‌ ನೋಡಲಿ. ಈ ಬಗ್ಗೆ ನಾನು ಈಗಾಗಲೇ ಕಾನೂನು ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು.

Advertisement

ಪ್ರಜ್ವಲ್ ಕಸ್ಟಡಿಯಲ್ಲಿದ್ದಾರೆ. ಅಧಿಕಾರಿಗಳಿಗೆ ಅವರು ಉತ್ತರ ನೀಡಲಿ. ಭವಾನಿ ಅವರು ಮಿಸ್ಸಿಂಗ್ ಆಗಿದ್ದಾರೆ. ಕಾನೂನು ಚೌಕಟ್ಟಿನಲ್ಲಿ‌ ಏನು ನಡೆಯುತ್ತದೆ ನಡೆಯಲಿ. ಈ ಸಂದರ್ಭದಲ್ಲಿ ನಾವು ಹೇಳುವುದೇನಿದೆ ಎಂದರು.

ಲೋಕಸಭಾ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನ ಆಗುತ್ತದೆ ಎನ್ನುವ ಯತ್ನಾಳ ಹಾಗೂ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು‌ ಮೊದಲು ತಮ್ಮ ಮನೆಯ ಬೆಂಕಿ ಆರಿಸಿಕೊಳ್ಳಲಿ. ಯತ್ನಾಳ್ ಹೇಳುವಂತೆ ವಿಜಯೇಂದ್ರ ಸ್ಥಾನ ಉಳಿಸಿಕೊಳ್ಳಲಿ. ಕೇಂದ್ರ ಬಿಜೆಪಿಗೆ ವರದಿ ಕಳಿಸಬೇಕಾಗುತ್ತದೆ. ಹಾಗಾಗಿ ಇವರೆಲ್ಲ ಮಾತನಾಡಿದ್ದು ವರದಿ ಕಳಿಸುತ್ತಾರೆ. ಸರ್ಕಾರ ಸುಭದ್ರವಾಗಿದೆ, ಅವರು ನಿರೀಕ್ಷಿಸಿದಂತೆ ಏನೂ ಆಗಲ್ಲ ಎಂದು ಪ್ರಿಯಾಂಖ್ ಖರ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next