Advertisement
ಜೂನ್ ತಿಂಗಳಿನ ಬಿಸಿಯೂಟಕ್ಕೆ ಬೇಕಾದ ತೊಗರಿ ಬೇಳೆ ಪೂರೈಕೆಗೆ ಇನ್ನೂ ಟೆಂಡರ್ ಕರೆಯದೆ ಇರುವುದರಿಂದ ರಾಜ್ಯಾದ್ಯಂತ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಬಿಸಿಯೂಟಕ್ಕೆ ಹಿಂದಿನ ದಾಸ್ತಾನು ಬೇಳೆ ಅಂದರೆ, ಬರಗಾಲದಲ್ಲಿ ಪೂರೈಸಿದ ಬೇಳೆಯನ್ನೇ ಸ್ವತ್ಛಗೊಳಿಸಿ ಬಳಸುವುದು ಅನಿವಾರ್ಯವಾಗಿದೆ.
Related Articles
Advertisement
ಯಾವ ಶಾಲೆಯಲ್ಲಿ ಹಿಂದೆ ಪೂರೈಕೆಯಾ ಗಿದ್ದ ತೊಗರಿಬೇಳೆ ಖಾಲಿಯಾಗಿದೆಯೋ ಆ ಶಾಲೆಯವರು ಹತ್ತಿರದ ಬೇಸಗೆ ಮಧ್ಯಾಹ್ನದ ಬಿಸಿಯೂಟ ಕೇಂದ್ರದಿಂದ ತೊಗರಿಬೇಳೆ ದಾಸ್ತಾನು ಇದ್ದರೆ ತರಿಸಿಕೊಳ್ಳಲು ಸೂಚಿಸಲಾಗಿದೆ. ಇನ್ನು ಕೆಲವು ಶಾಲೆಗಳು ನೆರೆಯ ಶಾಲೆಗಳಿಂದ ತೊಗರಿಬೇಳೆ ಎರವಲು ಪಡೆಯುತ್ತಿವೆ. ನೆರೆಯ ಶಾಲೆಗಳಲ್ಲಿಯೂ ತೊಗರಿಬೇಳೆ ಸಿಗದಿದ್ದಾಗ ಅಕ್ಷರ ದಾಸೋಹ ಅಧಿಕಾರಿಗಳ ಅನುಮತಿಯೊಂದಿಗೆ ಶಾಲಾ ಬಿಸಿಯೂಟ ಅನುದಾನದಲ್ಲಿ ಬೇಳೆ ಖರೀದಿಸಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಲು ಶಾಲಾ ಶಿಕ್ಷಣ ಇಲಾಖೆ ಯೋಜನೆ ಹಾಕಿಕೊಂಡಿದೆ.
ಮಾರ್ಚ್‌ನಲ್ಲಿ ಸರಬರಾಜಾಗಿ ದಾಸ್ತಾನು ಉಳಿದ ಬೇಳೆ ಒಂದೆರಡು ವಾರಗಳಿಗೆ ಮಾತ್ರ ಸಾಕಾಗುವಷ್ಟಿದೆ. ಹಾಗಾಗಿ ಸರಕಾರ ಕೂಡಲೇ ಟೆಂಡರ್ ಕರೆದು ಜೂ.15ರೊಳಗಾಗಿ ಎಲ್ಲ ಶಾಲೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ಬೇಳೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕಿದೆ.
ಬೇಳೆಗಾಗಿ ನೆರೆ ಶಾಲೆಗಳಿಗೆ ಮೊರೆ:
ಮೇ 31ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು ಪ್ರಥಮ ದಿನ ಎಲ್ಲ ಶಾಲೆಗಳಲ್ಲಿ ಸಿಹಿಯೂಟ ಮಾಡಿ, ಮಕ್ಕಳಿಗೆ ನೀಡಲು ಸಿದ್ಧತೆ ನಡೆದಿದೆ. ಒಂದೆರೆಡು ದಿನ ಪಲಾವ್, ಉಪ್ಪಿಟ್ಟು ಮಾಡಿದರೂ ಜೂ.3ರಿಂದ ನಿರಂತರ ಬಿಸಿಯೂಟ ಯಥಾ ಪ್ರಕಾರ ನಡೆಯಬೇಕಿದ್ದು, ಮುಖ್ಯ ಶಿಕ್ಷಕರು ಶಾಲಾ ಮಕ್ಕಳಿಗೆ ಬೇಕಾದ ಅಗತ್ಯ ಬೇಳೆ ಹೊಂದಿಸಿಕೊಳ್ಳಲು ನೆರೆಯ ಶಾಲೆಗಳ ಕದ ತಟ್ಟುತ್ತಿದ್ದಾರೆ.
ಬಿಸಿಯೂಟಕ್ಕಾಗಿ ಜೂನ್ ತಿಂಗಳಿನ ತೊಗರಿ ಬೇಳೆ ಇನ್ನೂ ಪೂರೈಕೆಯಾಗಿಲ್ಲ. ಈ ವಾರದಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಹಳೆಯ ದಾಸ್ತಾನು ಬಳಸಿಕೊಂಡು ಇಲ್ಲವೇ ನೆರೆಯ ಶಾಲೆಗಳಿಂದ ಬೇಳೆ ಪಡೆದು ಬಿಸಿಯೂಟ ತಯಾರಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.– ದುರ್ಗಪ್ಪ, ಅಕ್ಷರ ದಾಸೋಹ ಅಧಿಕಾರಿ, ದಾವಣಗೆರೆ
-ಎಚ್.ಕೆ. ನಟರಾಜ