Advertisement

ಪಾಲಿಕೆ, ಪುರಸಭೆ ಸದಸ್ಯರ ಆಸ್ತಿ ಘೋಷಣೆಗೆ ಕೆಲವೇ ದಿನ ಬಾಕಿ

11:15 PM Sep 11, 2019 | Sriram |

ವಿಶೇಷ ವರದಿ- ಉಡುಪಿ: ಪಾಲಿಕೆ, ಪುರಸಭೆ ಸದಸ್ಯರ ಆಸ್ತಿ ಘೋಷಣೆ ಪತ್ರ ಮಂಡಿಸಲು ಕೆಲವೇ ದಿನಗಳು ಬಾಕಿಯಿದ್ದು, ಈ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಸಾಮಾಜಿಕ ಕಾರ್ಯಕರ್ತರಿಂದ ರಾಜ್ಯಾದ್ಯಂತ ನಡೆಯುತ್ತಿದೆ.

Advertisement

ಲೋಕಾಯುಕ್ತ ಕಾಯಿದೆಗೆ 1984ಗೆ ಕರ್ನಾಟಕ ವಿಧಾನಸಭೆ 2010ರಲ್ಲಿ ತಿದ್ದುಪಡಿಯನ್ನು ಮಾಡಿದ್ದು. ಇದರ ಪ್ರಕಾರ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆಗೆ ಚುನಾಯಿತರಾಗುವ ಕೌನ್ಸಿಲರ್‌ಗಳು ತಮ್ಮ ಆಸ್ತಿ ಘೋಷಣಾ ಪತ್ರವನ್ನು ಲೋಕಾಯುಕ್ತರ ಮುಂದೆ ಮಂಡಿಸಬೇಕು. ಆದರೆ ಕಳೆದ 9 ವರ್ಷಗಳಿಂದ ಲೋಕಾಯುಕ್ತರಾಗಲಿ ಅಥವಾ ಚುನಾಯಿತ ಸದಸ್ಯರಾಗಲಿ ಈ ಬಗ್ಗೆ ಗಮನ ಹರಿಸಿರಲಿಲ್ಲ.

ರಾಜ್ಯದ ಎಲ್ಲ ಮಹಾನಗರಪಾಲಿಕೆ ಮತ್ತು ಪುರಸಭೆಯ ಸದಸ್ಯರು ಕಡ್ಡಾಯವಾಗಿ ತಮ್ಮ ಆಸ್ತಿ ಘೋಷಣೆ ಮಾಡಬೇಕು ಎಂದು ಆ.28ರಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಮಹತ್ವದ ಆದೇಶ ನೀಡಿದ್ದರು.

ಇದುವರೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಮಾತ್ರ ಪ್ರತೀ ವರ್ಷ ನಿಯಮಿತವಾಗಿ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವಾಗಿತ್ತು. ಆದರೆ ಬಿಬಿಎಂಪಿ ಸಹಿತ ಮಹಾನಗರ ಪಾಲಿಕೆಗಳ ಸದಸ್ಯರು ಆಸ್ತಿವಿವರಗಳನ್ನು ಸಲ್ಲಿಸುತ್ತಿರಲಿಲ್ಲ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಎಚ್‌. ವೆಂಕಟೇಶ್‌ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆ ಸದಸ್ಯರನ್ನು ಕೂಡ ಆಸ್ತಿ ವಿವರ ಸಲ್ಲಿಕೆ ವ್ಯಾಪ್ತಿಗೆ ತರಬೇಕು ಎಂದು ಕೋರಿದ್ದರು. ಅದರಂತೆ ವಿಚಾರಣೆ ನಡೆದು ಲೋಕಾಯುಕ್ತ ನ್ಯಾಯಾಧೀಶರು ಈ ಆದೇಶವನ್ನು ಹೊರಡಿಸಿದ್ದರು.

3 ವಾರಗಳ ಗಡುವು
ವಿಚಾರಣೆಯಂತೆ ಎಲ್ಲ ಚುನಾಯಿತ ಸದಸ್ಯರು ತಮ್ಮ ತಮ್ಮ ಆಸ್ತಿ ಘೋಷಣೆ ಮಾಡುವಂತೆ ಆ.28ರಿಂದ ಮೂರು ವಾರಗಳ ಗಡುವು ನೀಡಿದೆ. ಈ ಗಡುವು ಸೆ.21ಕ್ಕೆ ಕೊನೆಗೊಳ್ಳಲಿದೆ. ಈ ಸಂಬಂಧ ಹಲವಾರು ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ನಿಯೋಗವು ರಾಜ್ಯದಲ್ಲಿರುವ ಮಹಾನಗರ, ನಗರಪಾಲಿಕೆ, ಪುರಸಭೆಗಳಿಗೆ ಭೇಟಿ ನೀಡಿ ಲೋಕಾಯುಕ್ತರ ಆದೇಶ ಪ್ರತಿಯನ್ನು ನೀಡಿ ಗಮನ ಸೆಳೆಯುತ್ತಿದೆ.

Advertisement

ಹಲವೆಡೆ ಭೇಟಿ
ಈಗಾಗಲೇ ಕಲಬುರಗಿ, ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಉಪಾಯುಕ್ತರಾದ ಗಾಯತ್ರಿ ಎನ್‌.ನಾಯಕ್‌ ಅವರನ್ನು ಭೇಟಿಯಾಗಿ ಲೋಕಾಯುಕ್ತರ ಆದೇಶ ಪ್ರತಿಯನ್ನು ನೀಡಲಾಗಿದೆ. ಈಗಾಗಲೇ ಅವಧಿ ಮುಗಿದಿರುವ 60 ಕೌನ್ಸಿಲರ್‌ಗಳು ಈ ಆದೇಶವನ್ನು ಪಾಲಿಸುವಂತೆ ಪತ್ರ ಬರೆಯುವುದಾಗಿ ಅವರು ಭರವಸೆ ನೀಡಿದ್ದಾರೆ. ಬುಧವಾರ ಉಡುಪಿ ನಗರಪಾಲಿಕೆಯ ಪೌರಾಯುಕ್ತರನ್ನೂ ಭೇಟಿಯಾಗಲಿದ್ದಾರೆ. ಅನಂತರ ಹುಬ್ಬಳ್ಳಿ-ಧಾರವಾಡ ಸಹಿತ ಮಹಾನಗರಗಳ ಆಯುಕ್ತರಿಗೆ ಆದೇಶ ಪ್ರತಿ ನೀಡುವ ಕೆಲಸವಾಗಲಿದೆ.

ಕಾಯ್ದೆ ಏನು ಹೇಳುತ್ತದೆ?
1984ರಲ್ಲಿ ಜಾರಿಗೆ ಬಂದ ಲೋಕಾಯುಕ್ತ ಕಾಯ್ದೆ ಪ್ರಕಾರ ಬಿಬಿಎಂಪಿ ಸಹಿತ ರಾಜ್ಯದ ಎಲ್ಲ ಪಾಲಿಕೆ ಸದಸ್ಯರು ಆಸ್ತಿ ವಿವರ ಸಲ್ಲಿಸಬೇಕು. ಮಾತ್ರವಲ್ಲದೆ ಸರಕಾರದ ವಿವಿಧ ಸಂಸ್ಥೆಗಳ ಸದಸ್ಯರು, ಅಧ್ಯಕ್ಷರೂ ಸೇರಿದಂತೆ ಇತರ ಸೊಸೈಟಿ, ಸಮಿತಿ, ಮಂಡಳಿಗಳ ಸದಸ್ಯರು ಆಸ್ತಿ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಆಸ್ತಿ ಘೋಷಣೆ ಪತ್ರ ಸಲ್ಲಿಸದಿದ್ದರೆ ಮುಂದೇನು?
3 ವಾರಗಳ ಅವಧಿಯಲ್ಲಿ ಆಸ್ತಿ ಘೋಷಣೆ ಮಾಡದಿದ್ದಲ್ಲಿ ಲೋಕಾಯುಕ್ತದವರು ಶೋಕಾಸ್‌ ನೋಟಿಸ್‌ ನೀಡಿ 10 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅನಂತರ ಪ್ರಮುಖ ಸುದ್ದಿಮಾಧ್ಯಮಗಳಲ್ಲಿ ಆಸ್ತಿ ವಂಚನೆಯ ಬಗ್ಗೆ ಸಂಬಂಧಪಟ್ಟವರ ವಿವರ ಸಹಿತ ಪ್ರಕಟಗೊಳಿಸಲಾಗುತ್ತದೆ. ಬಳಿಕ ಐಪಿಸಿ ಸೆಕ್ಷನ್‌ 177ರ ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ಹೂಡುವ ಬಗ್ಗೆಯೂ ಚಿಂತನೆ ಇದೆ.

9 ವರ್ಷಗಳಿಂದ ನಿರ್ಲಕ್ಷ್ಯ
ಲೋಕಾಯುಕ್ತ ಕಲಂ 7 ಮತ್ತು 22ರ ಅಧೀನ ಜನಪ್ರತಿನಿಧಿಗಳು ತಮ್ಮ ಆಸ್ತಿ ಘೋಷಣೆ ಮಾಡಬೇಕು ಎಂಬ ಕಾನೂನು 2010ರಲ್ಲೇ ಜಾರಿಗೆ ಬಂದಿದೆ. ಆದರೆ ಇಲ್ಲಿಯವರೆಗೂ ಪಾಲನೆಯಾಗಿಲ್ಲ. ಈ ಮೂಲಕ ಜನಪ್ರತಿನಿಧಿಗಳು ಕಾನೂನು ಪಾಲಿಸಲು ವಿಫ‌ಲರಾಗಿದ್ದಾರೆ. ಆಸ್ತಿ ಘೋಷಣೆಗೆ ಹಿಂದೇಟು ಹಾಕುವ ರಾಜಕಾರಣಿಗಳ ಬಂಡವಾಳ ಕೆಲವೇ ದಿನಗಳಲ್ಲಿ ಬೆಳಕಿಗೆ ಬರಲಿದೆ.
-ಎಚ್‌.ಎಂ. ವೆಂಕಟೇಶ್‌,
ಸಾಮಾಜಿಕ ಹೋರಾಟಗಾರರು

Advertisement

Udayavani is now on Telegram. Click here to join our channel and stay updated with the latest news.

Next