Advertisement

ಸಿಬಂದಿ ಕೊರತೆ, ಸಾಕಷ್ಟು ವಾಹನಗಳಿಲ್ಲದೆ ಅಗ್ನಿಶಾಮಕ ದಳ ಪೇಚಾಟ

03:18 PM Feb 21, 2017 | Harsha Rao |

ಕಾಸರಗೋಡು: ವಾಹನ ಅಪಘಾತ, ಬೆಂಕಿ ಪ್ರಕರಣ ಮೊದಲಾದ ದುರಂತ ಸಂಭವಿಸಿದಾಗ ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಿಸುವ ಅಗ್ನಿಶಾಮಕ ದಳದಲ್ಲಿ ಸಾಕಷ್ಟು ಸಿಬಂದಿಗಳು, ವಾಹನಗಳಿಲ್ಲದೆ ಪೇಚಾಟಕ್ಕೆ ಸಿಲುಕಿದೆ. ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿರುವಂತೆ ಅಲ್ಲಲ್ಲಿ ಗುಡ್ಡೆಗಳಿಗೆ, ತೋಟಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದು, ಬೆಂಕಿಯನ್ನು ಆರಿಸಲು ಸ್ಥಳಕ್ಕೆ ಧಾವಿಸಲು ಅಗತ್ಯದ ವಾಹನಗಳಿಲ್ಲದೆ ಹಾಗು ಸಿಬಂದಿಗಳಿಲ್ಲದೆ ಇದ್ದ ಸಿಬಂದಿಗಳಿಗೆ ಹೆಚ್ಚಿನ ಒತ್ತಡ ಬೀರುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ಬೇಸಿಗೆಯಲ್ಲಿ ಅಲ್ಲಲ್ಲಿ ನಿರಂತರ ಬೆಂಕಿ ಪ್ರಕರಣಗಳು ನಡೆಯುತ್ತಿದ್ದು, ಅಗ್ನಿ ಶಾಮಕ ದಳದ ಸಿಬಂದಿಗಳ ಕೊರತೆಯಿಂದಾಗಿ ಬೆಂಕಿಯನ್ನು ಆರಿಸಲು ಹರಸಾಹಸ ಪಡಬೇಕಾದ ದುಃಸ್ಥಿತಿ ಎದುರಾಗಿದೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಐದು ಅಗ್ನಿಶಾಮಕ ದಳವಿದೆ. ಕಾಸರಗೋಡು, ಉಪ್ಪಳ, ತೃಕ್ಕರಿಪುರ, ಕಾಂಞಂಗಾಡ್‌, ಕುಟ್ಟಿಕ್ಕೋಲ್‌ನಲ್ಲಿ ಅಗ್ನಿಶಾಮಕ ದಳವಿದೆ. ಕಾಸರಗೋಡು ಜಿಲ್ಲೆಯ ಪ್ರಮುಖ ಅಗ್ನಿಶಾಮಕ ದಳವಾಗಿರುವ ಕಾಸರಗೋಡು ನಗರದಲ್ಲಿರುವ ಅಗ್ನಿಶಾಮಕ ದಳದಲ್ಲಿ 58 ಮಂದಿ ಸಿಬಂದಿಗಳ ಅಗತ್ಯವಿದ್ದರೂ, ಇಲ್ಲಿ ಕೇವಲ 42 ಮಂದಿ ಸಿಬಂದಿಗಳಿದ್ದಾರೆ. 15 ಹುದ್ದೆಗಳು ಖಾಲಿ ಬಿದ್ದಿವೆ. ಅಗತ್ಯಕ್ಕೆ ತಕ್ಕಷ್ಟು ವಾಹನಗಳೂ ಇಲ್ಲ. 
ವಾಹನಗಳ ದುರಸ್ತಿಗೊಳಿಸಬೇಕಾಗಿದ್ದಲ್ಲಿ ಅಂಗೀಕೃತ ವರ್ಕಶಾಪ್‌ಗ್ಳಿಂದ ಅಧಿಕೃತ ಲೀಟರ್‌ ಪಡೆದು ಇದಕ್ಕೆ ವೆಚ್ಚವಾಗುವ ಮೊತ್ತವನ್ನು ಮುಂಗಡವಾಗಿ ಮಾಹಿತಿ ನೀಡಬೇಕು. ಈ ಪ್ರಕ್ರಿಯೆಗೆ ಅನುಮತಿ ಲಭಿಸಿ ಬರುವ ಸಂದರ್ಭದಲ್ಲಿ ಕೆಲವು ದಿನಗಳೇ ಕಳೆದು ಹೋಗಿರುತ್ತವೆ.

ದಿನಾ ಸುಮಾರು 20ಕ್ಕೂ ಅಧಿಕ ದೂರವಾಣಿ ಕರೆಗಳು ಅಗ್ನಿಶಾಮಕ ದಳಕ್ಕೆ ಬರುತ್ತಿವೆ. ಅದರಲ್ಲಿ ಬಹುಪಾಲು ಬೆಂಕಿ ಅನಾಹುತಕ್ಕೆ ಸಂಬಂಧಪಟ್ಟದ್ದು ಆಗಿರುತ್ತದೆ. ದೊಡ್ಡ ದುರಂತ ನಡೆದರೆ ತತ್‌ಕ್ಷಣ ಕಾರ್ಯಾಚರಿಸಬೇಕಾಗಿದ್ದರೂ ಅಂತಹ ಸೌಕರ್ಯ ಇಲ್ಲಿ ಇಲ್ಲ. ಹಲವು ಅಂತಸ್ತಿನ ಕಟ್ಟಡಗಳಲ್ಲಿ ದುರಂತ ಸಂಭವಿಸಿದ್ದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಗೆ ಸೂಕ್ತ ಸೌಲಭ್ಯಗಳಿಲ್ಲ. ಸಿಬಂದಿಗಳಿಗೆ ವಾಸ್ತವ್ಯ ಹೂಡಲು ಇಲ್ಲಿ ಸಾಕಷ್ಟು ಸೌಕರ್ಯಗಳೂ ಇಲ್ಲ. ಪದೇ ಪದೇ ಇದ್ದ ವಾಹನ ಕೆಟ್ಟು ಹೋಗಿ ದುರಸ್ತಿಯಾಗಿ ಬರಬೇಕಾದರೆ ತಿಂಗಳುಗಳೇ ಬೇಕಾಗುತ್ತವೆ. ಕೆಲವೊಮ್ಮೆ ದುರಸ್ತಿಯಾಗದೆ ಮೂಲೆಗುಂಪಾಗುವ ಪ್ರಸಂಗಳೂ ಇವೆ ಎನ್ನುತ್ತಾರೆ ಇಲ್ಲಿನ ಸಿಬಂದಿಗಳು. ತೃಕ್ಕರಿಪುರದ ಅಗ್ನಿಶಾಮಕ ದಳದಲ್ಲಿ 24 ಮಂದಿ ಸಿಬಂದಿಗಳ ಅಗತ್ಯವಿದೆ. ಆದರೆ ಇಲ್ಲಿ ಕೇವಲ 18 ಮಂದಿ ಸಿಬಂದಿಗಳಿದ್ದಾರೆ. ಮೂರು ವಾಹನಗಳಿದ್ದರೂ ಒಂದು ವಾಹನವನ್ನು ವರ್ಕಿಂಗ್‌ ಅರೆಂಜ್‌ಮೆಂಟ್‌ ಅಂಗವಾಗಿ ಕಾಂಞಂಗಾಡ್‌ಗೆ ಕೊಂಡೊಯ್ಯಲಾಗಿದೆ. ವಾಹನಗಳ ಬಿಡಿಭಾಗಗಳು ಲಭಿಸದೆ ಕೆಟ್ಟು ಹೋದ ವಾಹನಗಳ ದುರಿಸ್ತಿ ಸಾಧ್ಯವಾಗದೆ ಮೂಲೆಗುಂಪಾಗುವುದೂ ಇದೆ. ಈ ಅಗ್ನಿಶಾಮಕ ದಳಕ್ಕೆ ದಿನಾ ಹತ್ತರಷ್ಟು ದೂರವಾಣಿ ಕರೆಗಳು ಬರುತ್ತವೆ. ಕ್ವಾರ್ಟರ್ಸ್‌ ಸೌಕರ್ಯಗಳಿಲ್ಲದಿರುವುದರಿಂದ ಸಿಬಂದಿಗಳಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಬಾವಿಯಿಂದ ನೀರನ್ನು ಎತ್ತಬೇಕಾಗುತ್ತದೆ.

ಕುಟ್ಟಿಕ್ಕೋಲ್‌ ಅಗ್ನಿಶಾಮಕ ದಳದಲ್ಲಿ 20 ಮಂದಿ ಸಿಂಬದಿಗಳ ಅಗತ್ಯವಿದೆ. ಆದರೆ ಇಲ್ಲಿ ಕೇವಲ 14 ಮಂದಿ ಸಿಬಂದಿಗಳಿದ್ದಾರೆ. ಈ ಅಗ್ನಿಶಾಮಕ ದಳ ಮಲೆನಾಡಿನಲ್ಲಿರುವ ಹಿನ್ನೆಲೆಯಲ್ಲಿ ಬೊಲೆರೋ ಜೀಪು ಮಂಜೂರು ಮಾಡಲಾಗಿತ್ತು. ಆದರೆ ಇದನ್ನು ಆ ಬಳಿಕ ಕಲ್ಲಿಕೋಟೆ ಬೀಚ್‌ ಸ್ಟೇಶನ್‌ಗೆ ಕೊಂಡೊಯ್ಯಲು ಯತ್ನ ನಡೆದಿತ್ತು. ನೀಳ ಕಡಿಮೆ ಇರುವ ವಾಹನಗಳು ಈ ಪ್ರದೇಶದಲ್ಲಿ ಅಗತ್ಯವಾಗಿದೆ. ಇಲ್ಲಿ  ಕ್ವಾರ್ಟರ್ಸ್‌ ಸೌಕರ್ಯವೂ ಇಲ್ಲ. ಏಳು ವರ್ಷಗಳ ಹಿಂದೆ ಮಂಜೂರು ಮಾಡಿದ ಉಪ್ಪಳ ಅಗ್ನಿಶಾಮಕ ದಳ ಘಟಕದಲ್ಲಿ 21 ಮಂದಿ ಸಿಬಂದಿಗಳಿದ್ದಾರೆ. ಆದರೆ ಈ ಅಗ್ನಿಶಾಮಕದಳ  ಇತರ ಅಗ್ನಿಶಾಮಕ ದಳದ ಅರ್ಧದಷ್ಟು ಸಾಮರ್ಥ್ಯ ಮಾತ್ರವೇ ಇದೆ. ಮಂಗಲ್ಪಾಡಿ ಪಂಚಾಯತ್‌ ಮಂಜೂರು ಮಾಡಿದ ತಾತ್ಕಾಲಿಕ ಕಟ್ಟಡದಲ್ಲಿ ಅಗ್ನಿ ಶಾಮಕ ದಳ ಕಚೇರಿ ಕಾರ್ಯಾಚರಿಸುತ್ತಿದೆ. ದಿನ ನಿತ್ಯ 22 ರಷ್ಟು ದೂರವಾಣಿ ಕರೆಗಳು ಬರುತ್ತವೆ.

ಆದರೆ ಹಲವು ಸ್ಥಳಗಳಿಗೆ ತಲುಪಲು  ವಾಹನ ಸೌಕರ್ಯವೂ, ಸಿಬಂದಿಗಳು ಸಾಕಷ್ಟು ಇಲ್ಲದಿರುವುದರಿಂದ ಸಾಧ್ಯವಾಗುವುದಿಲ್ಲ ಎಂದು ಸಿಬಂದಿಗಳು ಹೇಳುತ್ತಾರೆ. ಸಿಬಂದಿಗಳು ವಿಶ್ರಾಂತಿ ಪಡೆಯಲೂ ಯಾವುದೇ ಸೌಕರ್ಯಗಳಿಲ್ಲ. ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿರುವುದರಿಂದ ನಿತ್ಯ ಜಾಗೃತೆ ಪಾಲಿಸಬೇಕಾದದ್ದು ಅಗ್ನಿಶಾಮಕ ದಳವಾಗಿದೆ. ಉಪ್ಪಳ ಅಗ್ನಿಶಾಮಕ ದಳದ ಸಾಮರ್ಥ್ಯವನ್ನು ಹೆಚ್ಚಿಸಬೇಕೆಂದು ನಿರಂತರ ಒತ್ತಡವಿದ್ದರೂ ಈ ವರೆಗೂ ಬೇಡಿಕೆ ಈಡೇರಿಲ್ಲ.

Advertisement

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next