ಬಂಗಾರಪೇಟೆ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಧೀಶ ಎಂ.ಆರ್.ನಾಗರಾಜ್ ರವರು ದಿಢೀರನೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಆಡಳಿತಾಧಿಕಾರಿ ಡಾ.ಪುಣ್ಯಮೂರ್ತಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಭಾರತಿರನ್ನು ತರಾಟೆಗೆ ತೆಗೆದುಕೊಂಡರು.
ದಿಢೀರನೆ ಭೇಟಿಯ ವೇಳೆ ಆಸ್ಪತ್ರೆಯಲ್ಲಿ 10 ಮಂದಿ ವೈದ್ಯರ ಪೈಕಿ ಒಬ್ಬರು ವೈದ್ಯರು ಮಾತ್ರ ಹಾಜರಿದ್ದರು. ಆದರೆ ಹಾಜರಾತಿ ಪುಸ್ತಕದಲ್ಲಿ ಎಲ್ಲರ ಸಹಿಗಳು ಕಂಡು ಬಂದವು 9 ಮಂದಿ ನಾಪತ್ತೆಯಾಗಿ ದ್ದನ್ನು ಕಂಡು ನ್ಯಾಯಾಧೀಶರು ಸಿಡಿಮಿಡಿಗೊಂಡರು. ಮಹಿಳೆಯೊಬ್ಬರು ಒಂದು ದಿನದಿಂದ ಹೊಟ್ಟೆ ನೋವುನಿಂದ ನರಳುತ್ತಿದ್ದು, ವೈದ್ಯರು ಚಿಕಿತ್ಸೆ ನೀಡದೆ ಕಡೆಗಣಿಸಿರುವುದನ್ನು ಕಂಡು ನ್ಯಾಯಧೀಶರು ಆಕ್ರೋಶ ಹೊರಹಾಕಿದರು. ತಕ್ಷಣ ನ್ಯಾಯಧೀಶರು ವೈದ್ಯರನ್ನು ಸಂಪರ್ಕಿಸಿ ಮಹಿಳೆಗೆ ಚಿಕಿತ್ಸೆ ನೀಡುವಂತೆ ತಾಕೀತು ಮಾಡಿದರು.
ಹೆಸರಿಗೆ ನೂರು ಆಸ್ಪತ್ರೆ. ನೆಟ್ಟಗೆ ವೈದ್ಯರೇ ಇರಲ್ಲ, ಚಿಕಿತ್ಸೆಗೆ ಬರುವ ರೋಗಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಹೊರಗಡೆ ಹೋಗಿದ್ದ ಆಡಳಿತಾಧಿಕಾರಿ ಡಾ. ಪುಣ್ಯಮೂರ್ತಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ತರಾಟೆ ತೆಗೆದುಕೊಂಡರು.
ಒಳ ರೋಗಿಗಳಿಗೆ ಊಟದ ವ್ಯವಸ್ಥೆ ಸಹ ಇಲ್ಲದೆ ಇದ್ದನ್ನು ಕಂಡು ತಾವೇ ರೋಗಿಯೊಬ್ಬರಿಗೆ ಊಟದ ವ್ಯವಸ್ಥೆ ಮಾಡಿದರು. ತಾಲೂಕು ಆಸ್ಪತ್ರೆಯೇ ಸೌಲಭ್ಯಗಳಿಲ್ಲದೆ ನರಳುತ್ತಿದ್ದರೆ ಇನ್ನು ಹೋಬಳಿ ಕೇಂದ್ರದಲ್ಲಿರುವ ಪ್ರಾಥಮಿಕ ಕೇಂದ್ರಗಳ ಸ್ಥಿತಿ ಹೇಗಿರಬೇಕೆಂದು ಅಸಮಾಧಾನಗೊಂಡರು. ಇಂತಹ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಪಡುತ್ತಿರುವ ನಿಜವಾದ ಕಷ್ಠಗಳನ್ನು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ವೈದ್ಯರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಕೇಶವಮೂರ್ತಿ, ಅಜಿತ್ ದೇವರಮನೆ, ವಕೀಲರ ಉಪಾಧ್ಯಕ್ಷ ಮನ್ಸೂರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಬೂದಿಕೋಟೆ ಎಂ.ಆನಂದ್, ವಕೀಲ ಮರಗಲ್ ಅಮರೇಶ್ ಮುಂತಾದವರು ಹಾಜರಿದ್ದರು.
ಗೈರಾಗುವ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ
ರಾತ್ರಿಯಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಹಾಜರಾತಿಯಲ್ಲಿ 10 ಜನ ವೈದ್ಯರು ಸಹಿ ಹಾಕಿದ್ದಾರೆ. ಶನಿವಾರ ರಾತ್ರಿ ಆದ ಮೇಲೆ ಯಾರೂ ಬರುವುದಿಲ್ಲ, ಯಾರೂ ಕೇಳುವವರೇ ಇಲ್ಲವಾಗಿದ್ದಾರೆ ಎಂಬ ಬೇಜವಾಬ್ದಾರಿಯಿಂದ ವೈದ್ಯರು ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸಹಿ ಮಾಡಿ ಹೊರಟು ಹೋಗಿದ್ದಾರೆ. ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ವೈದ್ಯರ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.