Advertisement
ಕೊರೊನಾ ಲಸಿಕೆ ದಾಸ್ತಾನು ಕೊರತೆಯು ಕೇವಲ18 -44 ವರ್ಷದವರ ಲಸಿಕೆ ಆಭಿಯಾನಕ್ಕೆ ಹಿನ್ನಡೆ ಉಂಟುಮಾಡಿಲ್ಲ. ಎರಡನೇ ಡೋಸ್ ಪಡೆಯಬೇಕಿದ್ದವರಿಗೂ ಕೂಡಾ ಸಮಸ್ಯೆ ಉಂಟು ಮಾಡಿದೆ.
Related Articles
Advertisement
ಶುಕ್ರವಾರದ ಅಂತ್ಯಕ್ಕೆ ರಾಜ್ಯದಲ್ಲಿ ಮೂರು ಲಕ್ಷ ಡೋಸ್ ನಷ್ಟು ಲಸಿಕೆ ಇತ್ತು. 18 ವರ್ಷ ಮೇಲ್ಪಟ್ಟ ಲಸಿಕೆ ಅಭಿಯಾನದ ಸಾಂಕೇತಿಕ ಚಾಲಗೆ ಒಂದು ಲಕ್ಷ ಡೋಸ್ ಲಸಿಕೆ ಬಳಸಿಕೊಳ್ಳಲಾಗಿದೆ. ಬಾಕಿ ಇರುವ ಎರಡು ಲಕ್ಷ ಡೋಸ್ ಲಸಿಕೆಯು ಕೆಲ ಜಿಲ್ಲಾ ಕೇಂದ್ರಗಳಲ್ಲಿದೆ. ಇಂದಿಗೂ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಕಾಡುತ್ತಿದೆ. 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಒಂದು ಡೋಸ್ ಲಸಿಕೆಯೂ ಇಲ್ಲ.
ಮುಂದಿನ ವಾರಾಂತ್ಯ ಲಸಿಕೆ ಬರಬಹದು!
ಕೇಂದ್ರ ಸರ್ಕಾರದಿಂದ ಈ ವಾರದ ಲಸಿಕೆ ಬಂದಿದ್ದು, ಮತ್ತೆ ಮುಂದಿನ ವಾರದ ಅಂತ್ಯಕ್ಕೆ ನಾಲ್ಕರಿಂದ ಐದು ಲಕ್ಷ ಡೋಸ್ ಲಸಿಕೆ ಬರಬಹುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಎರಡನೇ ಡೋಸ್ ಗೆ ಆದ್ಯತೆ!
ಸದ್ಯ ದಾಸ್ತಾನು ಲಭ್ಯವಿರುವ ಕಡೆಗಳಲ್ಲಿ ಹೊಸಬರಿಗೆ ಅಥವಾ ಮೊದಲ ಡೋಸ್ ಪಡೆಯುವರಿಗಿಂತಲೂ ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಸಾರ್ವಜನಿಕರು ಕೂಡಾ ಎರಡನೇ ಡೋಸ್ ನವರಿಗೆ ಅವಕಾಶ ಮಾಡಿಕೊಡಬೇಕು ಎಂದು ಆರೋಗ್ಯ ಇಲಾಖೆ ಲಸಿಕೆ ವಿಭಾಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತಿಂಗಳಲ್ಲಿ 40 ಲಕ್ಷ ಮಂದಿಗೆ ಬೇಕು ಎರಡನೇ ಡೋಸ್ ಲಸಿಕೆ
ಮಾರ್ಚ್ ಮತ್ತು ಏಪ್ರಿಲ್ 15 ವರೆಗೆ ಪಡೆದವರು ಈ ತಿಂಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಬೇಕಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, 25 ಲಕ್ಷ ಹಿರಿಯರು, 15 ಲಕ್ಷ 45-59 ವರ್ಷದವರಿಗೆ ಈ ತಿಂಗಳಲ್ಲಿ ಎರಡನೇ ಡೋಸ್ ನೀಡಬೇಕಿದೆ.
ಸಮಯ ಇದೆ ಗಾಬರಿ ಬೇಡ
ಈ ಹಿಂದ 28 ದಿನ ನಂತರ ಎರಡನೇ ಡೋಸ್ ಎಂದಿತ್ತು. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಾರ ಕೋವಿಶೀಲ್ಡ್ ಪಡೆದವರು ಆರರಿಂದ ಎಂಟು ವಾರದ ಒಳಗೆ ಎರಡನೇ ಡೋಸ್ ಪಡೆಯಬೇಕು. ಆರು ವಾರ ಪೂರ್ಣಗೊಂಡವರಿಗೆ ಇನ್ನು ಸಮಯವಿದೆ. ರಾಜ್ಯದಲ್ಲಿ ಶೇ. 90 ಕ್ಕೂ ಅಧಿಕ ಕೋವಿಶೀಲ್ಡ್ ವಿತರಿಸಿಲಾಗಿದೆ. ಅನಗತ್ಯ ಗಾಬರಿ ಬೇಡ ಎಂದು ಲಸಿಕೆ ವಿಭಾಗದ ಉಪನಿರ್ದೇಶಕಿ ಡಾ.ಬಿ.ಎನ್.ರಜನಿ ತಿಳಿಸಿದ್ದಾರೆ.
ನಾಳೆ ಬಾ
ಲಸಿಕಾ ಕೇಂದ್ರಗಳಿಗೆ ತೆರಳುವವರಿಗೆ ನಾಳೆ ಬನ್ನಿ ಎಂಬ ಉತ್ತರ ಸಿಗುತ್ತಿದೆ. ಮೊದಲ ಡೋಸ್ ಪಡೆದಾಗ ಏಪ್ರಿಲ್ ಕೊನೆಯವಾರ ವಾರ ಎರಡನೇ ಡೋಸ್ ಗೆ ಬನ್ನಿ ಎಂದು ಚೀಟಿ ಬರೆದುಕೊಟ್ಟಿದ್ದರು ಬಂದರೆ ಲಸಿಕೆ ಇಲ್ಲ ಎರಡು ದಿನ ಬಿಟ್ಟು ಬನ್ನಿ ಎನ್ನುತ್ತಾರೆ. ಎರಡು ಮೂರು ಬಾರಿ ಇದೇ ಸಮಸ್ಯೆಯಾಗಿದೆ ಎಂದು ಚಾಮರಾಜಪೇಟೆಯ ಹಿರಿಯ ನಾಗರಿಕೆ ರಾಮಣ್ಣ ಬೇಸರ ವ್ಯಕ್ತಪಡಿಸಿದರು. ಬಹುತೇಕ ಜಿಲ್ಲೆಗಳಲ್ಲಿಯೂ ಇದೇ ಸ್ಥಿತಿ ಇದೆ. ಕೆಲವರು ಲಸಿಕಾ ಕೇಂದ್ರದ ಸಿಬ್ಬಂದಿಗಳ ಜತೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.
ನಾಳೆಗೆ ಲಸಿಕೆ ಖಾಲಿ
ಶನಿವಾರದ ಅಂತ್ಯಕ್ಕೆ ರಾಜ್ಯದಲ್ಲಿ ಎರಡು ಲಕ್ಷ ಡೋಸ್ ಮಾತ್ರ ಕೊರೊನಾ ಲಸಿಕೆ ದಾಸ್ತಾನು ಇತ್ತು. ಸದ್ಯ ನಿತ್ಯ ಸರಾಸರಿ ಒಂದು ಲಕ್ಷ ಡೋಸ್ ಬೇಡಿಕೆ ಇದ್ದು, ಭಾನುವಾರ ಮತ್ತು ಸೋಮವಾರ ತಲಾ ಒಂದು ಲಕ್ಷ ವಿತರಣೆಯಾದರೇ ಲಸಿಕೆ ಸಂಪೂರ್ಣ ಖಾಲಿಯಾಗಲಿದೆ.
ಜಯಪ್ರಕಾಶ್ ಬಿರಾದಾರ್