ದಾವಣಗೆರೆ: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ಬಯಲಿಗೆಳೆದಿರುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಬೆದರಿಕೆ ಹಾಕಿರುವ ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ಬಯಲಿಗೆಳೆದಿರುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಶಾಸಕ ಜಮೀರ್ ಅಹಮ್ಮದ್ ಹಗುರವಾಗಿ ಏಕ ವಚನದಲ್ಲಿ ಮಾತನಾಡಿರುವುದು, ಜೀವ ಬೆದರಿಕೆ ಹಾಕಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಡ್ ಬ್ಲಾಕಿಂಗ್ ಬಯಲಿಗೆಳೆದಿರುವ ಸಂಸದ ತೇಜಸ್ವಿ ಸೂರ್ಯ ಅವರು ತಪ್ಪು ಮಾಡಿದವರ ಹೆಸರು ಹೇಳಿರುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಅವರು ತೇಜಸ್ವಿ ಸೂರ್ಯ ಅವರಾಗಲಿ, ಬಿಜೆಪಿ ಪಕ್ಷವಾಗಲಿ ಅಲ್ಪಸಂಖ್ಯಾತ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯನವರೇ ಮನೆಯಲ್ಲಿ ಕುಳಿತು ಆರೋಪ ಮಾಡುವುದರಿಂದ ಏನು ಕೆಲಸ ಆಗುವುದಿಲ್ಲ: ಭೈರತಿ
ಕೊರೊನಾದ ಪ್ರಥಮ ಅಲೆ ಸಂದರ್ಭದಲ್ಲಿ ಜಮೀರ್ ಅಹಮ್ಮದ್ ನಡೆದುಕೊಂಡ ರೀತಿಯನ್ನ ಎಲ್ಲರೂ ನೋಡಿದ್ದಾರೆ. ಎಂತೆಂತಹವರಿಗೆ ಬೆಂಬಲ ನೀಡಿ, ಜೈಲಿನಿಂದ ಹೊರ ಬಂದಾಗ ಹೂವಿನ ಹಾರ ಹಾಕಿ ಸ್ವಾಗತ ಮಾಡಿರುವುದನ್ನೂ ಜನರು ನೋಡಿದ್ದಾರೆ. ಜಮೀರ್ ಅಹಮ್ಮದ್ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸುತ್ತಾರೆ. ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು. ಯಡಿಯೂರಪ್ಪ ಅವರಿಗೆ ಎರಡು ಬಾರಿ ಕೊರೊನಾ ಬಂದರೂ ಎಲ್ಲರೊಡಗೂಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆಗಿದ್ದರೂ ಯಡಿಯೂರಪ್ಪ ಯಾಕೆ ರಾಜೀನಾಮೆ ನೀಡಬೇಕು ಡಿ.ಕೆ. ಶಿವಕುಮಾರ್‌ರವರೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಜಮೀರ್ ಅಹಮದ್ ರಕ್ತದಲ್ಲೇ ಮುಸಲ್ಮಾನರ ಪರ, ಹಿಂದೂಗಳ ವಿರೋಧವಿದೆ: ಈಶ್ವರಪ್ಪ ವಾಗ್ದಾಳಿ