ಇಸ್ರೇಲ್-ಹಮಾಸ್ ನಡುವಣ ಕದನ ಆರಂಭಗೊಂಡು ತಿಂಗಳು ಕಳೆದಿದೆ. ಅ.7ರಂದು ಹಮಾಸ್ ಉಗ್ರರು ಏಕಕಾಲದಲ್ಲಿ ಇಸ್ರೇಲ್ ಮೇಲೆ ಸಹಸ್ರಾರು ಸಂಖ್ಯೆಯಲ್ಲಿ ರಾಕೆಟ್‌ಗಳನ್ನು ಉಡಾಯಿಸಿ ದಾಷ್ಟéìತನ ಮೆರೆದಿದ್ದರು. ಆ ಬಳಿಕ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಯುದ್ಧವನ್ನು ಸಾರಿ ಅವರ ನೆಲೆಗಳನ್ನು ಪುಡಿಗಟ್ಟುತ್ತಲೇ ಬಂದಿದೆ. ಈ ಬಾರಿ ಹಮಾಸ್ ಉಗ್ರರನ್ನು ಸಂಪೂರ್ಣ ನಿರ್ನಾಮ ಮಾಡಿಯೇ ಯುದ್ಧಕ್ಕೆ ಅಂತ್ಯ ಹಾಡುವುದಾಗಿ ಆರಂಭದಿಂದಲೂ ಹೇಳಿಕೊಂಡೇ ಬಂದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಈ ನಿಲುವಿನಿಂದ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಇಸ್ರೇಲ್‌ನ ನಿರಂತರ ದಾಳಿಗೆ ಗಾಜಾಪಟ್ಟಿಯಲ್ಲಿ ಉಗ್ರರು, ನಾಗರಿಕರ ಸಹಿತ ಹತ್ತು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಯುದ್ಧ ತೀವ್ರಗೊಳ್ಳುತ್ತಿದ್ದಂತೆಯೇ ಅರಬ್ ರಾಷ್ಟ್ರಗಳು ತತ್‌ಕ್ಷಣ ಕದನ ವಿರಾಮ ಘೋಷಿಸುವಂತೆ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಒಂದೇ ಸಮನೆ ಒತ್ತಡ ಹೇರಲಾರಂಭಿಸಿವೆ. ಗಾಜಾಪಟ್ಟಿಯಲ್ಲಿನ ಸದ್ಯದ ಪರಿಸ್ಥಿತಿಯನ್ನು ಕಂಡು ಇಸ್ರೇಲ್ ಬೆಂಬಲಿತ ರಾಷ್ಟ್ರಗಳು ಕೂಡ ಈಗ ಕದನವಿರಾಮ ಘೋಷ ಣೆಯ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿವೆ. ವಿಶ್ವಸಂಸ್ಥೆಯಂತೂ ಗಾಜಾಪಟ್ಟಿಯ ದಾರುಣ ಸ್ಥಿತಿಯ ಬಗೆಗೆ ತೀವ್ರ ಕಳವಳ ವ್ಯಕ್ತಪಡಿಸಿದೆಯಲ್ಲದೆ ದಾಳಿಯನ್ನು ತತ್‌ಕ್ಷಣವೇ ಸ್ಥಗಿತಗೊಳಿಸುವಂತೆ ಇಸ್ರೇಲ್‌ಗೆ ಮನವಿ ಮಾಡಿಕೊಂಡಿದೆ.
ಆದರೆ ಇದ್ಯಾವುದೇ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರದ ಇಸ್ರೇಲ್, ತನ್ನ ದಾಳಿಗಳನ್ನು ಸಮರ್ಥಿಸಿಕೊಳ್ಳಲೋ ಎಂಬಂತೆ ಹಮಾಸ್ ಉಗ್ರರು ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆಗಳು, ನಿರಾಶ್ರಿತ ಶಿಬಿರಗಳು, ಸುರಂಗಗಳು, ನಾಗರಿಕರ ನಿವಾಸಗಳನ್ನು ತಮ್ಮ ಅಡಗುದಾಣಗಳನ್ನು ಪರಿವರ್ತಿಸಿಕೊಂಡು ಅಲ್ಲಿಂದಲೇ ಇಸ್ರೇಲ್ ಯೋಧರತ್ತ ದಾಳಿಗಳನ್ನು ನಡೆಸುತ್ತಿರುವ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುತ್ತಿದೆ. ಅಷ್ಟು ಮಾತ್ರವಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಮಾಸ್ ಉಗ್ರರನ್ನು ಸಂಪೂರ್ಣ ದಮನ ಮಾಡಿದ ಬಳಿಕ ಗಾಜಾಪಟ್ಟಿಯಲ್ಲಿನ ಒಟ್ಟಾರೆ ಭದ್ರತೆಯ ಹೊಣೆ ತನ್ನದು ಎಂದು ಘೋಷಿಸಿರುವುದು ಗಾಜಾಪಟ್ಟಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಇಸ್ರೇಲ್ ಮುಂದಾಗಿದೆಯೇ ಎಂಬ ಅನುಮಾನ ಜಾಗತಿಕ ಸಮುದಾಯವನ್ನು ಕಾಡತೊಡಗಿದೆ.
ಈ ಯುದ್ಧವೂ ರಷ್ಯಾ-ಉಕ್ರೇನ್ ಸಮರದ ಮಾದರಿಯಲ್ಲಿ ದೀರ್ಘಕಾಲ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನಾದರೂ ವಿಶ್ವ ರಾಷ್ಟ್ರಗಳು ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ವಿಶ್ವಸಂಸ್ಥೆ ಕೇವಲ ಬೆದರುಗೊಂಬೆಯಂತಾಗಿದ್ದು ಇದರ ಮಾತನ್ನು ವಿಶ್ವದ ಯಾವೊಂದು ರಾಷ್ಟ್ರವೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ವಿಶ್ವದ ಬಲಾಡ್ಯ ರಾಷ್ಟ್ರಗಳು ಕೂಡ ಯುದ್ಧದ ಸಂದರ್ಭದಲ್ಲೆಲ್ಲ ಇಬ್ಬಗೆಯ ನಿಲುವನ್ನು ತಳೆಯುತ್ತಿರುವುದರಿಂದಾಗಿ ಜಾಗತಿಕ ಶಾಂತಿ ಎಂಬುದು ಇತ್ತೀಚಿನ ವರ್ಷಗಳಲ್ಲಿ ಮರೀಚಿಕೆಯಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದದ್ದೇ ಆದಲ್ಲಿ ಸದ್ಯೋಭವಿಷ್ಯದಲ್ಲಿ ಇನ್ನೊಂದು ವಿಶ್ವಯುದ್ಧಕ್ಕೆ ಈ ಜಗತ್ತು ಸಾಕ್ಷಿಯಾಗುವಂತಾದರೆ ಅಚ್ಚರಿಯೇನೂ ಇಲ್ಲ.