Advertisement

ದಾನಿಗಳ ಕೊರತೆ, ನಿರಂತರ ಅಪಪ್ರಚಾರ: ಜಾನುವಾರುಗಳ ಆಶ್ರಯ ತಾಣ ಮುಚ್ಚುವ ಭೀತಿ

12:08 AM Aug 28, 2022 | Team Udayavani |

ಮಡಿಕೇರಿ: ಕೊಡಗಿನಲ್ಲಿ 2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಬೀದಿಪಾಲಾದ ಜಾನುವಾರುಗಳಿಗೆ ಆಶ್ರಯ ಕಲ್ಪಿಸುವುದಕ್ಕಾಗಿ ಸ್ಥಾಪನೆಯಾದ ಶ್ರೀಕೃಷ್ಣ ಗೋಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ದಾನಿಗಳ ಕೊರತೆ ಮತ್ತು ನಿರಂತರ ಅಪಪ್ರಚಾರದಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ವಿಶ್ವಕರ್ಮ ಸಮುದಾಯ ಜಾಗೃತ ಸೇವಾ ಟ್ರಸ್ಟ್‌ ಹಾಗೂ ಗೋಶಾಲೆಯ ಸ್ಥಾಪಕಾಧ್ಯಕ್ಷ ಹರೀಶ್‌ ಜಿ. ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಅನಾಥ ಗೋವುಗಳ ಮೇಲೆ ಯಾರೂ ಕರುಣೆ ತೋರುತ್ತಿಲ್ಲ, ಹಸುಗಳ ಆಹಾರಕ್ಕಾಗಿ ದೇಣಿಗೆ ನೀಡುತ್ತಿಲ್ಲ. ಸಂಕಷ್ಟದ ನಡುವೆ ಮೂಕ ಪ್ರಾಣಿಗಳಿಗೆ ಆಹಾರವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ಇದರ ನಡುವೆ ಮಾಂಸಕ್ಕಾಗಿ ಗೋವುಗಳ ಸಾಗಾಟವಾಗುತ್ತಿದೆ ಮತ್ತು ದಾನಿಗಳಿಂದ ಲಕ್ಷಾಂತರ ರೂ. ಹಣ ಬರುತ್ತಿದೆ ಎನ್ನುವ ಅಪಪ್ರಚಾರದಲ್ಲಿ ಕೆಲವರು ತೊಡಗಿದ್ದಾರೆ. ಇದರಿಂದ ಗೋಶಾಲೆಯ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಯಂ ಪ್ರೇರಣೆಯಿಂದ ದಾನಿಗಳು ಮುಂದೆ ಬಂದರೆ ಅಥವಾ ಸರಕಾರ ನೆರವು ನೀಡಿದರೆ ಗೋಶಾಲೆಯನ್ನು ಮುನ್ನಡೆಸುತ್ತೇವೆ, ಇಲ್ಲದಿದ್ದರೆ ಮುಚ್ಚುತೇವೆ ಎಂದರು.

ಪ್ರಾಕೃತಿಕ ವಿಕೋಪದಲ್ಲಿ ನೆಲೆ ಕಳೆದುಕೊಂಡ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾಗಮಂಡಲದ ಚೆಟ್ಟಿಮಾನಿಯಲ್ಲಿ ಶ್ರೀಕೃಷ್ಣ ಗೋಶಾಲೆಯನ್ನು ಸ್ಥಾಪಿಸಲಾಗಿತ್ತು. ಅತಿ ಮಳೆ ಮತ್ತು ಚಳಿಯ ವಾತಾವರಣದ ಹಿನ್ನೆಲೆಯಲ್ಲಿ ಬಳಿಕ ಕುಶಾಲನಗರದ ಚಿಕ್ಕತ್ತೂರು ಗ್ರಾಮಕ್ಕೆ ಗೋಶಾಲೆಯನ್ನು ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ.

ಅಪಪ್ರಚಾರ ಮಾಡದಿರಿ
ಗೋಶಾಲೆಯ ಟ್ರಸ್ಟಿ ಸುಮಾ ಗೋವಿಂದ ಮಾತನಾಡಿ, ನಮ್ಮ ಶಕ್ತಿ ಮೀರಿ ಗೋವುಗಳನ್ನು ನೋಡಿಕೊಳ್ಳುತ್ತಿದ್ದೇವೆ. ಅಪಪ್ರಚಾರದಿಂದಾಗಿ ಮುಗ್ಧ ಗೋವುಗಳು ಬಡವಾಗುತ್ತಿವೆ. ಸಹಾಯ ಮಾಡುವ ಮನೋಭಾವ ಇಲ್ಲದಿದ್ದರು ಪರವಾಗಿಲ್ಲ, ಆದರೆ ಗೋಶಾಲೆಯ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದರು.

Advertisement

ಪೊಲೀಸ್‌ ಇಲಾಖೆ ಹಾಗೂ ಸಂಘ-ಸಂಸ್ಥೆಗಳು ವಶಪಡಿಸಿಕೊಂಡಿರುವ ಗೋವುಗಳನ್ನು ಪೋಷಣೆಗಾಗಿ ಇಲ್ಲಿ ಬಿಟ್ಟಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿ ವ್ಯಾಪ್ತಿಯಿಂದ ಗೋವುಗಳನ್ನು ತಂದು ಬಿಡಲಾಗಿದೆ. ಪ್ರಸ್ತುತ 70 ಗೋವುಗಳಿದ್ದು, ದಾನಿಗಳು ಹಾಗೂ ಗೋವು ಪ್ರೇಮಿಗಳು 9164857163 ಸಂಪರ್ಕಿಸಬಹುದಾಗಿದೆ ಎಂದರು.

ಮಾಸಿಕ 3 ಲ.ರೂ. ಖರ್ಚು
ಗೋವುಗಳ ನಿರ್ವಹಣೆ, ರಕ್ಷಣೆ, ಆಹಾರ, ಔಷಧ ನೀಡಲು ಹಣವಿಲ್ಲದೆ ಪರದಾಡುವಂತಾಗಿದೆ. ತಿಂಗಳಿಗೆ ಆಹಾರ, ಔಷಧ, ಕಾರ್ಮಿಕರ ವೇತನ ಎಲ್ಲವೂ ಸೇರಿ 2.5 ಲಕ್ಷದಿಂದ 3 ಲಕ್ಷ ರೂ. ವರೆಗೆ ಖರ್ಚಾಗುತ್ತಿದೆ. ದಾನಿಗಳ ಸಹಕಾರದಿಂದ‌ ಮಾತ್ರ ಗೋಶಾಲೆ ಮುಂದುವರಿಸಲು ಸಾಧ್ಯ. 2019ರಲ್ಲಿ ಪ್ರಾರಂಭವಾದ ಗೋಶಾಲೆಗೆ 2020ರಲ್ಲಿ ಪಶುಸಂಗೋಪನ ಇಲಾಖೆ‌ 46,000 ರೂ. ಸಹಾಯಧನ ನೀಡಿದ್ದು ಇದು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ಆಹಾರವಾಗಲಿ, ಸಹಾಯವಾಗಲೀ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next