ವಿಜಯಪುರ: ರಾಜ್ಯದ ಸಿದ್ದರಾಮಯ್ಯ ಸರ್ಕಾರದಿಂದ ವೀರಶೈವ ಲಿಂಗಾಯತರನ್ನು ಇಬ್ಭಾಗ ಮಾಡುವ ಭೀತಿ ಇತ್ತು. ಆದರೆ, ಇವರು ಮೂರು ಭಾಗವಾಗಿ ಒಡೆದಿದ್ದಾರೆ. ಹಣ ಕೊಟ್ಟು ಲಕ್ಷಾಂತರ ಜನರನ್ನು ಕರೆ ತಂದು, ಮನಬಂದಂತೆ ಜಾಹೀರಾತು ನೀಡಿ ತಮ್ಮ ಶಿಕ್ಷಣ ಸಂಸ್ಥೆಗಳ ಉದ್ಧಾರಕ್ಕಾಗಿ ಸಮಾವೇಶ ಮಾಡಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೆಸರಿನಲ್ಲಿ ನಡೆಸಿದ ಸಮಾವೇಶಗಳಿಂದ ಸಮಾಜಕ್ಕೆ ಮಾತ್ರ ಶೂನ್ಯ ಲಾಭವಾಗಿದೆ. ಇಂಥ ಧರ್ಮ ಭಂಜಕರಿಗೆ ಶೀಘ್ರವೇ ಉತ್ತರ ಸಿಗಲಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಿಡಿ ಕಾರಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಶ್ರೀಗಳು ಮಾತನಾಡಿದರು. ಸಮಾವೇಶಕ್ಕೆ ಚಾಲನೆ ನೀಡಿದ ಹೊಸಪೇಟೆ ಜಗದ್ಗುರು ಡಾ.ಸಂಗನಬಸವ ಶ್ರೀಗಳು ಮಾತನಾಡಿ, ಸ್ವಾರ್ಥಕ್ಕಾಗಿ ಧರ್ಮ ಒಡೆಯುವ ಕೆಲಸ ನಡೆಯುತ್ತಿದೆ. ಧರ್ಮ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದವರು ನಾಶವಾಗಿ ಹೋಗುತ್ತಾರೆ. ಇಂಥ ಧರ್ಮ ಭಂಜಕ ರಾಜಕೀಯ ನಾಯಕರನ್ನು ಮಣ್ಣು ಮುಕ್ಕಿಸಲು ವೀರಶೈವ ಲಿಂಗಾಯತರು ಒಂದಾಗಬೇಕು. ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳು ಒಂದಾಗಬೇಕು ಎಂಬ ಸಂದರ್ಭದಲ್ಲಿ ಧರ್ಮ ವಿಭಜನೆ ಕೆಲಸ ನಡೆಯುತ್ತಿದೆ. ಇದಕ್ಕೆ ಆಸ್ಪದ ನೀಡದೇ ಎಲ್ಲ ಒಳಪಂಗಡಗಳು ಒಗ್ಗೂಡಿ ಕೆಲಸ ಮಾಡಲಿ ಎಂದರು.
ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮೋದಿ ಪ್ರಧಾನಿಯಾದರೆ ಪಾಕಿಸ್ತಾನಕ್ಕೆ ಧಕ್ಕೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಇದರ ಚಿತಾವಣೆಯಂತೆ ಇದೀಗ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಲಾಗುತ್ತಿದೆ ಎಂದರು.
ಬಂಥನಾಳದ ವೃಷಭಲಿಂಗ ಶ್ರೀಗಳು, ಮನಗೂಳಿಯ ಡಾ.ಮಹಾಂತ ಶ್ರೀಗಳು, ಸಿಂದಗಿ ಪ್ರಭುಸಾರಂಗ ಶ್ರೀಗಳು, ಇಂಚಗೇರಿ ರೇಣುಕ ಶ್ರೀಗಳು, ಚಿಮ್ಮಲಗಿ ನೀಲಕಂಠ ಶ್ರೀಗಳು, ಜಾಲಹಳ್ಳಿ ಜಯಶಾಂತಲಿಂಗ ಶ್ರೀಗಳು, ಮನಗೂಳಿಯ ಅಭಿನವ ಶ್ರೀಗಳು, ಕಾನೂನು ತಜ್ಞ ಗಂಗಾಧರ ಗುರುಮಠ ಮಾತನಾಡಿದರು.