ಸೇಡಂ: ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ರೈತರು ಮುಂಗಾರು ಬಿತ್ತನೆಗೆ ತಯಾರಿ ನಡೆಸಿದ್ದು, ಯಾವುದೇ ಕಾರಣಕ್ಕೂ ಬಿತ್ತನೆ ಬೀಜ, ರಸಗೊಬ್ಬರದ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಾ| ಸಿದ್ರಾಮಪ್ಪ ಧಂಗಾಪುರ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳು, ಅಧಿಕಾರಿಗಳೊಂದಿಗೆ ಮುಂಗಾರು ಹಂಗಾಮಿನ ಸಾಮಾನ್ಯ ಸಭೆ ನಡೆಸಿ ಮಾತನಾಡಿದ ಅವರು, ಕೆಲವೆಡೆ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿವೆ. ಇದರ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಅಂತಹದ್ದೇನಾದರೂ ಕಂಡು ಬಂದಲ್ಲಿ ವ್ಯಾಪಾರಿಗಳ ಪರವಾನಗಿ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಮುಂಗಾರು ಹಂಗಾಮಿನಲ್ಲಿ ರೈತರಿಗಾಗಿಯೇ ವಿಶೇಷ ಕಾರ್ಯಾಗಾರ ಏರ್ಪಡಿಸಿ, ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ತಿಳಿಹೇಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಕೃಷಿಕ ಸಮಾಜದ ಉಪಾಧ್ಯಕ್ಷರ ಅವಿರೋಧ ಆಯ್ಕೆ
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷರನ್ನಾಗಿ ರಾಮಯ್ಯ ಪೂಜಾರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ತಾಲೂಕಿನ ರೈತರಿಗೆ ಡಿಸಿಸಿ ಬ್ಯಾಂಕ್ ಮೂಲಕ ಹೆಚ್ಚಿನ ಸಾಲದ ಸೌಲಭ್ಯ ಒದಗಿಸಿದ ಕ್ಷೇತ್ರದ ಶಾಸಕರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಅವರನ್ನು ಅಭಿನಂದಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಎ.ವೈ.ಹಂಪಣ್ಣ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಡಾ| ನಾಗರೆಡ್ಡಿ ಪಾಟೀಲ, ಉಪಾಧ್ಯಕ್ಷ ರಾಮಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಣಪತರಾವ್ ಚಿಮ್ಮನಚೋಡಕರ್, ಸದಸ್ಯರಾದ ಶಂಭುರೆಡ್ಡಿ ನರಸಗೋಳ, ಸಿದ್ಧು ಕೋದಂಪುರ, ಬಸವರಾಜ ಮಾಲಿಪಾಟೀಲ, ತಮ್ಮಾರೆಡ್ಡಿ ಪಾಟೀಲ, ಬಸರೆಡ್ಡಿ, ಮಲ್ಲಿಕಾರ್ಜುನ ಸಾತನೂರ, ಕೃಷಿ ಅಧಿಕಾರಿಗಳಾದ ಅನಂತರೆಡ್ಡಿ, ಪ್ರಕಾಶ ರಾಠೊಡ, ಬಸವರಾಜ ಕೊಡಸಾ ಮತ್ತಿತರರು ಇದ್ದರು.