Advertisement

ಮೊದಲು ಹಳಿಯೇರಲಿ ಹಳೆಯ ಯೋಜನೆ!

11:27 PM Nov 15, 2019 | mahesh |

ಕರ್ನಾಟಕದಲ್ಲಿ ರೈಲು ಅಭಿವೃದ್ಧಿ ಸಾಕಷ್ಟು ಆಗುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ,
ಆಗುತ್ತಿರುವ ಅಭಿವೃದ್ಧಿ ಕೆಲವೇ ಪ್ರದೇಶಗಳಿಗೆ ಸೀಮಿತವಾಗುತ್ತಿದೆ ಎನ್ನುವುದೂ ಅಷ್ಟೇ ಸತ್ಯ.

Advertisement

ಕರ್ನಾಟಕದಿಂದ ಇದುವರೆಗೂ ಹಲವರು ಕೇಂದ್ರದಲ್ಲಿ ರೈಲು ಮಂತ್ರಿಗಳಾದರೂ, ರೈಲ್ವೆ ಸೌಲಭ್ಯದ ನಿಟ್ಟಿನಲ್ಲಿ ರಾಜ್ಯವು ಇತರ ರಾಜ್ಯಗಳಿಗೆ ಹೋಲಿಸಿದರೆ ಭಾರೀ ಹಿಂದೆ ಇದೆ. ಹೆಚ್ಚಿನ ರೈಲು ಸೌಲಭ್ಯಕ್ಕಾಗಿ ಕರ್ನಾಟಕವು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಕೇಳುತ್ತಲೇ ಇದೆ. ಆದರೆ, ಒತ್ತಾಯ lobbying ಮತ್ತು follow up ಇಲ್ಲದೇ ನಿರೀಕ್ಷಿತ ಫ‌ಲಿತಾಂಶ ಸಿಗುತ್ತಿಲ್ಲ.

ಇತ್ತೀಚೆಗೆ ನಡೆದ ರಾಜ್ಯ ರೈಲು ಯೋಜನೆಗಳಿಗೆ ಸಂಬಂಧಿಸಿದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೀದರ್‌-ನಾಂದೇಡ್‌ ದ್ವಿಪಥ, ಕೋಲಾರದಲ್ಲಿ ರೈಲು ಕೋಚ್‌ ಫ್ಯಾಕ್ಟರಿ, ತುಮಕೂರು-ದಾವಣಗೆರೆ ಹೊಸ ರೈಲು ಮಾರ್ಗಕ್ಕೆ ಭೂಸ್ವಾಧೀನ, ಶಿವಮೊಗ್ಗ-ಶೃಂಗೇರಿ, ಬೇಲೂರು -ಚಿಕ್ಕಮಗಳೂರು, ಬೆಳಗಾವಿ- ಧಾರವಾಡ, ಶಿವಮೊಗ್ಗ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ರಚಿಸಲು ಸಮೀಕ್ಷೆ ಮತ್ತು ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ ನಿರ್ಮಿಸಲು ಒಪ್ಪಿಗೆ ಸೂಚಿಸಿದ್ದಾರೆ. ಯಡಿಯೂರಪ್ಪನವರು ಕೇವಲ ಶಿವಮೊಗ್ಗ ಜಿಲ್ಲೆಯತ್ತ ಹೆಚ್ಚಿನ ಒಲವು ತೋರಿಸಿದ್ದಾರೆ ಎನ್ನುವ ಅಡ್ಡ ಮಾತು ಕೇಳಿ ಬಂದರೂ, ರಾಜ್ಯದಲ್ಲಿ ರೈಲು ಜಾಲ ವಿಸ್ತರಿಸುವ ಅವರ ಚಿಂತನೆ ಮತ್ತು ಕ್ರಮ ಬಹುತೇಕ ಶ್ಲಾ ಸಲ್ಪಟ್ಟಿದೆ. ಕರ್ನಾಟಕದಿಂದ ಇದುವರೆಗೂ ಹಲವರು ಕೇಂದ್ರದಲ್ಲಿ ರೈಲು ಮಂತ್ರಿಗಳಾದರೂ, ರೈಲ್ವೆ ಸೌಲಭ್ಯದ ನಿಟ್ಟಿನಲ್ಲಿ ರಾಜ್ಯವು ಇತರ ರಾಜ್ಯಗಳಿಗೆ ಹೋಲಿಸಿದರೆ ಭಾರೀ ಹಿಂದೆ ಇದೆ.

ದೇಶದಲ್ಲಿ ಪ್ರತಿ 1000 ಚ. ಕಿ.ಮಿ.ಗೆ ಸರಾಸರಿ 19.27 ಕಿ.ಮಿ. ರೈಲು ಮಾರ್ಗ ಇದ್ದರೆ, ನೆರೆಯ ತಮಿಳುನಾಡಿನಲ್ಲಿ 32 ಕಿ.ಮಿ., ಆಂಧ್ರದಲ್ಲಿ 22.73 ಮತ್ತು ಕರ್ನಾಟಕದಲ್ಲಿ ಇದು 15.72 ಕಿ.ಮಿ. ಮಾತ್ರ ಇದೆ. ಕರ್ನಾಟಕದ 186 ತಾಲೂಕುಗಳಲ್ಲಿ 85 ತಾಲೂಕು ಗಳಿಗೆ ರೈಲು ಸಂಪರ್ಕ ಇಲ್ಲ. ತಮಿಳುನಾಡಿನಲ್ಲಿ 6606 ಕಿ.ಮಿ. ಮತ್ತು ಆಂಧ್ರದಲ್ಲಿ 5241 ಕಿ.ಮಿ. ರೈಲು ಮಾರ್ಗ ಇದ್ದರೆ, ಕರ್ನಾಟಕ ದಲ್ಲಿ 3089 ಕಿ.ಮಿ. ಮಾತ್ರ ರೈಲ್ವೆ ಸಂಪ ರ್ಕ ವಿ ದೆ. ಕೊಡಗಿನ ಜನ ರೈಲನ್ನು ಟಿವಿ ಮತ್ತು ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದಾರೆ. ರಾಜ್ಯದ 46% ಪ್ರದೇಶ ರೈಲು ಸಂಪರ್ಕದಿಂದ ವಂಚಿತವಾಗಿದೆ. ರೈಲು ಯೋಜನೆಗಳಿಗಾಗಿ ರಾಜ್ಯವು ಶೇ.50ರಷ್ಟು ವೆಚ್ಚವನ್ನು ಭರಿಸಿದರೂ ನಿರೀಕ್ಷೆಯಷ್ಟು ರೈಲು ಸೌಲಭ್ಯ ದೊರಕದಿರುವುದು ಆಶ್ಚರ್ಯ.

ಹೆಚ್ಚಿನ ರೈಲು ಸೌಲಭ್ಯಕ್ಕಾಗಿ ಕರ್ನಾಟಕವು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಕೇಳುತ್ತಲೇ ಇದೆ. ಆದರೆ, ಒತ್ತಾಯ lobbying  ಮತ್ತು follow up ಇಲ್ಲದೇ ನಿರೀಕ್ಷಿತ ಫ‌ಲಿತಾಂಶ ಸಿಗುತ್ತಿಲ್ಲ. ಬಜೆಟ್‌ ಮಂಡಿಸಲು ನಾಲ್ಕಾರು ದಿನ ಇರುವಾಗ ಬೇಡಿಕೆ ಸಲ್ಲಿಸಿದರೆ, ಆಗೊಂದು-ಈಗೊಂದು ಪತ್ರಿಕಾ ಹೇಳಿಕೆ ಕೊಟ್ಟರೆ, ಯೋಜನೆ ಆಗಬೇಕಾದ ಸ್ಥಳದಲ್ಲಿ ಮೋರ್ಚಾ-ಪ್ರತಿಭಟನೆ ನಡೆಸಿದರೆ ಯಾವ ಕೆಲಸವೂ ಆಗುವುದಿಲ್ಲ. ತಮಿಳುನಾಡು ಸಂಸದರು ತಾರ್ಕಿಕ ಅಂತ್ಯ ಕಾಣುವವರೆಗೆ ಯೋಜನೆಗಳ ಬೆನ್ನನ್ನು ಬೇತಾಳದಂತೆ ಹಿಡಿಯುತ್ತಾರೆ. ರೈಲು ಬಜೆಟ್‌ ಮಂಡನೆಯ ತಿಂಗಳ ಮೊದಲೇ ಕಡತಗಳನ್ನು ಹಿಡಿದು ದೆಹಲಿಯಲ್ಲಿ ಮೊಕ್ಕಾಂ ಹೂಡಿ ತಮ್ಮ ಬೇಡಿಕೆಗಳು ಬಜೆಟ್‌ನಲ್ಲಿ ಸೇರುವಂತೆ ನೋಡಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಈ ಪರಿಸ್ಥಿತಿ ಇಲ್ಲ. ಸಾಮಾನ್ಯವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ-ಬೇರೆ ಪಕ್ಷಗಳ ಸರ್ಕಾರವೇ ಇದ್ದ ಕಾರ ಣ ಸಮನ್ವಯದ ಕೊರತೆಯಿಂದ ರಾಜ್ಯಕ್ಕೆ ಸಾಕಷ್ಟು ರೈಲು ಸೌಲಭ್ಯಗಳು ದೊರಕಿಲ್ಲ ಎಂದೂ ಹೇಳಲಾಗುತ್ತಿದೆ.

Advertisement

“”ಮನಸ್ಸಿದ್ದರೆ ರೈಲುಮಾರ್ಗ, ಇಲ್ಲದಿದ್ದರೆ ಸಮೀಕ್ಷೆ” ಎನ್ನುವ ದಿವಂಗತ ಮಧು ದಂಡವತೆಯವರ ಮಾತು ಕರ್ನಾಟಕದ ಮಟ್ಟಿಗಂತೂ ಸತ್ಯ ಎನಿಸುತ್ತದೆ. ಟ್ರಾಫಿಕ್‌ ಮತ್ತು ಇಂಜಿನಿಯರಿಂಗ್‌ ಸಮೀಕ್ಷೆ ಮುಗಿದು ಹಾವೇರಿ-ಶಿರಸಿ, ತಾಳಗುಪ್ಪಾ – ಸಿದ್ದಾಪುರ, ಕಿರವತ್ತಿ-ದಾಂಡೇಲಿ, ಚಾಮರಾಜನಗರ- ಸತ್ಯಮಂಗಲ, ಕನಕಪುರ-ಚಾಮರಾಜನಗರ, ಆಲಮಟ್ಟಿ -ಕೊಪ್ಪಳ, ಬೆಳಗಾವಿ-ಧಾರವಾಡ, ತಾಳಗುಪ್ಪಾ-ಹೊನ್ನಾವರ, ಗದಗ-ಹಾವೇರಿ, ಮೈಸೂರು- ಕುಶಾಲನಗರ ಮುಂತಾದ ಹಲವು ಯೋಜನೆಗಳು ಮುಂದಿನ ಕ್ರಮಕ್ಕಾಗಿ ಎದುರು ನೋಡುತ್ತಿವೆ. ಕೆಲವು ಯೋಜನೆಗಳು ಪೂರ್ಣವಾಗಲು ಹಣಕಾಸು ಲಭ್ಯತೆಗಾಗಿ ಕಾಯುತ್ತಿವೆ. ಐವತ್ತು ವರ್ಷಗಳ ಬೇಡಿಕೆಯಾದ 162 ಕಿ.ಮಿ ಉದ್ದದ ಹುಬÛಳ್ಳಿ-ಅಂಕೋಲಾ ರೈಲು ಮಾರ್ಗ ಹುಬ್ಬಳ್ಳಿಯಿಂದ ಕಲಘಟಗಿಯವರಗೆ 300 ಕೋಟಿ ವೆಚ್ಚದಲ್ಲಿ 44 ಕಿ.ಮಿ. ಬಹುತೇಕ ಸಿದ್ಧವಾಗಿದ್ದು, ಕಳೆದ 10 ವರ್ಷಗಳಿಂದ ಪರಿಸರ ಸಂಬಂಧಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಈ ದೇಶದಲ್ಲಿ ಯಾವ ರೈಲು ಯೋಜನೆಯೂ ಒಳಪಡದಂಥ ಸಮಿತಿಗಳ ಅಗ್ನಿ ಪರೀಕ್ಷೆಗೆ ತುತ್ತಾಗಿ ಈಗ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಅಂತಿಮ ಹಸಿರು ನಿಶಾನೆಗೆ ಕಾಯುತ್ತಿದೆ. ಕಳೆದ ಫೆಬ್ರವರಿಯಲ್ಲಿ ಸಭೆ ಸೇರಿದ ವನ್ಯ ಜೀವಿ ಮಂಡಳಿ, ನಿರ್ಣಯವನ್ನು ಅನಿರ್ದಿಷ್ಟ ಅವಧಿಗೆ ಮುಂದೆ ಹಾಕಿದೆ.

ತೀರಾ ಇತ್ತೀಚಿನವರೆಗೆ ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ಬೇಡಿಕೆಗೆ ಹಣಕಾಸು ಲಭ್ಯತೆಯ ಸಮಸ್ಯೆ ಕಾಡುತ್ತಿತ್ತು. ಸಂಸತ್ತಿನಲ್ಲಿ ಈ ನಿಟ್ಟಿನಲ್ಲಿ ಕೇಳಿದ ಪ್ರಶ್ನೆಗೆ ಹಣಕಾಸು ಲಭ್ಯತೆಯ ಮೇಲೆ ಈ ಯೋಜನೆಯನ್ನು ಕೈಗೊಳ್ಳಲಾಗುವುದು ಎನ್ನುವ ಸ್ಟ್ಯಾಂಡರ್ಡ್‌ ಸಮಜಾಯಿಷಿ ಸಿಗುತ್ತಿತ್ತು. ಈಗ ಪರಿಸರ ಕ್ಲಿಯರೆನ್ಸ್‌ ಮತ್ತು ಭೂಸ್ವಾಧೀನ ಅಡೆತಡೆಯಾಗಿದೆ. ಒಪ್ಪಿಗೆ ದೊರೆತು ವರ್ಷಗಳಾದರೂ ತುಮುಕೂರು-ದಾವಣಗೆರೆ ಮಾರ್ಗಕ್ಕೆ ಇನ್ನೂ ಭೂಸ್ವಾಧೀನ ಪೂರ್ಣಗೊಂಡಿಲ್ಲ. ಯಡಿಯೂರಪ್ಪನವರು ಕರ್ನಾಟಕಕ್ಕೆ ಹೆಚ್ಚಿನ ರೈಲು ಸೌಲಭ್ಯ ದೊರಕಿಸಲು ಭಾರೀ ಉತ್ಸಾಹ ತೋರಿಸುತ್ತಿದ್ದಾರೆ. ಅದರೆ, ರೈಲು ಯೋಜನೆಗಳಿಗೆ ಬರುವ ಅಡೆತಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇವು ಹಳಿ ಏರುವುದರ ಬಗೆಗೆ ಸಂದೇಹ ಕಾಣುತ್ತದೆ. ರೈಲು ಯೋಜನೆಗಳಿಗೆ ಭೂಸ್ವಾಧೀನ ಮತ್ತು ಪರಿಸರ ಸಂಬಂಧಿ ಸಮಸ್ಯೆಗಳು ಮಹಾ ಕಂದಕಗಳಾಗಿದ್ದು, ಇವುಗಳನ್ನು ದಾಟುವುದು ಮಹಾ ಪ್ರಯಾಸದ ಕೆಲಸ. ಈ ಅಡೆತಡೆಗಳನ್ನು ಆಮೂಲಾಗ್ರವಾಗಿ ಹೋಗಲಾಡಿಸುವ ಕ್ರಮ ತೆಗೆದುಕೊಳ್ಳದೇ ರೈಲು ಯೋಜನೆಗಳು ಹಳಿ ಏರುವುದು ಮತ್ತು ಸಮಯ ಪರಿಮಿತಿಯಲ್ಲಿ ಪೂರ್ಣಗೊಳ್ಳುವುದು ಅಸಾಧ್ಯ. ಈ ದೇಶದಲ್ಲಿ ಉದ್ಯಮ ಅಥವಾ ಯಾವುದೇ ಯೋಜನೆ ಕಾರ್ಯಗತಮಾಡುವಲ್ಲಿ ಪರಿಸರ ಕ್ಲಿಯರೆನ್ಸ್‌ ದೊರಕಿದರೆ ಮತ್ತು ಭೂಸ್ವಾಧೀನ ಪಡೆಸಿಕೊಂಡರೆ 75% ಉದ್ಯಮ ಸ್ಥಾಪಿಸಿದಂತೆ ಎನ್ನುವ ಇಂಡಿಯಾ ಇಂಕ್‌ನ ಬಿಚ್ಚು ಮಾತಿನಲ್ಲಿ ಅರ್ಥವಿದೆ. ದೇಶದ ವಾಣಿಜ್ಯೋದ್ಯಮ ಸಂಘಗಳು ಒಮ್ಮೆ ಈ ನಿಟ್ಟಿನಲ್ಲಿ ಸರ್ಕಾರದ ಬಳಿ ನಿಯೋಗ ಒಯ್ದು ದೂರಿದ್ದರು.

ಈಗಾಗಲೇ ಸಾವಿರಾರು ಕೋಟಿಯ ಹಲವು ಯೋಜನೆಗಳು ಚಾಲ್ತಿಯಲ್ಲಿವೆ. ಅನುಷ್ಠಾನದ ವಿವಿಧ ಹಂತದಲ್ಲಿದ್ದು ಆಮೆ ವೇಗದಲ್ಲಿ ನಡೆಯುತ್ತಿವೆ. ಸಾಕಷ್ಟು ಹಣ ವೆಚ್ಚವಾಗಿದೆ. ಆದರೆ, ಅದರ ಫ‌ಲ ಸಮಯ ಪರಿಮಿತಿಯಲ್ಲಿ ಸಿಗುತ್ತಿಲ್ಲ. ಅಂತೆಯೇ ಹೊಸ ಯೋಜನೆಗಳನ್ನು ಹುಟ್ಟು ಹಾಕುವುದಕ್ಕಿಂತ, ಈಗ ನಡೆಯುತ್ತಿರುವ, ಯೋಜನೆಗಳಿಗೆ ಹಣಕಾಸು ಪೂರೈಸಿ ಮತ್ತು ವಿವಾದಕ್ಕೆ ಸಿಲುಕಿರುವ ಯೋಜನೆಗಳನ್ನು ವಿವಾದದಿಂದ ಮುಕ್ತಿಗೊಳಿಸಿ ಯೋಜನೆಗಳು ಶೀಘ್ರದಲ್ಲಿ ಕಾರ್ಯಗತವಾಗು ವಂತೆ ಮಾಡಬೇಕು. ಸರ್ಕಾರದ ಹೂಡಿಕೆಯ ಫ‌ಲ ತ್ವರಿ ತ ವಾಗಿ ಜನತೆಗೆ ತಲುಪಿದಾಲೇ ಯೋಜನೆಗಳ ಸಾಫ‌ಲ್ಯ ತಿಳಿಯುತ್ತದೆ.

ಕರ್ನಾಟಕದಲ್ಲಿನ ರೈಲು ಮಾರ್ಗಗಳು ಬಹುತೇಕ ಬ್ರಿಟಿಷರು ರಾಜ್ಯಕ್ಕೆ ನೀಡಿದ ಕೊಡುಗೆಗಳು. ಸ್ವಾತಂತ್ರ್ಯಾ ನಂತರ ನಿರೀಕ್ಷೆಯ ಮಟ್ಟದ ಬೆಳವಣಿಗೆಗಳು ದೊರಕಲಿಲ್ಲ. ಕೊಂಕಣ ರೈಲು, ಬೆಂಗಳೂರು-ಹಾಸನ- ಮಂಗಳೂರು, ಕೊಟ್ಟೂರು-ಹರಿಹರ ಮತ್ತು ಚಿಕ್ಕಮಗಳೂರು-ಕಡೂರು ಮತ್ತು ಬೀದರ್‌- ಗುಲ್ಬರ್ಗ ಮಾರ್ಗಗಳನ್ನು ಮುಖ್ಯವಾಗಿ ಉಲ್ಲೇಖೀಸಬಹುದು. ಜಾಫ‌ರ್‌ ಶರೀಫ್ ರೈಲು ಮಂತ್ರಿಗಳಾದಾಗ ಬಹುತೇಕ ಕರ್ನಾಟಕದ ಎಲ್ಲಾ ರೈಲು ಮಾರ್ಗಗಳನ್ನು ಮೀಟರ್‌ ಗೇಜ್‌ನಿಂದ ಬ್ರಾಡ್‌ಗೆಜ್‌ಗೆ ಪರಿವರ್ತಿಸಿದರು. ಜಾರ್ಜ ಫೆರ್ನಾಂಡೀಸ್‌ ರೈಲು ಮಂತ್ರಿಯಾದಾಗ ಮಂಗಳೂರನ್ನು ಮುಂಬೈಗೆ ಜೋಡಿಸುವ ಕೊಂಕಣ ರೈಲಿಗೆ ಚಾಲನೆ ನೀಡಿದರು. ಇತ್ತೀಚೆಗೆ ಹುಬ್ಬಳ್ಳಿ- ಬೆಂಗಳೂರು ಮಾರ್ಗವನ್ನು ದ್ವಿಪಥ ಮಾಡುವ ಕಾರ್ಯ ಆರಂಭವಾಗಿದೆ. ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಇವು ಕರ್ನಾಟಕದಲ್ಲಿನ ರೈಲು ಸೌಲಭ್ಯ ಅಭಿವೃದ್ಧಿಯ ಸಾರಾಂಶ.

ಉತ್ತರದ ಕೆಲವು ರಾಜ್ಯಗಳಂತೆ ಅಥವಾ ನೆರೆಯ ತಮಿಳು ನಾಡು-ಆಂಧ್ರಗಳಂತೆ ಸಾಕಷ್ಟು ರೈಲು ಮಾರ್ಗಗಳು ರಾಜ್ಯದಲ್ಲಿಲ್ಲ. ಇರುವ ಮಾರ್ಗಗಳಲ್ಲಿ ಸಾಕಷ್ಟು ರೈಲುಗಳಿಲ್ಲ. ಓಡುವ ರೈಲುಗಳ ಟೈಮಿಂಗ್‌ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ರಾಜ್ಯದ ಒಳಗಡೆಗಿಂತ ಹೊರಗೆ ಓಡುವ ರೈಲುಗಳೇ ಹೆಚ್ಚು ಎನ್ನುವ ಆರೋಪವಿದೆ. ಬೆಂಗಳೂರಿನಿಂದ ಕರಾವಳಿಗೆ ಹೋಗುವ ರೈಲುಗಳ ಸಂಖ್ಯೆ, ಅವುಗಳ ಟೈಮಿಂಗ್‌ ಮತ್ತು ಸಂಚರಿಸುವ ರೂಟ್‌ , ಪ್ರಯಾಣದ ಅವಧಿ ಖಾಸಗಿ ಬಸ್ಸುಗಳಿಗೆ ವರದಾನವಾಗಿದೆ ಎನ್ನುವ ದೂರು ಕೇಳಿಬರುತ್ತಿದೆ. ಕಳೆದ ಐದು ತಿಂಗಳಿನಲ್ಲಿ ರಾಜ್ಯದಿಂದ 15 ಹೊಸ ರೈಲುಗಳ ಓಡಾಟ ಆರಂಭವಾಗಿದ್ದು ಮತ್ತು ಕೆಲವು ರೈಲುಗಳನ್ನು ವಿಸ್ತರಿಸಲಾ ಗಿದ್ದು, ಬಹುತೇಕ ರೈಲುಗಳು ರಾಜ್ಯದಲ್ಲಿಯೇ ಸಂಚರಿಸುವುದು ವಿಶೇಷ. ಅದರೊಂದಿಗೆ ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಹೊಸ ರೈಲು ನೀಡಿಲ್ಲ ಎನ್ನುವ ಕೂಗೂ ಕೇಳುತ್ತಿದೆ. ಮಲ್ಲಿಕಾರ್ಜುನ ಖರ್ಗೆ ರೈಲು ಮಂತ್ರಿಯಾದಾಗ ಅನುಮತಿ ನೀಡಿದ ಕಲಬುರ್ಗಿ ರೈಲು ವಿಭಾಗ ಇನ್ನೂ ಕಡತದಲ್ಲಿಯೇ ಇದೆ ಎನ್ನುವ ಅಕ್ರೋಶ ಕಲ್ಯಾಣ ಕರ್ನಾಟಕದಲ್ಲಿ ಹೊಗೆಯಾಡುತ್ತಿದೆ. ಕಾರವಾರ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ರೈಲಿನ ಪ್ರಯಾಣದ ಸಮಯವನ್ನು ತಗ್ಗಿಸಬೇಕು ಮತ್ತು ಕುಣಿಗಲ್‌ ಮಾರ್ಗವನ್ನು ಹೆಚ್ಚು ಬಳಸಬೇಕು ಎನ್ನುವ ಬೇಡಿಕೆಯೂ ಇದೆ. ರೈಲು ಅಭಿವೃದ್ಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎನ್ನುವ ಕೂಗು ಇತ್ತೀಚೆಗೆ ಜೋರಾಗಿ ಕೇಳುತ್ತಿದೆ. ಕರ್ನಾಟಕದಲ್ಲಿ ರೈಲು ಅಭಿವೃದ್ಧಿ ಸಾಕಷ್ಟು ಆಗುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ, ಆಗುತ್ತಿರುವ ಅಭಿವೃದ್ಧಿ ಕೆಲವೇ ಪ್ರದೇಶಗಳಿಗೆ ಸೀಮಿತವಾಗುತ್ತಿದೆ ಎನ್ನುವುದೂ ಅಷ್ಟೇ ಸತ್ಯ.

-ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next