ವಿಜಯಪುರ: ದೀಪಾವಳಿ ಹಬ್ಬದ ಮಹಾಲಕ್ಷ್ಮಿ ಪೂಜಾ ಸಂಭ್ರಮಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಮತ್ತೊಂದು ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಬಬಲೇಶ್ವರ ಪಟ್ಟಣದ ಸಿದರಾಯ ಎಂಬಾತ ಶಸ್ತ್ರಾಸ್ತ್ರ ಪರವಾನಗಿ ಪಡೆದ ಪಿಸ್ತೂಲ್ ನಿಂದ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಇಂಥಹದ್ದೆ ಮತ್ತೊಂದು ಪ್ರಕರಣ ಜಿಲ್ಲೆಯ ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ ವರದಿಯಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಅಣ್ಣ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದ ರಿವಾಲ್ವಾರ್ ನಿಂದ ತಮ್ಮ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಹಾವಿನಾಳ ಗ್ರಾಮದ ಕಲ್ಲಪ್ಪ ಉಟಗಿ ಎಂಬಾತ ಶಸ್ತ್ರಾಸ್ತ್ರ ಪರವಾನಗಿ ಸಹಿತ ರಿವಾಲ್ವಾರ್ ಹೊಂದಿದ್ದ. ಆದರೆ ಕಲ್ಲಪ್ಪನ ತಮ್ಮ ತುಕ್ಕಪ್ಪ ಉಟಗಿ ತನ್ನ ಅಣ್ಣನ ರಿವಾಲ್ವಾರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ತುಕ್ಕಪ್ಪ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಟ್ರ್ಯಾಕ್ಡರ್ ಪೂಜೆಯ ಬಳಿಕ ತುಕ್ಕಪ್ಪ ಹಾಡಹಗಲೇ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ಕಾನೂನು ಪ್ರಕಾರ ಶಸ್ತ್ರಾಸ್ತ್ರ ಪರವಾನಿಗೆ ಸಹಿತ ಸಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದರೂ ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶನ, ಅನಗತ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸುವುದು, ತನ್ನ ಜೀವಕ್ಕೆ ಅಪಾಯ ಎದುರಾಗದ ಹೊರತು ಯಾರ ಮೇಲೂ ಸಕ್ರಮ ಶಸ್ತ್ರಾಸ್ತ್ರ ಇದ್ದರೂ ಕಾನೂನು ಪ್ರಕಾರ ಗುಂಡು ಹಾರಿಸುವಂತಿಲ್ಲ. ಇದರ ಹೊರತಾಗಿ ಅನಗತ್ಯವಾಗಿ ಶಸ್ತ್ರಾಸ್ತ್ರ ಬಳಕೆ ಮಾಡಿದಲ್ಲಿ ಅದನ್ನು ಕಾನೂನಿನ ದುರ್ಬಳಕೆ ಎಂದು ಪರಿಗಣಿಸಲಾಗುತ್ತದೆ.
ಜಿಲ್ಲೆಯಲ್ಲಿ ಅನಗತ್ಯವಾಗಿ ಶಸ್ತ್ರಾಸ್ತ್ರ ದುರ್ಬಳಕೆಯ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಬಬಲೇಶ್ವರ ಪ್ರಕರಣದ ಬೆನ್ನಲ್ಲೇ ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಗಾಳಿಯಲ್ಲಿ ಗುಂಡು ಹಾರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಪ್ರಕರಣಗಳು ಮರುಕಳಿದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.