ನವದೆಹಲಿ: ದೇಶದ ಮೂರು ಸೇನಾ ಪಡೆಗಳಲ್ಲಿ ಗರಿಷ್ಠ 1.18 ಲಕ್ಷ ಹುದ್ದೆಗಳು ಖಾಲಿ ಇದ್ದು, 1.35 ಲಕ್ಷ ಸಿಬಂದಿ ಕೊರತೆ ಎದುರಿಸುತ್ತಿವೆ ಎಂದು ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ಸರಕಾರ ನೀಡಿದ ವಿವರಗಳಿಂದ ತಿಳಿದು ಬಂದಿದೆ.
ಭಾರತೀಯ ನೌಕಾಪಡೆಯಲ್ಲಿಸೆಪ್ಟೆಂಬರ್ 30 ರವರೆಗೆ 11,587 ಒಟ್ಟು ಕೊರತೆ ಎಂದು ಅಂದಾಜಿಸಲಾಗಿದೆ. ನವೆಂಬರ್ 1, 2022 ರಂತೆ ಭಾರತೀಯ ವಾಯುಪಡೆಯಲ್ಲಿ (ಏರ್‌ಮೆನ್ ಮತ್ತು ನಾನ್-ಕಾಂಬೇಟೆಂಟ್) ಖಾಲಿ ಇರುವ ಹುದ್ದೆಗಳ ಸಂಖ್ಯೆ 5,819 ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ಭಾರತೀಯ ಸೇನೆಯಲ್ಲಿ ಒಟ್ಟು 40000 (JCOs/OR )ಹುದ್ದೆಗಳಿಗಾಗಿ ಜಾಹೀರಾತು ನೀಡಲಾಗಿದೆ. ಭಾರತೀಯ ನೌಕಾಪಡೆಯಲ್ಲಿ 2022 ರಲ್ಲಿ ಅಗ್ನಿವೀರ್‌ಗಳಿಗಾಗಿ ಒಟ್ಟು 3,000 ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ. 2022 ರಲ್ಲಿ ಭಾರತೀಯ ವಾಯುಪಡೆಯಲ್ಲಿ 3,000 ಖಾಲಿ ಹುದ್ದೆಗಳನ್ನು ಅಗ್ನಿವೀರ್-ವಾಯು ಎಂದು ಪ್ರಕಟಿಸಲಾಗಿದೆ. ಅಗ್ನಿಪಥ್ ಯೋಜನೆಯಡಿ ಜವಾನರ ಮಟ್ಟದ ಎಲ್ಲಾ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ಭಟ್ ಹೇಳಿದರು.
ಎಲ್ಲಾ ಮೂರು ಸೇವೆಗಳಲ್ಲಿ ಪ್ರತಿ ವರ್ಷ ಸರಾಸರಿ 60,000 ಖಾಲಿ ಹುದ್ದೆಗಳು ಇರುತ್ತವೆ, ಅದರಲ್ಲಿ ಸರಿಸುಮಾರು 50,000 ಹುದ್ದೆಗಳು ಸೇನೆಗೆ ಸೇರಿದ್ದು, ಕೋವಿಡ್ ನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ನೇಮಕಾತಿ ರ‍್ಯಾಲಿಗಳನ್ನು ಸ್ಥಗಿತಗೊಳಿಸಿದ್ದರಿಂದ ಪ್ರಸ್ತುತ ಭಾರತೀಯ ಸೇನೆಯಲ್ಲಿ 1,08,685 ಯೋಧರ ಕೊರತೆಯಿದೆ ಎಂದು ಸಚಿವರು ಹೇಳಿದರು.
ಕೋವಿಡ್-19 ಪರಿಸ್ಥಿತಿಯಲ್ಲಿ ಸುಧಾರಣೆ ಮತ್ತು ನೇಮಕಾತಿಯ ಪ್ರಾರಂಭದೊಂದಿಗೆ, ಮುಂಬರುವ ವರ್ಷಗಳಲ್ಲಿ ಈ ಖಾಲಿ ಹುದ್ದೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಪ್ರತ್ಯೇಕ ಪ್ರಶ್ನೆಗೆ, ರಕ್ಷಣಾ ಸಚಿವಾಲಯದ ವಿವಿಧ ಸೇವೆಗಳು ಮತ್ತು ಸಂಸ್ಥೆಗಳ ನಿರ್ವಹಣೆಯಲ್ಲಿ ಸುಮಾರು 45,906 ಎಕರೆ ರಕ್ಷಣಾ ಭೂಮಿ ಪ್ರಸ್ತುತ ಖಾಲಿಯಾಗಿದೆ. ರಕ್ಷಣಾ ಏರ್‌ಫೀಲ್ಡ್ ಮೂಲಸೌಕರ್ಯವನ್ನು ಎರಡು ಹಂತಗಳಲ್ಲಿ ಆಧುನೀಕರಿಸಲು ಸರ್ಕಾರವು ಕೈಗೆತ್ತಿಕೊಂಡಿದೆ. ಹಂತ-1ರ ಅಡಿಯಲ್ಲಿ ಏರ್‌ಫೀಲ್ಡ್‌ಗಳನ್ನು ಆಧುನೀಕರಿಸಲು ಬಜೆಟ್‌ನಲ್ಲಿ 1,215.35 ಕೋಟಿ ರೂ. ಮತ್ತು ಹಂತ II 1,187.17 ಕೋಟಿ ರೂ.ಮೀಸಲಿಡಲಾಗಿದೆ ಎಂದರು.
ಏರ್ ಫೀಲ್ಡ್ ಆಧುನೀಕರಣ (MAFI) (ಹಂತ-I) 30 ಭಾರತೀಯ ವಾಯುಪಡೆಯ ಏರ್‌ಫೀಲ್ಡ್‌ಗಳ ಯೋಜನೆಯು ಈಗಾಗಲೇ ಪೂರ್ಣಗೊಂಡಿದೆ. ಇನ್ನೂ 37 ಏರ್‌ಫೀಲ್ಡ್‌ಗಳ ಆಧುನೀಕರಣಕ್ಕಾಗಿ MAFI (ಹಂತ-II) ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.