ಹೊಸದಿಲ್ಲಿ: ಸುಪ್ರೀಂಕೋರ್ಟ್ ಗಮನಕ್ಕೆ ತಾರದೆ ಮಾಧ್ಯಮಗಳ ಜತೆ ಮಾತನಾಡಿದ ರಾಷ್ಟ್ರೀಯ ನಾಗರಿಕರ ನೋಂದಣಿಯ (NRC) ಇಬ್ಬರು ಹಿರಿಯ ಅಧಿಕಾರಿಗಳ ಕ್ರಮಕ್ಕೆ ನ್ಯಾ| ರಂಜನ್ ಗೊಗೊಯ್ ಮತ್ತು ನ್ಯಾ.ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ. ಪ್ರತೀಕ್ ಹಜೇಲಾ ಮತ್ತು ಶೈಲೇಶ್ ಎಂಬ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
‘ಕೋರ್ಟ್ ಆದೇಶ ಪ್ರಕಾರ ನಡೆದುಕೊಳ್ಳಬೇಕಾಗಿರುವ ಅಧಿಕಾರಿಗಳು ನೀವು. ಮಾಧ್ಯಮಗಳ ಜತೆ ಹೇಗೆ ಮಾತನಾಡಿದಿರಿ? ನಿಮ್ಮ ಮೇಲೆ ದೊಡ್ಡ ಕೆಲಸವೊಂದರ ಹೊರೆಯಿದೆ ಎಂಬ ಕಾರಣಕ್ಕೆ ಸುಮ್ಮನೆ ಬಿಟ್ಟಿದ್ದೇವೆ. ಇಲ್ಲದಿದ್ದರೆ ನಿಮ್ಮನ್ನು ಜೈಲಿಗೆ ಅಟ್ಟಿಸುತ್ತಿದ್ದೆವು’ ಎಂದು ನ್ಯಾಯಪೀಠ ಕಟುವಾಗಿಯೇ ಹೇಳಿದೆ. ಜತೆಗೆ, ನಿಮ್ಮ ಕೆಲಸ ಕೇವಲ ಮಾಹಿತಿ ಸಂಗ್ರಹಣೆ ಮಾತ್ರ ಎಂದು ಹೇಳಿದೆ.
‘ದ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಪ್ರತೀಕ್ ಹಜೇಲಾ, NRCಯಿಂದ ಹೊರಗೆ ಉಳಿದಿರುವ 40 ಲಕ್ಷ ಮಂದಿಯೂ ಅತಿಕ್ರಮಣಕಾರರಲ್ಲ ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ಕೋರ್ಟ್ ಅನುಮತಿ ಇಲ್ಲದೆ ರಾಷ್ಟ್ರೀಯ ನಾಗರಿಕರ ನೋಂದಣಿಯ ಯಾವುದೇ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲೇಬಾರದು ಎಂದು ನ್ಯಾಯಪೀಠ ತಾಕೀತು ಮಾಡಿದೆ. ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಪ್ರತೀಕ್
ಹಜೇಲಾ ಕ್ಷಮೆ ಕೋರಿದ್ದಾರೆ. ರಿಜಿಸ್ಟ್ರಾರ್ ಜನರಲ್ ಅನುಮತಿ ಬಳಿಕವೇ ಪತ್ರಿಕೆಗೆ ಸಂದರ್ಶನ ನೀಡಿದ್ದಾಗಿಯೂ ಅರಿಕೆ ಮಾಡಿಕೊಂಡರು.