ಚಿಂಚೋಳಿ: ತಾಲೂಕಿನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಕೇಂದ್ರ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಹ-ಶಿಕ್ಷಕರ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪಾಲಕರು-ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 273 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಸರ್ಕಾರದ ಆದೇಶದಂತೆ ಒಟ್ಟು 1302 ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಆದರೆ ವರ್ಗಾವಣೆಯಾಗಿರುವ ಶಿಕ್ಷಕ ಸ್ಥಾನಗಳು ಭರ್ತಿಯಾಗದೇ ಇರುವುದರಿಂದ ಒಟ್ಟು 812 ಹುದ್ದೆಗಳು ಖಾಲಿಯಾಗಿವೆ.
ತಾಲೂಕಿನಲ್ಲಿ 32 ಸರ್ಕಾರಿ ಪ್ರೌಢ ಶಾಲೆಗಳಿವೆ. ಇದರಲ್ಲಿ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ ಮತ್ತು ಕ್ರಾಫ್ಟ್ ಶಿಕ್ಷಕರ ಹುದ್ದೆ ಸೇರಿ ಒಟ್ಟು 289 ಹುದ್ದೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ. ಸದ್ಯ ಪ್ರೌಢ ಶಾಲೆಗಳಲ್ಲಿ ಒಟ್ಟು 45 ಹುದ್ದೆಗಳು ಖಾಲಿಯಿವೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ತಾಲೂಕಿನಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಅನುದಾನ, ಅನುದಾನ ರಹಿತ ಶಾಲೆಗಳಲ್ಲಿ ಒಟ್ಟು 41ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗಡಿಪ್ರದೇಶದ ಕುಂಚಾವರಂ, ಶಾದೀಪುರ ಹಾಗೂ ಐನಾಪುರ, ದೇಗಲಮಡಿ,ನಾಗಾಇದಲಾಯಿ, ಐನೋಳಿ, ಚಿಂಚೋಳಿ, ಚಂದಾಪುರ, ಕೋಡ್ಲಿ, ಸುಲೇಪೇಟ, ಗಡಿಕೇಶ್ವಾರ, ರಾಯಕೋಡ, ರುಮ್ಮನಗೂಡ, ಚಂದನಕೇರಾ, ಚೇಂಗಟಾ, ಭುಯ್ನಾರ(ಕೆ), ಕನಕಪುರ, ಹಸರಗುಂಡಗಿ, ಸಾಲೇಬೀರನಳ್ಳಿ, ರುದನೂರ ಪ್ರೌಢ ಶಾಲೆಗಳಲ್ಲಿ ಸಹ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಕೆಲವು ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಕಡಿಮೆಯಾಗಿದೆ.
ಮಧ್ಯಾಹ್ನ ಬಿಸಿಯೂಟ, ತತ್ತಿ, ಬಾಳೆಹಣ್ಣು, ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ ಇನ್ನಿತರ ಸವಲತ್ತುಗಳನ್ನು ಸರ್ಕಾರ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಆದರೆ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎಂದು ಪ್ರಜ್ಞಾವಂತರು, ವಿದ್ಯಾರ್ಥಿಗಳ ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
ಚಿಂಚೋಳಿ ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
-ರಾಚಪ್ಪ ಭದ್ರಶೆಟ್ಟಿ, ಬಿಇಒ ಶಾಮರಾವ ಚಿಂಚೋಳಿ