Advertisement

ಪುತ್ತೂರು ಕೃಷಿ ಇಲಾಖೆಯಲ್ಲಿ ಸಿಬಂದಿ ಕೊರತೆ; ಶೇ.74 ಹುದ್ದೆ ಖಾಲಿ;ಎ.ಡಿ. ಹುದ್ದೆಯೇ ಪ್ರಭಾರ

02:45 PM Jul 30, 2020 | mahesh |

ಪುತ್ತೂರು: ಪ್ರಸ್ತುತ ದಿನ ಗಳಿಗೆ ಕೃಷಿ ಚಟುವಟಿಕೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಸರಕಾರ ಕೃಷಿಕರಿಗೆ ನೀಡುವ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ನಿರ್ವಹಿಸುವ ಪುತ್ತೂರು ಕೃಷಿ ಇಲಾಖೆಯಲ್ಲಿ ಸಿಬಂದಿ ಕೊರತೆ ಕಾಡುತ್ತಿದೆ. ಒಟ್ಟು ಮಂಜೂರಾದ 27 ಹುದ್ದೆಗಳಲ್ಲಿ 7 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಬರೋಬ್ಬರಿ ಶೇ. 74 ರಷ್ಟು ಸಿಬಂದಿ ಕೊರತೆ ಕಾಡುತ್ತಿದೆ.

Advertisement

ಪುತ್ತೂರು ತಾಲೂಕು ಕೇಂದ್ರದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಹಿತ ಪುತ್ತೂರು, ಉಪ್ಪಿನಂಗಡಿ ಹಾಗೂ ಕಡಬಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ. ತಾಲೂಕಿನ ಕೃಷಿ ಇಲಾಖೆಯ ಮುಖ್ಯಸ್ಥನಂತಿರುವ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯೇ ಖಾಲಿ ಇದೆ. ಕೃಷಿ ಇಲಾಖೆಯ ಮೂಲಗಳ ಪ್ರಕಾರ ಈ ಭಾಗಗಳಲ್ಲಿ ಬಿಎಸ್ಸಿ ಅಗ್ರಿಕಲ್ಚರ್‌ ಮಾಡುವವರ ಸಂಖ್ಯೆ ಕಡಿಮೆ ಇದ್ದು, ಹೊರ ಜಿಲ್ಲೆಯವರು ಅಧಿಕಾರಿಗಳಾಗಿ ಬಂದರೂ ಕೆಲವೇ ಸಮಯಗಳಲ್ಲಿ ತಮ್ಮ ಜಿಲ್ಲೆಗೆ ವರ್ಗಾವಣೆ ಪಡೆದು ತೆರಳು ತ್ತಾರೆ. ಹೀಗಾಗಿ ಈ ಭಾಗಗಳಲ್ಲಿ ಕೃಷಿ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಯಾಗುತ್ತವೆ. ಮತ್ತೂಂದೆಡೆ ಭತ್ತದ ಕೃಷಿ ಮಾಡುವ ರೈತರು ಕರಾವಳಿ ಭಾಗಗಳಲ್ಲಿ ಕಡಿಮೆಯಾಗುತ್ತಿರುವುದೂ ಹುದ್ದೆ ಖಾಲಿ ಯಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ಎರಡೂ ಕಡೆ ಒಬ್ಬರೇ ನಿರ್ವಹಣೆ
ಪ್ರಸ್ತುತ ಪುತ್ತೂರಿನಲ್ಲಿ ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿಯವರು ಪ್ರಭಾರ ಸಹಾಯಕ ಕೃಷಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಅವರೇ ಸುಳ್ಯ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಜವಾ ಬ್ದಾರಿ ಯನ್ನೂ ನಿರ್ವಹಿಸುತ್ತಿದ್ದಾರೆ. ಸುಳ್ಯ ತಾಲೂಕಿನಲ್ಲೂ ಶೇ. 65ರಷ್ಟು ಹುದ್ದೆ ಖಾಲಿ ಇದೆ.

ಕಡಬ ತಾಲೂಕು ಅಸ್ತಿತ್ವಕ್ಕೆ ಬಂದಿದ್ದರೂ ಹಿಂದೆ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಗ್ರಾಮಗಳು ಪುತ್ತೂರು ಕೃಷಿ ಇಲಾಖೆಯಿಂದಲೇ ನಿರ್ವಹಿಸಲ್ಪಡುತ್ತದೆ. ಕಡಬಕ್ಕೆ ಪ್ರತ್ಯೇಕ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮಂಜೂ ರಾದರೆ ಪುತ್ತೂರಿನ ಹೊರೆ ಕಡಿಮೆ ಯಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ನಿವೃತ್ತಿ ಹೊಂದುತ್ತಿರುವುದರಿಂದ ಮತ್ತಷ್ಟು ಹುದ್ದೆಗಳು ಖಾಲಿಯಾಗಲಿವೆ.

ಭರ್ತಿ-ಖಾಲಿ ಹುದ್ದೆಗಳು
ಸಹಾಯಕ ಕೃಷಿ ನಿರ್ದೇಶಕರ ಒಂದು ಹುದ್ದೆ ಖಾಲಿಯಿದ್ದು, ಕೃಷಿ ಅಧಿಕಾರಿಗಳ 4 ಹುದ್ದೆಗಳಲ್ಲಿ ಮೂರು ಹುದ್ದೆಗಳು ಖಾಲಿ ಇವೆ. ಸಹಾಯಕ ಕೃಷಿ ಅಧಿಕಾರಿಯ ಒಟ್ಟು 13 ಹುದ್ದೆಗಳಲ್ಲಿ ಮೂರು ಹುದ್ದೆಗಳು ಮಾತ್ರ ಭರ್ತಿ ಇದ್ದು, 10 ಹುದ್ದೆಗಳು ಖಾಲಿ ಇವೆ. ಅಧೀಕ್ಷಕರ ಒಂದು ಹುದ್ದೆ ಭರ್ತಿ ಇದೆ. ಪ್ರಥಮದರ್ಜೆ ಸಹಾಯಕ ಒಂದು ಹುದ್ದೆ ಮಂಜೂರಾಗಿದ್ದು, ಅದು ಖಾಲಿ ಇದೆ. ದ್ವಿತೀಯ ದರ್ಜೆ ಸಹಾಯಕ ಮಂಜೂರಾದ ಎರಡೂ ಹುದ್ದೆಗಳು ಭರ್ತಿ ಇವೆ. ಬೆರಳಚ್ಚುಗಾರರು ಹಾಗೂ ವಾಹನ ಚಾಲಕರ ತಲಾ ಒಂದೊಂದು ಹುದ್ದೆಗಳಿದ್ದು, ಎರಡೂ ಖಾಲಿ ಇವೆ. ಡಿ ಗ್ರೂಪ್‌ ಮೂರು ಹುದ್ದೆಗಳಲ್ಲಿ ಮೂರೂ ಖಾಲಿ ಇವೆ. ಒಟ್ಟು 27 ಹುದ್ದೆಗಳಲ್ಲಿ 20 ಹುದ್ದೆಗಳು ಖಾಲಿ ಇವೆ.

Advertisement

ಉತ್ತಮ ಸೇವೆ
ಪ್ರಸ್ತುತ ವರ್ಷ ಭತ್ತದ ಬೇಸಾಯ ಮಾಡುವವರು ಹೆಚ್ಚಾಗಿದ್ದು, ಹಡಿಲು ಗದ್ದೆಗಳಲ್ಲಿ ಬೇಸಾಯದ ಆಸಕ್ತಿ ತೋರುತ್ತಿದ್ದಾರೆ. ಸುಳ್ಯ ಸಹಾಯಕ ಕೃಷಿ ನಿರ್ದೇಶಕರ ಚಾರ್ಜ್‌ ಕೂಡ ತನಗೆ ಇದೆ. ಇರುವ ಹುದ್ದೆಗಳಲ್ಲಿ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಂಡು ರೈತರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ.
– ನಂದನ್‌ ಶೆಣೈ , ಪ್ರಭಾರ ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next