Advertisement

ತಪ್ಪಿಸಿಕೊಳ್ಳಲು ಯತ್ನಿಸಿದವನಿಗೆ ಗುಂಡು

11:15 AM Jun 25, 2017 | |

ಬೆಂಗಳೂರು: ಎಚ್‌ಎಎಲ್‌ ಠಾಣೆ ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿಯೊಬ್ಬ ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾನೆ. ಜಾನ್ಸನ್‌(21) ಗುಂಡೇಟು ತಿಂದವ. ಜೂ.10 ರಂದು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ದರೋಡೆಗೆ ಯತ್ನಿಸಿದ ಜಾನ್ಸನ್‌ನನ್ನು ತಡೆಯಲು ಮುಂದಾದ ಫ್ರಾಂಕ್‌ಫಿನ್‌ ಏರ್‌ಹೋಸ್ಟಸ್‌ ಕಂಪೆನಿ ಉದ್ಯೋಗಿ ಸಾಯಿಚರಣ್‌ನನ್ನು ಆರೋಪಿ ಕೊಲೆಗೈದಿದ್ದ. ಹೀಗಾಗಿ ಜಾನ್ಸನ್‌ನನ್ನು ಬಂಧಿಸಲಾಗಿತ್ತು. 

Advertisement

ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿಯನ್ನು ಘಟನೆ ನಡೆದ ಅನ್ನಸಂದ್ರಪಾಳ್ಯಕ್ಕೆ ಕರೆದೊಯ್ದು ಮಹಜರ್‌ ಮುಗಿಸಿ ಪುನಃ ಠಾಣೆಗೆ ಕರೆತರಲಾಗುತ್ತಿತ್ತು. ಈ ವೇಳೆ ಆರೋಪಿ ಜಾನ್ಸನ್‌ ಮೂತ್ರ ವಿಸರ್ಜಿಸಬೇಕೆಂದು ಕೇಳಿಕೊಂಡಿದ್ದ. ಹೀಗಾಗಿ ಆತನನ್ನು ಜೀಪಿನಿಂದ ಇಳಿಸಲಾಗಿತ್ತು.

ಈ ವೇಳೆ ಪೇದೆಗಳಾದ ಕಾಂತರಾಜು ಮತ್ತು ಮಂಜೇಶ್‌ ಆರೋಪಿಯ ಜತೆಯೇ ಇದ್ದರು. ಆದರೆ, ಏಕಾಏಕಿ ಪೇದೆಗಳ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಜಾನ್ಸನ್‌ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತ ಠಾಣೆ ಇನ್‌ಸ್ಪೆಕ್ಟರ್‌ ಸಾದಿಕ್‌ ಪಾಷಾ ತಪ್ಪಿಸಿಕೊಳ್ಳದಂತೆ ಆರೋಪಿಗೆ ಮೂರು ಬಾರಿ ಎಚ್ಚರಿಕೆ ಕೊಟ್ಟಿದ್ದಾರೆ.

ಇದ್ಯಾವುದಕ್ಕೂ ಜಾನ್ಸನ್‌ ಬಗ್ಗಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೂ ಪ್ರಯೋಜನ ಆಗಲಿಲ್ಲ. ನಂತರ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಯಿತು. ಈ ಸಂದರ್ಭದಲ್ಲಿ ಗುಂಡು ಆತನ ಎಡಗಾಲಿಗೆ ತಗುಲಿದೆ. ಕುಸಿದು ಬಿದ್ದ ಆತನನ್ನು ತಕ್ಷಣ ಜೀಪ್‌ನಲ್ಲೇ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರು ತಿಳಿಸಿದರು.

ಕೊಲೆ ಪ್ರಕರಣದಲ್ಲಿ ಜಾನ್ಸನ್‌ ಸಿಕ್ಕಿದ್ದು ಹೀಗೆ: ಸಾಯಿಚರಣ್‌ ಕೊಲೆ ಬಳಿಕ ಪ್ರಾಥಮಿಕ ತನಿಖೆಯಲ್ಲಿ ಆತನ ಸ್ನೇಹಿತರೇ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಚಾಯಿಚರಣ್‌ನ ಎಲ್ಲ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿತ್ತು. ಆದರೆ, ಆರೋಪಿ ಪತ್ತೆಯಾಗಲಿಲ್ಲ. ನಂತರ ಘಟನಾ ಸ್ಥಳದ ಸುತ್ತ ಮುತ್ತಲ ಪ್ರದೇಶದಲ್ಲಿದ್ದ 25 ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಲಾಗಿತ್ತು.

Advertisement

ಆದರೆ, ಯಾವುದರಲ್ಲೂ ಆರೋಪಿಯ ಮುಖ ಕಾಣುತ್ತಿರಲಿಲ್ಲ. ಒಂದು ಕ್ಯಾಮೆರಾದಲ್ಲಿ ಮಾತ್ರ ಅನುಮಾನಾಸ್ಪದವಾಗಿ ಹೋಗುತ್ತಿದ್ದವನ ಚಿತ್ರ ಚಿಕ್ಕಿತ್ತು. ಈ ದೃಶ್ಯವನ್ನೇ ತಾಂತ್ರಿಕ ಪರಿಣಿತರ ಮೂಲಕ ಇನ್ನಷ್ಟು ಸ್ಪಷ್ಟವಾಗಿ ಕಾಣುವಂತೆ ಮಾಡಿಕೊಂಡು ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿ ಬಿದಿದ್ದಾನೆ ಎಂದು ಹೇಮಂತ್‌ ನಿಂಬಾಳ್ಕರ್‌ ತಿಳಿಸಿದರು.

ಸುಳಿವು ಕೊಟ್ಟ ನಡೆಯುವ ಶೈಲಿ: ಸಾಯಿಚರಣ್‌ ಕೊಲೆ ಪ್ರಕರಣದಲ್ಲಿ ನಡುಗೆ ಶೈಲಿಯೇ ಆರೋಪಿ ಬಂಧನಕ್ಕೆ ನೆರವಾಗಿದೆ. ಸಿಸಿಟಿವಿಯಲ್ಲಿ ಕಂಡಿದ್ದ ಅನುಮಾನಸ್ಪದ ವ್ಯಕ್ತಿಯ ನಡುಗೆಯನ್ನು ಅಕ್ಕ-ಪಕ್ಕದ ನಾಲ್ಕು ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣದಲ್ಲಿ ತೊಡಗಿರುವವರೊಂದಿಗೆ ಹೋಲಿಕೆ ಮಾಡಿ ನೋಡಲಾಗಿತ್ತು. ಈ ವೇಳೆ ಜಾನ್ಸನ್‌ ಕೂಡ ಬಂದಿದ್ದ.

ಪರೇಡ್‌ನ‌ ದೃಶ್ಯವನ್ನು ಕ್ಯಾಮರಾದಲ್ಲಿ ದಾಖಲಿಸಿಕೊಳ್ಳಲಾಯಿತು. ನಂತರ ಪರಿಶೀಲಿಸಿದಾಗ ಜಾನ್ಸನ್‌ ನಡೆಯುವ ಶೈಲಿ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯಕ್ಕೆ ಹೊಂದಾಣಿಕೆ ಆಗಿತ್ತು. ಈ ಆಧಾರದಲ್ಲಿ ಈತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸಾಯಿಚರಣ್‌ನನ್ನು ಕೊಂದಿರುವುದು ತಾನೇ ಎಂದು ಜಾನ್ಸನ್‌ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next