Advertisement

ಬರಿದಾದ ಪಾಪನಾಶಿನಿ ಒಡಲು

11:02 AM May 27, 2019 | Team Udayavani |

ಹೊನ್ನಾವರ: ಈ ವರ್ಷವೂ ಮೇ ತಿಂಗಳಲ್ಲಿ ಕುಮಟಾ, ಹೊನ್ನಾವರ ನೀರಿಗೆ ಪರದಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯತ ಪೂರೈಸುವ ನೀರನ್ನು ಅವಲಂಬಿಸಿರುವ ಉಭಯ ನಗರಗಳ 50 ಸಾವಿರ ಜನ ಎರಡು ದಿನಕ್ಕೊಮ್ಮೆ ನೀರು ಪಡೆಯಲು ತೊಡಗಿ ತಿಂಗಳಾಯಿತು. ಇದರಲ್ಲಿ ನಗರಸಭೆ, ಪಟ್ಟಣ ಪಂಚಾಯತಗಳ ತಪ್ಪೇನಿಲ್ಲ. ಪರವಾನಗಿ ಇಲ್ಲದೆ ಅಘನಾಶಿನಿಗೆ ಕೂರಿಸಿದ ಪಂಪ್‌ಸೆಟ್‌ಗಳು ಮೂರು, ನಾಲ್ಕು ಕಿಮೀ ದೂರ ಹಗಲು, ರಾತ್ರಿ ನೀರು ಒಯ್ಯುವ ಕಾರಣ ಈ ಕೃತ್ರಿಮ ಬರಗಾಲ ಸೃಷ್ಟಿಯಾಗಿದೆ.

Advertisement

ಕಳೆದ ವರ್ಷದಂತೆ ನೀರಿನ ಬರ ಹೆಚ್ಚಾದ ಕಾರಣ ಜಿಲ್ಲಾಧಿಕಾರಿಗಳು ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವಂತೆ ಆದೇಶಿಸಿದ ಕಾರಣ ಕೆಲವು ಪಂಪ್‌ಸೆಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಮೊದಲು 24 ತಾಸು ಪಂಪ್‌ಸೆಟ್‌ಗಳು ನೀರೆತ್ತುತ್ತಿದ್ದವು. ಈಗ ಮೂರು ತಾಸು ಮಾತ್ರ 3ಫೇಸ್‌ ಕರೆಂಟ್ ಒದಗಿಸುವ ಕಾರಣ ನೀರಿನ ಯದ್ವಾತದ್ವಾ ಬಳಕೆ ನಿಂತಿದೆ. ಹೊಳೆಯ ನೀರು ಸಾರ್ವಜನಿಕರ ಸೊತ್ತು. ಪಂಪ್‌ಸೆಟ್ ಬಳಸಿ ನೀರೆತ್ತುವಾಗ ಸರ್ಕಾರದ ಪರವಾನಗಿ ಬೇಕು. ಇದು ಗೊತ್ತಿದ್ದು ಯಾವುದೋ ಸರ್ವೇ ನಂಬರ್‌ ತೋರಿಸಿ ಹೊಳೆಯ ಬದಿಗೆ ಪಂಪ್‌ಸೆಟ್ ಕೂರಿಸಿ ನೀರು ಒಯ್ಯುವುದರಿಂದ ಬರಗಾಲ ಬಂದಿದೆ. ಹಳ್ಳಿಯಲ್ಲಿ ರಾತ್ರಿ ಪಂಪ್‌ಸೆಟ್ ಚಾಲು ಮಾಡಿ ಬೆಳಗ್ಗೆ ಹೋಗಿ ಬಂದು ಮಾಡುವವರಿದ್ದಾರೆ. ಹೆಸ್ಕಾಂನವರು ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಹೊಳೆಬದಿಗೆ ಕಂಬ ನಿಲ್ಲಿಸಿದವರಿಗೂ 3ಫೇಸ್‌ ಕೊಟ್ಟಿದ್ದಾರೆ.

ಅತಿಕ್ರಮಣ ಭೂಮಿಯವರಿಗೆ ಹೊಳೆಯ ನೀರು ಪಡೆಯಲು ಅವಕಾಶ ನೀಡಬಾರದು. ಕಂದಾಯ ಭೂಮಿಯವರಿಗೆ ಕ್ಷೇತ್ರದ ಆಧಾರದ ಮೇಲೆ ಎಷ್ಟು ಅಶ್ವಶಕ್ತಿ ಪಂಪ್‌ ಬಳಸಬೇಕು, ಎಷ್ಟು ಅವಧಿ ನೀರೆತ್ತಬಹುದು ಎಂಬುದನ್ನು ನಿರ್ಧರಿಸಿ ಪರವಾನಗಿ ಕೊಡಬೇಕು. ಬೇಕಾಬಿಟ್ಟಿ ನೀರನ್ನು ಬಳಸುವುದರಿಂದ ನ್ಯಾಯವಾಗಿ ಅಗತ್ಯವಿದ್ದವರಿಗೆ ನೀರು ಸಿಗುವುದಿಲ್ಲ. ಗೇರುಸೊಪ್ಪಾದಿಂದ 10 ಗ್ರಾಮ ಸಹಿತ ಹೊನ್ನಾವರಕ್ಕೆ ನೀರು ಹರಿಸುವ ಯೋಜನೆ ಕಾರ್ಯರೂಪಕ್ಕೆ ಬರಲು 10ವರ್ಷ ಬೇಕು. ಕುಮಟಾಕ್ಕೆ ಶಾಶ್ವತವಾಗಿ ಅಘನಾಶಿನಿಯ ನೀರು ಪೂರೈಕೆಯಾಗಬೇಕು. ಆದ್ದರಿಂದ ಕುಮಟಾ, ಹೊನ್ನಾವರಕ್ಕೆ ನೀರು ಪೂರೈಕೆಯಾಗಲು ದೀವಳ್ಳಿಯಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಆಗಬೇಕಾಗಿದೆ. ಅಲ್ಲದೆ ಡ್ಯಾಂನ ಮೇಲ್ಗಡೆ 5ಕಿಮೀ ಅನಧಿಕೃತ ಪಂಪ್‌ಸೆಟ್‌ಗಳನ್ನು ನಿಷೇಧಿಸಬೇಕು, ಅಧಿಧಿಕೃತವಾದವುಗಳನ್ನು ನಿಯಂತ್ರಿಸಬೇಕು. ಈ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳದಿದ್ದರೆ ಅವಳಿ ನಗರಗಳು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.

•ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next