Advertisement

ಕಬ್ಬು ಕಟಾವಿಗೆ ಕೂಲಿಯಾಳು ಕೊರತೆ

01:34 PM Dec 31, 2019 | Suhan S |

ಚಿಕ್ಕೋಡಿ: ನೆರೆಯಲ್ಲಿ ನೊಂದು ಬೆಂದ ರೈತರಿಗೆ ಈಗ ಮತ್ತೂಂದು ಸಂಕಷ್ಟ ಬಂದೋದಗಿದೆ. ಮಾರುದ್ದ ಬೆಳೆದು ನಿಂತಿದ್ದ ಕಬ್ಬು ಈಗ ಕಟಾವಿಗೆ ಬಂದಿದೆ. ಆದರೆ ಕಬ್ಬು ಕಟಾವಿಗೆ ಕೂಲಿಯಾಳುಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಿ ಕಳಿಸಲು ರೈತರು ಪರದಾಡುತ್ತಿದ್ದಾರೆ.

Advertisement

ಪ್ರಸಕ್ತ ಕಬ್ಬು ಕಟಾವು ಹಂಗಾಮು ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಸಹ ಶೇ ಅರ್ಧಕ್ಕಿಂತ ಹೆಚ್ಚಿನ ಕಬ್ಬು ಜಮೀನುಗಳಲ್ಲಿ ಮಾರುದ್ದ ಬೆಳೆದು ನಿಂತಿದೆ. ಪ್ರತಿ ವರ್ಷ ನೆರೆಯ ಮಹಾರಾಷ್ಟ್ರದಿಂದ ಸಾಕಷ್ಟು ಕಬ್ಬು ಕಟಾವು ಮಾಡುವ ಕೂಲಿಯಾಳುಗಳು ರಾಜ್ಯಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ಸಮರ್ಪಕ ಕೂಲಿಯಾಳುಗಳು ಬರದೇ ಇರುವ ಕಾರಣದಿಂದ ರೈತರ ಜಮೀನುಗಳಲ್ಲಿ ಕಬ್ಬು ಗರಿ ಹಿರಿದು ಜಮೀನುಗಳಲ್ಲಿಯೇ ಬೆಳೆದು ನಿಂತುಕೊಂಡಿದೆ.

ಕಬ್ಬು ಸಾಗಾಟಕ್ಕೆ ಪರದಾಟ: ರಾಜ್ಯದ ಗಡಿ ಭಾಗದ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಭಾಗದಲ್ಲಿ 13 ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷದಲ್ಲಿ ಕಾರ್ಯಾರಂಭ ಮಾಡಿವೆ.  ಅತಿಯಾದ ಮಳೆ ಮತ್ತು ನೆರೆಯಲ್ಲಿ ಮುಳುಗಡೆಗೊಂಡ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಬರುವುದಿಲ್ಲ ಎಂಬ ಕಾರಣವೊಡ್ಡಿ ಸಕ್ಕರೆ ಕಾರ್ಖಾನೆಗಳು ನಿರೀಕ್ಷೆ ಮಾಡಿದಷ್ಟು ಕಬ್ಬು ಕಟಾವು ಮಾಡುವ ಕೂಲಿಯಾಳುಗಳನ್ನು ಕರೆದು ತಂದಿಲ್ಲ, ಹೀಗಾಗಿ ಕಾರ್ಖಾನೆಗೆ ಕಬ್ಬು ಕಳಿಸಲು ರೈತರು ಪರದಾಡುತ್ತಿದ್ದಾರೆ.

ಬರ-ನೆರೆಯಿಂದ ನಲುಗಿದ ರೈತ: ಕಳೆದ ಆಗಷ್ಟ ತಿಂಗಳಲ್ಲಿ ಕೃಷ್ಣಾ ಮತ್ತು ಉಪನದಿಗಳಿಂದ ಉಂಟಾದ ಭೀಕರ ಮಹಾಪೂರದಿಂದ ರಾಜ್ಯದ ಗಡಿ ಜಿಲ್ಲೆಯ ರೈತರು ನಲುಗಿ ಹೋಗಿದ್ದರು. ಬರದಿಂದ ಕಂಗೆಟ್ಟಿದ್ದ ರೈತರಿಗೆ ಮಳೆ ವರದಾಣವಾಗಿದೆಂದು ರೈತರು ಸಂತೋಷ ಪಡುವ ಹೊತ್ತಿನಲ್ಲಿ ಅತಿಯಾದ ಮಳೆಯಿಂದ ನೆರೆ ಉಂಟಾಗಿ ಸಾಕಷ್ಟು ಹಾನಿ ಮಾಡಿ ಹೋಗಿತ್ತು. ಇದರಿಂದ ಬರ-ನೆರೆಯಿಂದ ಸಂಕಷ್ಟದಲ್ಲಿರುವ ರೈತನಿಗೆ ಈಗ ಕಬ್ಬು ಕಾರ್ಖಾನೆಗೆ ಹೋಗದೇ ಇರುವುದು ದೊಡ್ಡ ಸಂಕಷ್ಟ ತಂದೊಡ್ಡಿದೆ.

ಇಳುವರಿ ಹೆಚ್ಚಿರುವ ಕಬ್ಬಿಗೆ ಮೊದಲ ಆದ್ಯತೆ: ರಾಜ್ಯದ ಗಡಿ ಭಾಗದ ಚಿಕ್ಕೋಡಿ ಭಾಗದಲ್ಲಿ 13 ಸಕ್ಕರೆ ಕಾರ್ಖಾನೆಗಳು ಮತ್ತು ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಇಳುವರಿ ಹೆಚ್ಚಿರುವ ಕಬ್ಬಿಗೆ ಮೊದಲ ಆದ್ಯತೆ ನೀಡುತ್ತಿವೆ. ಹೀಗಾಗಿ ನೆರೆಯಲ್ಲಿ ಮುಳುಗಿರುವ ಕಬ್ಬು ಕಟಾವಾಗದೇ ಹಾಗೇ ರೈತರ ಜಮೀನುಗಳಲ್ಲಿ ನಿಂತುಕೊಂಡಿದೆ. ಕಬ್ಬು ಕಟಾವು ಮಾಡಬೇಕೆಂದು ರೈತರು ಕಾರ್ಖಾನೆಗಳ ಅ ಧಿಕಾರಗಳಿಗೆ ದುಂಬಾಲು ಬಿದ್ದರೂ ಸಹ ಪ್ರಯೋಜನವಾಗುತ್ತಿಲ್ಲ, ಯಾಕೆಂದರೇ ಕಬ್ಬು ಕಟಾವು ಮಾಡುವ ಗ್ಯಾಂಗ್‌ ಕೊರತೆಯಿಂದ ಸಮಸ್ಯೆ ಉದ್ಬವಿಸಿದೆ.

Advertisement

ವ್ಯಾಪ್ತಿ ವಿಸ್ತರಿಸಿಕೊಂಡ ಸಕ್ಕರೆ ಕಾರ್ಖಾನೆಗಳು: ಪ್ರತಿ ವರ್ಷ ಆಯಾ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡಿಕೊಂಡು ಕಾರ್ಖಾನೆಗೆ ಸರಬರಾಜು ಮಾಡಲು ಅಂದಾಜು 40 ಕಿ.ಮೀ ವ್ಯಾಪ್ತಿ ನಿಗದಿ ಮಾಡಿದ್ದವು. ಆದರೆ ಈ ವರ್ಷ ನೆರೆಯಿಂದ ಕಬ್ಬು ಹಾನಿಯಾಗಿದೆ ಎಂಬುದನ್ನು ಅರಿತಕೊಂಡ ಕಾರ್ಖಾನೆಗಳು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು 60-70 ಕಿ.ಮೀ ದೂರದವರಿಗೆ ಹೆಚ್ಚು ಇಳುವರಿ ಬರುವ ಕಬ್ಬು ತೆಗೆದುಕೊಂಡು ಬರುತ್ತಿದ್ದಾರೆ.

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next